ಬ್ಯಾಟರಿ ಸಿಡಿದು ಮುಖಕ್ಕೆ ಗಾಯ
ಸುಳ್ಯ: ರಿಚಾರ್ಜೇಬಲ್ ಲೈಟ್ನ ಬ್ಯಾಟಿರಿಯಲ್ಲಿ ಚಾರ್ಜ್ ಇದೆಯೇ ಎಂದು ಪರೀಕ್ಷಿಸುವ ಸಂದರ್ಭ ಬ್ಯಾಟರಿ ಸಿಡಿದು ಕೂಲಿ ಕಾರ್ಮಿಕರೊಬ್ಬರು ಮುಖಕ್ಕೆ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ ಘಟನೆ ಕಲ್ಮಡ್ಕದಲ್ಲಿ ನಡೆದಿದೆ. ಕಲ್ಮಡ್ಕದ ರಾಮ ಎಂಬವರ ಪುತ್ರ ಕೃಷ್ಣ (17) ಮುಖಕ್ಕೆ ಗಾಯಗೊಂಡು ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೃಷ್ಣ ಯಾವುದೇ ಎಲೆಕ್ಟ್ರಾನಿಕ್ ವಸ್ತು ಸಿಕ್ಕಿದರೂ ಅದನ್ನು ಬಿಚ್ಚಿ ಪರೀಕ್ಷಿಸುವ ಹವ್ಯಾಸ ಹೊಂದಿದ್ದರು. ಅವರ ಮನೆಗೆ ವಿದ್ಯುತ್ ಸಂಪರ್ಕವಿಲ್ಲ. ರಸ್ತೆಯಲ್ಲಿ ಬಿದ್ದು ಸಿಕ್ಕಿದ ಬ್ಯಾಟರಿಯನ್ನು ಅವರು ನಾಲಗೆಗೆ ಮುಟ್ಟಿಸಿ ಅದರಲ್ಲಿ ಚಾರ್ಜ್ ಇದೆಯಾ ಎಂದು ಪರೀಕ್ಷಿಸುವ ವೇಳೆ ಅದು ಸ್ಫೋಟಗೊಂಡಿದೆ. ಸ್ಫೋಟದಿಂದ ಅವರ ಬಾಯಿ ಬೆಂದು ಹೋಗಿದ್ದು, ಮೂಗಿನ ಮೂಲಕ ದ್ರವ ಆಹಾರವನ್ನು ನೀಡಲಾಗುತ್ತಿದೆ.