ಸತತ ಮಳೆ; ಕುಮಾರಧಾರ ಸೇತುವೆ ಮುಳುಗಡೆ
ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಸುತ್ತಮುತ್ತ ಸುರಿದ ಮಳೆ ಹಾಗೂ ಘಟ್ಟದ ಮೇಲೆ ಸುರಿದ ಭಾರಿ ಮಳೆಯಿಂದ ಕುಮಾರಧಾರೆ ನದಿ ತುಂಬಿ ಹರಿಯುತ್ತಿದ್ದು, ಶುಕ್ರವಾರ ಸಂಜೆ ವೇಳೆಗೆ ಸೇತುವೆ ಮುಳುಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಗುರುವಾರ ಸಂಜೆಯಿಂದಲೇ ಈ ಪರಿಸರದಲ್ಲಿ ಜಿಟಿಜಿಟಿ ನಿರಂತರ ಮಳೆ ಸುರಿಯುತ್ತಿದ್ದು, ಶುಕ್ರವಾರವೂ ಮುಂದುವರಿದಿದೆ. ಪರಿಣಾಮ ಈ ಮಳೆಗಾಲದಲ್ಲಿ, ಶುಕ್ರವಾರ ಸಂಜೆ 3.20ರ ವೇಳೆಗೆ ಕುಮಾರಧಾರ ಸೇತುವೆ ನಾಲ್ಕನೇ ಬಾರಿಗೆ ಮುಳುಗಡೆಯಾಯಿತು.
ಯಾತ್ರಿಗಳು, ವಿದ್ಯಾರ್ಥಿಗಳಿಗೆ ಸಮಸ್ಯೆ: ಏಕಾದಶಿಯ ದಿನವಾದ್ದರಿಂದ ಕ್ಷೇತ್ರಕ್ಕೆ ಬಂದ ಭಕ್ತರ ಸಂಖ್ಯೆ ಕಡಿಮೆ ಇತ್ತು. ಈ ಮಧ್ಯೆ ಬೆಂಗಳೂರು, ಮಂಗಳೂರು, ಧರ್ಮಸ್ಥಳ, ಕಡಬ, ಉಪ್ಪಿನಂಗಡಿ, ನೆಟ್ಟಣ, ಗುಂಡ್ಯ ಕಡೆಯಿಂದ ಬಂದಿದ್ದ ಯಾತ್ರಾರ್ಥಿಗಳು ಸಂಕಷ್ಟಕ್ಕೆ ಒಳಗಾಗಿದ್ದರು.
ಸಂಜೆಯ ಹೊತ್ತು ಶಾಲಾ ಬಿಡುವಿನ ವೇಳೆ ಮುಳುಗಡೆಯಾಗಿದ್ದರಿಂದ ಹೆಚ್ಚಿನ ವಿದ್ಯಾರ್ಥಿಗಳು ತೊಂದರೆಗೆ ಒಳಗಾದರು. ಉಳಿದಂತೆ, ಜನಸಾಮಾನ್ಯರಿಗೆ ಸಂಚಾರಕ್ಕೆ ಅನಾನುಕೂಲ ಉಂಟಾಗಿ ಸೇತುವೆ 2 ಬದಿ ತಾಸುಗಟ್ಟಲೆ ಕಾಯುವ ಸ್ಥಿತಿ ನಿರ್ಮಾಣವಾಯಿತು.
ಸುಳ್ಯ ಶಾಸಕ ಎಸ್. ಅಂಗಾರ ಜನರ ಸಮಸ್ಯೆಗೆ ಸ್ಪಂದಿಸಿ ಪುತ್ತೂರು ಕೆಎಸ್‌ಆರ್‌ಟಿಸಿ ಡಿಪೋ ವ್ಯವಸ್ಥಾಪಕರಿಗೆ ಕರೆ ಮಾಡಿ ಮಾತನಾಡಿ, ಸುಬ್ರಹ್ಮಣ್ಯದಿಂದ ಶಾಲಾ ವಿದ್ಯಾರ್ಥಿಗಳು ಹಾಗೂ ನಾಗರಿಕರ ಅನುಕೂಲವಾಗುವಂತೆ ಸುಬ್ರಹ್ಮಣ್ಯದಿಂದ ಪಂಜ ಮಾರ್ಗವಾಗಿ ಕಡಬಕ್ಕೆ ಹೋಗಲು ಬಸ್ ವ್ಯವಸ್ಥೆ ಮಾಡಿದರು.
ವಿದ್ಯುತ್ ಕಡಿತ: ಸತತ ಮಳೆಯಿಂದ ಸುಬ್ರಹ್ಮಣ್ಯ ಸೇರಿದಂತೆ ಅಸುಪಾಸಿನ ಭಾಗಗಳಲ್ಲಿ ವಿದ್ಯುತ್ ಕೈಕೊಟ್ಟದೆ. ಕಳೆದ 2 ದಿನಗಳಿಂದ ಆಗಾಗೆ ಕೆಲವು ತಾಸುಗಳವರೆಗೆ ವಿದ್ಯುತ್ ಕಣ್ಣಾಮುಚ್ಚಾಲೆ ಆಡುತ್ತಿದ್ದು, ಸುಬ್ರಹ್ಮಣ್ಯದಲ್ಲಿ ಶುಕ್ರವಾರ ಮಧ್ಯಾಹ್ನದಿಂದಲೇ ಕರೆಂಟು ಇಲ್ಲದೆ ಜನಸಾಮಾನ್ಯರು, ಭಕ್ತಾದಿಗಳು ತೊಂದರೆಗೊಳಗಾದರು.
ಮರ ಉರುಳಿ ಹಾನಿ: ಗ್ರಾಮಾಂತರ ಪ್ರದೇಶಗಳಲ್ಲೂ ವಿದ್ಯುತ್ ವ್ಯತ್ಯಯ ಗಂಭೀರ ಸ್ವರೂಪ ಪಡೆದುಕೊಂಡಿದ್ದು ಐನೆಕಿದು -ಕೆದಿಲ ಎಂಬಲ್ಲಿ ಗುರುವಾರ ರಾತ್ರಿ ಮರವೊಂದು ರಸ್ತೆಗೆ ಉರುಳಿ ಬಿದ್ದು ವಿದ್ಯುತ್ ಪರಿವರ್ತಕಕ್ಕೆ ಹಾನಿಯಾಗಿದೆ. 4 ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, 5- 6 ಕಂಬಗಳು ಭಾಗಶಃ ಹಾನಿಯಾಗಿದೆ. ತಂತಿಗಳು ನೆಲದಲ್ಲಿ ನೇತಾಡುತ್ತಿದ್ದು ಸಂಪರ್ಕ ಕಡಿತಗೊಂಡಿದೆ. ಈ ಜಾಗ ಕಾಡಾನೆಗಳ ಹಾವಳಿಯ ಪ್ರದೇಶವಾದ್ದರಿಂದ ಬೆರಳೆಣಿಕೆಯ ಸಿಬ್ಬಂದಿ ಘಟನಾ ಸ್ಥಳಕ್ಕೆ ತೆರಳಲು ಭಯ ಪಡುತ್ತಿದ್ದಾರೆ.
ಮೆಸ್ಕಾಂ ಗಸ್ತು ವಾಹನ ನಾಪತ್ತೆ: ಕೊಲ್ಲಮೊಗ್ರ, ಬಾಳುಗೋಡು, ಮುಳ್ಳುಬಾಗಿಲು, ದೇವಚಳ್ಳ ಭಾಗಗಳಿಗೆ ಸಂಪರ್ಕ ಕಲ್ಪಿಸುವ ವಿದ್ಯುತ್ ತಂತಿಗಳ ಮೇಲೆ ಅಲ್ಲಲ್ಲಿ ಮರ ಕೊಂಬೆಗಳು ಬಿದ್ದು ಸಂಪರ್ಕ ಕಡಿತವಾಗಿದೆ. ಸೀಮಿತ ಸಂಖ್ಯೆ ಸಿಬ್ಬಂದಿ ಹರಸಾಹಸ ಪಟ್ಟು ಹಗಲಿರುಳು ಎನ್ನದೆ ದುರಸ್ತಿ ಕಾರ್ಯದಲ್ಲಿ ತೊಡಗಿದ್ದಾರೆ.
ಕಾಡಾನೆಗಳ ಉಪಟಳ ಭಾಗವಾದ್ದರಿಂದ ರಾತ್ರಿ ಹೊತ್ತು ಮೆಸ್ಕಾಂ ಸಿಬ್ಬಂದಿ ಕಾರ್ಯನಿರ್ವಹಿಸಲು ಭಯಪಡುತ್ತಿದ್ದಾರೆ.
ಕೆಲವು ದಿನಗಳ ಹಿಂದೆ ಇಲಾಖೆಯಿಂದ ರಾತ್ರಿ ಗಸ್ತು ವಾಹನ ಸಿಬ್ಬಂದಿಗೆ ಒದಗಿಸಲಾಗಿದ್ದು, 1 ವಾರ ಮಾತ್ರ ಕಾರ್ಯನಿರ್ವಹಿಸಿದ ಈ ವಾಹನ ಇದೀಗ ಕಣ್ಮರೆಯಾಗಿದೆ.
ಇದರಿಂದ ಮೆಸ್ಕಾಂ ಸಿಬ್ಬಂದಿಗೆ ಈಗ ತುರ್ತು ದುರಸ್ತಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಈ ಸೇವೆಯನ್ನು ಕಾಡಾನೆ ಹಾವಳಿ ಪ್ರದೇಶವಾದ ಈ ಭಾಗಕ್ಕೆ ತಕ್ಷಣ ಒದಗಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಧಾರಾಕಾರ ಮಳೆಗೆ ಸುಳ್ಯ ತತ್ತರ
ಸುಳ್ಯ: ಸುಳ್ಯ ಹಾಗೂ ಆಸುಪಾಸಿನಲ್ಲಿ ಶುಕ್ರವಾರ ಧಾರಾಕಾರ ಮಳೆಯಾಗಿದ್ದು, ತಗ್ಗು ಪ್ರದೇಶಗಳು ಜಲಾವೃತವಾಗುತ್ತಿವೆ.
ಗುರುವಾರ ರಾತ್ರಿಯಿಂದಲೇ ಸುರಿಯುತ್ತಿರುವ ಭಾರಿ ಮಳೆಗೆ ಹಲವೆಡೆ ಕೃಷಿ ತೋಟಗಳು ಮುಳುಗಡೆಯಾಗಿದ್ದು, ತಗ್ಗು ಪ್ರದೇಶಗಳ ಜನತೆ ಮುಳುಗುವ ಭೀತಿಯಲ್ಲಿದೆ. ನಿರಂತರ ಮಳೆಯಿಂದಾಗಿ ಅಡಕೆ ಕೃಷಿಕರು ಕೊಳೆ ರೋಗದ ಭೀತಿ ಎದುರಿಸುತ್ತಿದ್ದಾರೆ.
ಶುಕ್ರವಾರ ಮಧ್ಯಾಹ್ನ ಬೀಸಿದ ಭಾರಿ ಗಾಳಿಗೆ ಅಲ್ಲಲ್ಲಿ ಹಾನಿ ಸಂಭವಿಸಿದೆ. ಸುದ್ದಿ ಉದ್ಯೋಗ ಮತ್ತು ಮಾಹಿತಿ ಕೇಂದ್ರದ ಹೊರಗಿನ ಬಾಗಿಲು ಗಾಳಿಯ ರಭಸಕ್ಕೆ ಬಲವಾಗಿ ಬಡಿಯಲ್ಪಟ್ಟು ಗಾಜು ಪುಡಿ ಪುಡಿಯಾಗಿದೆ.
ನೇತ್ರಾವತಿ,
ಕುಮಾರಧಾರ
ಹರಿವು ಹೆಚ್ಚಳ
ಉಪ್ಪಿನಂಗಡಿ: ಕಳೆದ ಎರಡು ದಿನಗಳಿಂದ ಸತತ ಮಳೆ ಸುರಿಯುತ್ತಿದ್ದು, ಉಭಯ ನದಿಗಳಾದ ನೇತ್ರಾವತಿ ಮತ್ತು ಕುಮಾರಧಾರ ಮೈ ತುಂಬಿ ಹರಿಯತೊಡಗಿವೆ. ಸತತವಾಗಿ ಹಾಗೂ ಭಾರೀ ಎಂಬಂತೆ ಸುರಿಯುವ ಮಳೆಯಿಂದಾಗಿ ನದಿಗಳ ನೀರಿನ ಹರಿಯುವಿಕೆಯ ಮಟ್ಟದಲ್ಲಿ ಹೆಚ್ಚಳ ಕಂಡು ಬಂದಿದೆ. ಆದರೆ ಅಪಾಯ ಮಟ್ಟಕ್ಕಿಂತ ಕೆಳಗೆ ಹರಿಯುತ್ತಿದೆ. ಮಳೆಯೊಂದಿಗೆ ಬೀಸುವ ಭಾರೀ ಗಾಳಿಗೆ ಅಡಕೆ ಮರಗಳು ಹಲವೆಡೆ ಹಾನಿಗೀಡಾದ ಬಗ್ಗೆ ತಿಳಿದು ಬಂದಿದೆ. ಈ ಬಾರಿಯ ಮಳೆಗಾಲ ಪ್ರಾರಂಭವಾದಂದಿನಿಂದ ವಿರಮಿಸದೇ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಾಗೂ ಆಷಾಢ ಮಾಸದಲ್ಲಿ ಮಳೆ ಮತ್ತಷ್ಟು ತೀವ್ರವಾಗಿ ಸುರಿಯುವ ಸಾಧ್ಯತೆಯನ್ನು ಅಂದಾಜಿಸಿರುವ ಜನತೆ ಮತ್ತೊಮ್ಮೆ ನೆರೆ ಸಂಭವಿಸುವ ಸಾಧ್ಯತೆ ಬಗ್ಗೆ ಭೀತಿ ವ್ಯಕ್ತಪಡಿಸುತ್ತಿದ್ದಾರೆ.