ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಸುಬ್ರಹ್ಮಣ್ಯ; ಚತುಷ್ಪಥ ರಸ್ತೆಗೆ ವಿರೋಧ

Lingaraj Badiger
Updated On : 19 Jul 2013, 12:26 pm

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿಯಿಂದ ನಡೆಸಲ್ಪಡುವ ರು. 180 ಕೋಟಿ ಸುಬ್ರಹ್ಮಣ್ಯ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ 2ನೇ ಹಂತದಲ್ಲಿ, ದೇವಳದ ಗೋಪುರದಿಂದ ಕುಮಾರಧಾರಾವರೆಗೆ ನಿರ್ಮಾಣವಾಗಲಿರುವ ಚತುಷ್ಪಥ ರಸ್ತೆ ಕಾಮಗಾರಿಗೆ ಗ್ರಾಮಸ್ಥರಿಂದ ವಿರೋಧ ವ್ಯಕ್ತವಾಗಿದೆ.
ಸುಬ್ರಹ್ಮಣ್ಯ ಗ್ರಾ.ಪಂ. ಆವರಣದಲ್ಲಿರುವ ರಾಜೀವ್ ಗಾಂಧಿ ಸೇವಾ ಕೇಂದ್ರದ ಸಭಾಭವನದಲ್ಲಿ ಇತ್ತೀಚೆಗೆ ನಡೆದ ಸುಬ್ರಹ್ಮಣ್ಯ ಗ್ರಾ.ಪಂ.ನ 2013- 14ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಯಿತು. ಉಪಾಧ್ಯಕ್ಷ ಶಿವರಾಮ ರೈ ಅಧ್ಯಕ್ಷತೆ ವಹಿಸಿದ್ದರು.
ಅಭಿವೃದ್ಧಿಗೆ ವಿರೋಧವಲ್ಲ: ಈಗಾಗಲೇ ರು. 180 ಕೋಟಿ ವೆಚ್ಚದಿಂದ ವಿವಿಧ ಕಾಮಗಾರಿ ನಡೆಸಿ ಕ್ಷೇತ್ರದ ಅಭಿವೃದ್ಧಿ ನಡೆಸಲಾಗುತ್ತಿದೆ. ಅಭಿವೃದ್ಧಿಗೆ ನಮ್ಮ ವಿರೋಧವಿಲ್ಲ. ನಮ್ಮ ಸಹಮತವಿದೆ. ಆದರೆ, ಜನಸಾಮಾನ್ಯರಿಗೆ ತೊಂದರೆಯಾದಲ್ಲಿ ನಮ್ಮ ವಿರೋಧವಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಗೋಪುರದಿಂದ ಕುಮಾರಧಾರಾವರೆಗಿನ ಯೋಜನೆಯಿಂದ 30 ಮೀ. ಅಗಲದ ರಸ್ತೆ ನಿರ್ಮಾಣವಾಗುವ ಸಂದರ್ಭ ಸುಬ್ರಹ್ಮಣ್ಯದ ಅನೇಕ ಅಂಗಡಿಗಳು, ಹೊಟೇಲ್, ಗ್ರಾ.ಪಂ.ನ ವಾಣಿಜ್ಯ ಸಂಕೀರ್ಣ ಸ್ಥಳೀಯ ಪ್ರಾಥಮಿಕ ಶಾಲೆ ಹಲವು ವಸತಿ ಗೃಹಗಳು, ನಾಗನ ಕಟ್ಟೆ, ಮನೆಗಳ ಅಂಗಳ, ಬಾವಿ ಎಲ್ಲವೂ ತೆರವು ಆಗಿ ಜನರಿಗೆ ಸಮಸ್ಯೆ ಆಗುತ್ತದೆ.
ಇದು ಜನ ವಿರೋಧಿ ಕ್ರಮವಾಗಿದ್ದು, ಈ ಬಗ್ಗೆ ಸಂಘಟಿತ ಹೋರಾಟ ಮತ್ತು ನ್ಯಾಯಾಲಯ ಮೊರೆ ಹೋಗುವ ಮೂಲಕ ಕಾನೂನಿನ ಹೋರಾಟ ನಡೆಸುವ ಬಗ್ಗೆ ಜನಾಭಿಪ್ರಾಯ ವ್ಯಕ್ತವಾಗಿ ಈ ಬಗ್ಗೆ ಸರ್ವಾನುಮತದ ನಿರ್ಣಯ ಮಾಡಲಾಯಿತು.
ತೆರಿಗೆ ಪಾವತಿ ಮಾಹಿತಿ ನೀಡಿ:  ದೇವಳದ ಕಟ್ಟಡಗಳಿಂದ ವಾರ್ಷಿಕ ಎಷ್ಟು ತೆರಿಗೆ ಬರುತ್ತದೆ, ದೇವಸ್ಥಾನದವರು ಎಷ್ಟು ತೆರಿಗೆ ಪಾವತಿಸುತ್ತಾರೆ ಎಂದು ಅಶೋಕ್ ನೆಕ್ರಾಜೆ ಪ್ರಶ್ನಿಸಿದರು.
ದೇವಳದ ಹಲವು ಕಟ್ಟಡಗಳ ತೆರಿಗೆ ಪಾವತಿಯಾಗುತ್ತಿದೆ. ಆದರೆ, ಆಶ್ಲೇಷ ವಸತಿ ಗೃಹದ ತೆರಿಗೆ ಬಾಕಿ ಇದೆ. ಈ ಬಗ್ಗೆ ಪಂಚಾಯಿತಿ ಹೈಕೋರ್ಟ್ ಮೆಟ್ಟಿಲೇರಿದೆ ಎಂದು ಶಿವರಾಮ ಉತ್ತರಿಸಿದರು. ಪ್ರತಿ ಮಳೆಗಾಲ ಮುಳುಗಡೆಯಾಗುತ್ತಿರುವ ಕುಮಾರಧಾರಾ ಸೇತುವೆ ಮೇಲ್ದರ್ಜೆಗೇರಿಸುವಂತೆ ಮುರಳಿಕೃಷ್ಣ ಕಾಮತ್ ಪ್ರಸ್ತಾಪಿಸಿದರು.
ಈ ಸೇತುವೆ ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಬರುತ್ತದೆ. ಪಂಚಾಯಿತಿ ವ್ಯಾಪ್ತಿಗೆ ಬರುವುದಿಲ್ಲ ಎಂದು ಶಿವರಾಮ ರೈ ಉತ್ತರಿಸಿದರು.
ಸುಬ್ರಹ್ಮಣ್ಯದ ಎಲ್ಲೆಡೆ ಕಾಂಕ್ರಿಟ್ ರಸ್ತೆಗಳಾಗುತ್ತಿರುವುದರಿಂದ ಹಾವುಗಳ ಸಂತತಿ ಕಡಿಮೆಯಾಗಿ ಇಲಿಗಳ ಸಂಖ್ಯೆ ಏರುತ್ತಿರುವ ಬಗ್ಗೆ ಪಂಚಾಯಿತಿ ಸದಸ್ಯ ನಾರಾಯಣ ಆಗ್ರಹಾರ ಸಭೆಯಲ್ಲಿ ಪ್ರಸ್ತಾಪಿಸಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೋನಪ್ಪ ಡಿ. ವರದಿ ವಾಚಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement