ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕಳವು, ಡಕಾಯಿತಿ ಅಂತಾರಾಜ್ಯ ತಂಡ ಸೆರೆ

Lingaraj Badiger
Updated On : 20 Jul 2013, 12:17 pm

ಮಂಗಳೂರು: ದ.ಕ. ಉಡುಪಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಚಿನ್ನಾಭರಣ, ಪ್ರಾಚೀನ ವಿಗ್ರಹ ಕಳವು, ಡಕಾಯಿತಿ ನಡೆಸುತ್ತಿದ್ದ ಅಂತಾರಾಜ್ಯ 7 ಮಂದಿ ಖದೀಮರ ತಂಡವನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಒಂದು ವಾರ ಕಾಲ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಂಧಿತರಿಂದ ಕಳವು ಮಾಡಿದ ರು. 17 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಲಾಗಿದೆ.
 ಈ ಕುರಿತು ಜಿಲ್ಲಾ ಎಸ್ಪಿ ಅಭಿಷೇಕ್ ಗೋಯಲ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು. ಆರೋಪಿಗಳಾದ ಚಿಕ್ಕಮಗಳೂರು ಕೆರೆ ಕಡೂರಿನ ತಿಮ್ಮಯ್ಯ ಯಾನೆ ತಿಮ್ಮ(55), ಹಾಸನ ಅರಸೀಕೆರೆ ಹಾರ್ನಳ್ಳಿ ಬೆತ್ತವತ್ತಳ್ಳಿಯ ಸೋಮನಾಥ ಯಾನೆ ಸೋಮೇಶ ಯಾನೆ ಕುಳ್ಳ(45), ಹಾಸನ ಕುವೆಂಪು ನಗರದ ಜಯರಾಜ್ ಸ್ವಾಮಿ(45), ಹಾಸನ ಕಳ್ಳಹಳ್ಳಿಯ ಗಂಗ ಯಾನೆ ಗಂಗರಾಜ್(40), ಶಿವಮೊಗ್ಗ ಕಡೆಕಲ್ಲು ಮತ್ತೂರಿನ ನೇತ್ರಾ ಯಾನೆ ನೇತ್ರಾವತಿ ಯಾನೆ ನೇತ್ರಮ್ಮ(38), ಬೆಳ್ತಂಗಡಿ ಕನ್ಯಾಡಿಯ ಬಾಬು ಯಾನೆ ರುದ್ರ ಯಾನೆ ರಾಜೇಶ(55) ಮತ್ತು ಶಿವಮೊಗ್ಗದ ರಾಜೇಂದ್ರ(65) ಬಂಧಿತರು. ವಿವಿಧ ಕಳವು ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಿಂದ 18 ಗ್ರಾಂ ಚಿನ್ನ, 20 ಕಿಲೋ ಬೆಳ್ಳಿ, 2 ಕಾರು ಸೇರಿದಂತೆ ಒಟ್ಟು ರು. 17 ಲಕ್ಷ ಮೌಲ್ಯದ ಸೊತ್ತು ವಶಪಡಿಸಲಾಗಿದೆ. ಇದರ ಜತೆಗೆ ಬೆಳ್ತಂಗಡಿ ಬಂಗಾಡಿ ಚತುರ್ವಂಶಕ ಹಾಗೂ ಪದ್ಮ ತೀರ್ಥಂಕರ ಬಸದಿಯ 4 ಪಂಚಲೋಹ ವಿಗ್ರಹ ವಶಪಡಿಸಲಾಗಿದ್ದು, ಅದರ ಮೌಲ್ಯ ಅಂದಾಜಿಸಲು ಪುರಾತತ್ವ ಇಲಾಖೆಯನ್ನು ಕೋರಲಾಗಿದೆ. ಆದರೆ ಇವರಿಗೂ ಒಡಿಶಾದಲ್ಲಿ ಬಂಧಿತ ಮೂಡುಬಿದಿರೆ ವಿಗ್ರಹ ಚೋರರಿಗೂ ಯಾವುದೇ ಸಂಪರ್ಕ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
6 ಕಳ್ಳತನ ಪ್ರಕರಣ ಪತ್ತೆ: ಏಪ್ರೀಲ್‌ನಿಂದ ಜೂನ್‌ವರೆಗೆ ಜಿಲ್ಲೆಯ ವಿವಿಧ ಕಡೆಗಳಲ್ಲಿ ನಡೆದ ಕಳ್ಳತನ ಪೈಕಿ 6 ಪ್ರಕರಣದಲ್ಲಿ ಈ ಆರೋಪಿಗಳು ಭಾಗಿಯಾಗಿರುವುದು ಪತ್ತೆಯಾಗಿದೆ. ಬಂಟ್ವಾಳ ಬ್ರಹ್ಮರಕೂಟ್ಲು ಶ್ರೀರಾಮ ಮಂದಿರ, ಬಂಟ್ವಾಳ ಚಂಡಿಕಾ ಪರಮೇಶ್ವರಿ ದೇವಸ್ಥಾನ, ಬೆಳ್ತಂಗಡಿ ಬಂಗಾಡಿ ಬಸದಿ, ಪುಂಜಾಲಕಟ್ಟೆ ಬಳ್ಳಮಂಜ ಶ್ರೀಅನಂತೇಶ್ವರ ದೇವಸ್ಥಾನ, ಸುಳ್ಯ ಶ್ರೀಜಲದುರ್ಗಾ ದೇವಸ್ಥಾನ ಹಾಗೂ ಉತ್ತರ ಕನ್ನಡ ಮರವಂತೆ ಶ್ರೀವರಾಹ ದೈವಸ್ಥಾನದ ಕಳವು ಪ್ರಕರಣದ ಆರೋಪಿಗಳು ಇವರಾಗಿದ್ದಾರೆ.
 ಬಂಟ್ವಾಳ ಸರ್ಕಲ್ ಇನ್ಸ್‌ಪೆಕ್ಟರ್ ಸದಾನಂದ ವರ್ಣೇಕರ್ ನೇತೃತ್ವದ ವಿಶೇಷ ತನಿಖಾ ತಂಡ ಜು.12 ಮತ್ತು 13ರಂದು ಬಂಧಿಸಿ ವಿಚಾರಣೆ ನಡೆಸಿದಾಗ ಕಳವು ಕೃತ್ಯ ಬಯಲಿಗೆ ಬಂದಿದೆ.
ಕಾರ್ಯಾಚರಣೆ ಬಗೆ: ಉಪ್ಪಿನಂಗಡಿ ಎಸ್‌ಐ ರವಿ, ಸಿಬ್ಬಂದಿ ಜತೆ ವಾಹನ ತಪಾಸಣೆ ವೇಳೆ ನೆಕ್ಕಿಲಾಡಿಯಲ್ಲಿ ಪೊಲೀಸರ ಸೂಚನೆ ಉಲ್ಲಂಘಿಸಿ ಟಾಟಾ ಇಂಡಿಕಾ ಕಾರು ಪರಾರಿಯಾಗಿತ್ತು. ಬೆಳ್ತಂಗಡಿ ಕಡೆ ಪರಾರಿಯಾದ ಕಾರನ್ನು ಪುಂಜಾಲಕಟ್ಟೆ ಪೊಲೀಸರ ಕೈಗೆ ಸಿಗದೇ ಬಂಟ್ವಾಳದತ್ತ ಹೋಗುತ್ತಿದ್ದಾಗ ಬಂಟ್ವಾಳ ಗ್ರಾಮಾಂತರ ಠಾಣಾ ಎಸ್‌ಐ ಮಹೇಶ್ ಪ್ರಸಾದ್, ಸಿಬ್ಬಂದಿ ವಾಹನ ತಡೆದು ನಿಲ್ಲಿಸಿ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡರು.
ಮದುವೆ ಬ್ರೋಕರ್ ಕಳ್ಳ: ಬಂಧಿತರ ಮುಖಂಡ ಜಯರಾಜ್ ಸ್ವಾಮಿ. ಈತ ವಾಹನ ಚಾಲಕನಾಗಿದ್ದು, ಮದುವೆ ಬ್ರೋಕರ್ ಕೆಲಸ ಮಾಡುತ್ತಿದ್ದ. ಈತನ ವಿರುದ್ಧ ಇದೇ ಮೊದಲ ಬಾರಿಗೆ ಪ್ರಕರಣ ದಾಖಲಾಗುತ್ತಿದೆ. ಬಂಧಿತರ ಪೈಕಿ ತಿಮ್ಮಯ್ಯ ಮತ್ತು ಸೋಮನಾಥ ವಿರುದ್ಧ ಮಂಡ್ಯ ಕೆ.ಆರ್. ಪೇಟೆ, ಅರಸೀಕೆರೆ ಎಚ್.ಎನ್.ಪುರ, ಅರಕಲಗೂಡು, ಗುಬ್ಬಿ ಠಾಣೆಗಳಲ್ಲಿ ಕಳ್ಳತನ ಪ್ರಕರಣ ದಾಖಲಾಗಿತ್ತು.
ಕಳ್ಳತನಕ್ಕೆ ಬಳಸಿದ ಕಾರಿನಲ್ಲಿ ಲಾಂಗ್, ಕಬ್ಬಿಣದ ಹರಿತವಾದ ಸಲಾಕೆ, ಕಬ್ಬಿಣದ ರಾಡ್, ಎಕ್ಸೆಲ್ ಕಟ್ಟರ್, ಸ್ಕ್ರೂಡ್ರೈವರ್ ಸಿಕ್ಕಿದೆ. ಕಾರಿನ ಡ್ಯಾಶ್ ಬೋರ್ಡ್‌ನಲ್ಲಿ ಮೆಣಿಸಿನ ಪುಡಿ ಕೂಡ ಸಿಕ್ಕಿದ್ದು, ದೇವಸ್ಥಾನ ಹಾಗೂ ಮನೆಗಳಲ್ಲಿ ಕಳ್ಳತನ ಮಾಡುವಾಗ ಯಾರಾದರೂ ತಡೆದಲ್ಲಿ ಅವರ ಮೇಲೆ ಹಲ್ಲೆ ನಡೆಸುವ ಮತ್ತು ದರೋಡೆ ಮಾಡಲು ಈ ಪರಿಕರಗಳನ್ನು ಇಟ್ಟುಕೊಂಡಿದ್ದರು. ಇಂಡಿಕಾ ಕಾರಿಗೆ ನಕಲಿ ನಂಬರು ಪ್ಲೇಟ್ ಅಳವಡಿಸಿದ್ದರು.
ಯಾತ್ರಿಕರ ಸೋಗು: ಆರೋಪಿಗಳು ಕಳ್ಳತನಕ್ಕೆ ಬಳಸಿದ ಓಮ್ನಿ ಕಾರನ್ನು ಹಾಸನ ಬಳಿ ಪೊಲೀಸರು ತಪಾಸಣೆ ಮಾಡಿದಾಗ, ನಾವು ಯಾತ್ರೆಗೆ ಹೊರಟವರೆಂದು ಹೇಳಿ ಪೊಲೀಸರನ್ನು ಹಾದಿ ತಪ್ಪಿಸುತ್ತಿದ್ದರು. ಪೊಲೀಸರನ್ನು ನಂಬಿಸಲು ಕಾರಿನಲ್ಲಿ ಮಹಿಳೆ(ನೇತ್ರಾ)ಯನ್ನು ಕರೆದೊಯ್ಯುತ್ತಿದ್ದರು.
 ಕನ್ಯಾಡಿಯ ಬಾಬು ಉಪ್ಪಿನಂಗಡಿಯಲ್ಲಿ ವಾಸವಿದ್ದು, ಜಿಲ್ಲೆಯ ಪ್ರಮುಖ ದೇವಸ್ಥಾನಗಳನ್ನು ಉಳಿದವರಿಗೆ ಹಗಲು ತೋರಿಸಿ ರಾತ್ರಿ ಕಳ್ಳತನಕ್ಕೆ ಸ್ಕೆಚ್ ಹಾಕಿ ಕೊಡುತ್ತಿದ್ದನು. ಮೊದಲು ಇದನ್ನು ಸ್ಥಳೀಯ ಗ್ಯಾಂಗ್‌ನ ಕೃತ್ಯವೆಂದು ಪೊಲೀಸರು ನಂಬಿದ್ದರು. ಬಾಬು ಮತ್ತು ರಾಜೇಂದ್ರ ಬಹಳ ಹಿಂದೆ ಶಿವಮೊಗ್ಗದ ಕಳ್ಳತನ ತಂಡದೊಂದಿಗೆ ಬೆಳ್ತಂಗಡಿ ನ್ಯಾಯಾಲಯದ ದಾಸ್ತಾನು ಕೊಠಡಿಯಿಂದ ಗಂಧದ ಕೊರಡನ್ನು ಕದ್ದು ದಸ್ತಗಿರಿಯಾಗಿದ್ದನು.
 ಉಪ್ಪಿನಂಗಡಿ ಬಾಬು ಮನೆಯಲ್ಲಿ ಬಂಗಾಡಿ ವಿಗ್ರಹ ಪತ್ತೆಯಾಗಿತ್ತು. ಉಳಿದ ವಿಗ್ರಹ ಜಯರಾಜ್‌ನಿಂದ ವಶಪಡಿಸಲಾಗಿದೆ. ನಂತರ ಎಲ್ಲ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿದ್ದರು. ನೇತ್ರಾಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಕರಗಿಸಿ ಗಟ್ಟಿ ಮಾಡಿಸುತ್ತಿದ್ದರು: ಕುವೆಂಪು ನಗರದ ಶಕ್ತಿ ಗಣಪತಿ ದೇವಸ್ಥಾನದ ಜೀರ್ಣೋದ್ಧಾರ ನೆಪದಲ್ಲಿ ಶಿವಮೊಗ್ಗದ ಚಿನ್ನ ಹಾಗೂ ಬೆಳ್ಳಿ ವ್ಯಾಪಾರಿಗಳಿಗೆ ದೇವಸ್ಥಾನಗಳಿಂದ ತಂದ ಆಭರಣ ಎಂದು ಹೇಳಿ ಕರಗಿಸಲು ನೀಡಿ ಗಟ್ಟಿ ಮಾಡಿಸಿದ ಆಭರಣಗಳನ್ನು ವಶಪಡಿಸಲಾಗಿದೆ. ಆರೋಪಿ ರಾಜೇಂದ್ರನ ಮನೆಯಿಂದಲೂ ಬೆಳ್ಳಿ ಗಟ್ಟಿ ವಶಪಡಿಸಲಾಗಿದೆ. ಈ ಕೃತ್ಯಕ್ಕೆ ಜಯರಾಜ್ ಸಹಕಾರ ನೀಡುತ್ತಿದ್ದನು.
 ಬಂಟ್ವಾಳ ರಾಮ ಭಜನಾ ಮಂದಿರದಿಂದ ಕದ್ದ ಒಂದೂಕಾಲು ಕಿಲೋ ಬೆಳ್ಳಿ, ಚಂಡಿಕಾ ಪರಮೇಶ್ವರಿ ದೇವಸ್ಥಾನದಿಂದ ಕದ್ದ ನಾಲ್ಕೂವರೆ ಕಿಲೋ ಬೆಳ್ಳಿ ಗಟ್ಟಿ, ವರಾಹ ದೈವಸ್ಥಾನದಿಂದ ಕದ್ದ ಬೆಳ್ಳಿಯ ಬಾಗಿಲು ಪಟ್ಟಿ ಕರಗಿಸಿ ತಯಾರಿಸಿದ 5 ಕಿಲೋ ಬೆಳ್ಳಿ ಗಟ್ಟಿ, ಜಲದುರ್ಗಾ ದೇವಸ್ಥಾನದಿಂದ ಕದ್ದ ಬೆಳ್ಳಿ ಕವಳಿಗೆ ಮತ್ತು ಸೌಟು. ಅನಂತೇಶ್ವರ ದೇವಸ್ಥಾನದ ಪ್ರಭಾವಳಿ, ಬೆಳ್ಳಿ ಆಭರಣ, ಕರಗಿಸಿದ ಬೆಳ್ಳಿಯಲ್ಲಿ 350 ಗ್ರಾಂ ಬೆಳ್ಳಿ ಗಟ್ಟಿ ವಶಪಡಿಸಲಾಗಿದೆ.   ಆರೋಪಿ ಸೋಮನಾಥ, ಗಂಗರಾಜ್, ತಿಮ್ಮಯ ಇವರು ದೇವಸ್ಥಾನಗಳ ಒಳಗೆ ನುಗ್ಗಿ ಕಳ್ಳತನ ಮಾಡಿದರೆ, ಬಾಬು, ರಾಜೇಂದ್ರ ಕಾವಲು ಕಾಯುತ್ತಿದ್ದರು. ಕಳ್ಳತನ ನಂತರ ಎಲ್ಲರನ್ನೂ ಕಳವು ಮಾಡಿದ ಸೊತ್ತುಗಳೊಂದಿಗೆ ಕಾರಿನಲ್ಲಿ ಪರಾರಿಯಾಗುತ್ತಿದ್ದರು. ಆರೋಪಿ ತಿಮ್ಮಯ್ಯ ಕಡೂರಿನಲ್ಲಿ ರಾಜಕೀಯ ಪಕ್ಷವೊಂದರಲ್ಲಿ ಗುರ್ತಿಸಿಕೊಂಡಿದ್ದು, ಈತನ ಪತ್ನಿ ಎರದಕೆರೆ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷೆ. ಆರೋಪಿ ಬಾಬು ಇಚ್ಲಂಪಾಡಿ ಸಂತ ಥೋಮಸ್ ಕ್ಯಾಥೋಲಿಕ್ ಚರ್ಚ್‌ನ ಕಾಣಿಕೆ ಡಬ್ಬಿ ಕಳವು ಮಾಡಿದ್ದನು. ಬಂಟ್ವಾಳ ಗ್ರಾಮಾಂತರ ಠಾಣಾ ಎಸ್‌ಐ ಮಹೇಶ್ ಪ್ರಸಾದ್ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
 ಕಳ್ಳತನ ಜಾಲ ಪತ್ತೆಹಚ್ಚಲು ಶ್ರಮಿಸಿದ ಪೊಲೀಸ್ ತಂಡಕ್ಕೆ ಬಹುಮಾನ ಶಿಫಾರಸ್ಸು ಮಾಡಲಾಗಿದೆ ಎಂದು ಗೋಯಲ್ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement