ಕೊಳ್ನಾಡಿನಲ್ಲಿ ಬಾಲಕಿ ಮೇಲೆ ಮಂಗ ದಾಳಿ
ವಿಟ್ಲ: ಕೊಳ್ನಾಡು ಗ್ರಾಮದ ಬಾರೆಬೆಟ್ಟು ಮತ್ತು ಮುಂಡತ್ತಜೆ ಪರಿಸರದಲ್ಲಿ ಮಂಗನ ಕಾಟ ಮಿತಿಮೀರಿದ್ದು ಶುಕ್ರವಾರ ಬಾಲಕಿಯೊಬ್ಬಳ ಮೇಲೆ ಏಕಾಏಕಿ ದಾಳಿ ಮಾಡಿ ಹಲ್ಲೆ ನಡೆಸಿದೆ. ಇದಲ್ಲದೆ ಕಳೆದ ಕೆಲವು ದಿನಗಳಲ್ಲಿ ಇದೇ ಪರಿಸರದ ಮೂವರು ಮಹಿಳೆಯರು ಮತ್ತು ನಾಲ್ಕು ಮಕ್ಕಳನ್ನು ಗಾಯಗೊಳಿಸಿದೆ. ಎರಡು ವರ್ಷಗಳ ಹಿಂದೆ ಈ ಪ್ರದೇಶಕ್ಕೆ ಬಂದಿದ್ದ ಎರಡು ಮಂಗಗಳಿಗೆ ಪರಿಸರದ ಎಲ್ಲ ಮನೆಗಳಲ್ಲೂ ಆಹಾರ ನೀಡುತ್ತಿದ್ದರು. ಕಳೆದ ಕೆಲ ತಿಂಗಳ ಹಿಂದೆ ಒಂದು ಮಂಗನನ್ನು ಕೊಂದಿದ್ದರು. ಪರಿಣಾಮ ಗಂಡು ಮಂಗ ಏಕಾಂಗಿಯಾಯಿತು. ಇದು ಇಲ್ಲಿನವರಿಗೆ ಕೀಟಲೆ, ಚೇಷ್ಟೆಗಳನ್ನು ಆರಂಭಿಸಿತು. ಪುರುಷರು ಮನೆಯಿಂದ ಹೊರಬಿದ್ದ ಬಳಿಕ, ಮನೆಯೊಳಗೆ ಆಗಮಿಸಿ, ಬಕೆಟ್, ಪಾತ್ರೆ ಸಾಮಾನುಗಳನ್ನು ತೆಗೆದುಕೊಂಡು ಅದನ್ನು ಈ ಮಂಗ ಹಾನಿ ಮಾಡುತ್ತಿದ್ದುದು ಸಾಮಾನ್ಯವಾಗಿತ್ತು. ಜತೆಗೆ ಕೆಲವು ಮಹಿಳೆಯರಿಗೂ ಪರಚುವುದನ್ನು ರೂಢಿಮಾಡಿಕೊಂಡಿತ್ತು. ಕೆಳಗಿನ ಬಾರೆಬೆಟ್ಟು ಅಲೀಮ, ಅವರ ಪುತ್ರಿ ಮತ್ತು ಶುಕ್ರವಾರ ಮೊಮ್ಮಗಳಿಗೂ ಕಚ್ಚಿದ ಈ ಮಂಗನ ಕಾಟವನ್ನು ಸಹಿಸಲಾಗದ ಪರಿಸ್ಥಿತಿ ಉಂಟಾಗಿದೆ. ಸಂಬಂಧಪಟ್ಟ ಇಲಾಖೆಯವರು ಇದನ್ನು ಹಿಡಿದು ಮೃಗಾಲಯಕ್ಕೆ ಹಾಕಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.