ಸಹೋದರನ ಮೇಲೆ ಹಲ್ಲೆ; ದೂರು
ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ರೆಖ್ಯಾ ಗ್ರಾಮದ ಎಂಜಿರ ಎಂಬಲ್ಲಿನ ಪರತಾಳ ಮನೆ ನಿವಾಸಿ ರಾಜಾ ಆಲಿಯಾಸ್ ರಾಜೇಂದ್ರ ಎಂಬವರ ಮೇಲೆ ಅವರ ಸಹೋದರ ಪ್ರಕಾಶ್ ಎಂಬಾತ ಮಾರಣಾಂತಿಕ ಹಲ್ಲೆ ನಡೆಸಿದ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಲಾಗಿದೆ.
ರಘುವೀರ್ ಎಂಬವರ ಮಕ್ಕಳಾದ ರಾಜಾ ಅಲಿಯಾಸ್ ರಾಜೇಂದ್ರ ಮತ್ತು ಅವರ ಸಹೋದರ ಪ್ರಕಾಶ್ ನಡುವೆ ಕೌಟುಂಬಿಕ ವೈಷಮ್ಯವಿದ್ದು, ಮನೆಯಿಂದ ನಿರ್ಗಮಿಸಬೇಕೆಂಬ ಸೂಚನೆಯ ಬಗ್ಗೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.
ಈ ಸಂದರ್ಭ ಪ್ರಕಾಶ್ ಕತ್ತಿಯಿಂದ ಹೊಡೆದು ಹಲ್ಲೆ ನಡೆಸಿದಾನೆಂದೂ ಮಂಗಳೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲುಗೊಂಡಿರುವ ರಾಜಾ ಪೊಲೀಸರಿಗೆ ನೀಡಿದ ದೂರಿನಲಿ ತಿಳಿಸಿದ್ದಾರೆ. ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಯುವಕ ನಾಪತ್ತೆ
ಮಂಗಳೂರು: ಆಕಾಶಭವನ ಸೂಜಿಕಲ್ ಗುಡ್ಡೆ ನಿವಾಸಿ. ಸೈಯ್ಯದ್ ಅಲಿ (17) ಮನೆಯಿಂದ ಹೋದವ ನಾಪತ್ತೆಯಾಗಿದ್ದಾನೆ.
ಜು.3ರಂದು ಮನೆಯವರೆಲ್ಲ ಮಂಗಳೂರು ಪೇಟೆಗೆ ತೆರಳಿದ್ದ ವೇಳೆ ಸೈಯದ್ ಮಾತ್ರ ಮನೆಯಲ್ಲಿದ್ದ.
ವಾಪಸ್ ಬರುವಾಗ ಮನೆಯಲ್ಲಿ ಇರಲಿಲ್ಲ. ನೆರೆಮನೆಯವರ ಬಳಿ ವಿಚಾರಿಸಿದಾಗ ಬೆಳಗ್ಗೆ 10.30ಕ್ಕೆ ಬ್ಯಾಗ್ ಹಿಡಿದು ಹೋಗಿರುವುದಾಗಿ ಹೇಳಿದ್ದಾರೆ. ನಾಲ್ಕನೇ ತರಗತಿ ವರೆಗೆ ವಿದ್ಯಾಭ್ಯಾಸ ಮಾಡಿದ್ದಾನೆ.
ರೇಲ್ವೆ ತಪಾಸಣೆ: 1.22 ಲಕ್ಷ ದಂಡ ಸಂಗ್ರಹ
ಮಂಗಳೂರು: ನೈಋತ್ಯ ರೇಲ್ವೆ ಫಾಲ್ಘಾಟ್ ವಿಭಾಗ ಗುರುವಾರ ಕಣ್ಣೂರು-ಕೋಯಿಕ್ಕೋಡ್ ಮತ್ತು ಶೋರ್ನೂರು-ನೀಲಂಬೂರು ಮಾರ್ಗದಲ್ಲಿ ವಿಶೇಷ ಟಿಕೆಟ್ ತಪಾಸಣೆ ನಡೆಸಿ 353 ಪ್ರಕರಣ ಪತ್ತೆ ಮಾಡಿದ್ದು, ರು. 1.22 ಲಕ್ಷ ದಂಡ ಸಂಗ್ರಹಿಸಿದೆ. ಈ ತಪಾಸಣಾ ಕಾರ್ಯಾಚರಣೆಯಲ್ಲಿ ಫಾಲ್ಘಾಟ್ ವಿಭಾಗದ 21 ಟಿಕೆಟ್ ಪರೀಕ್ಷಕರು, 9 ಆರ್‌ಪಿಎಫ್ ಸಿಬ್ಬಂದಿ ಪಾಲ್ಗೊಂಡಿದ್ದರು ಎಂದು ಪ್ರಕಟಣೆ ತಿಳಿಸಿದೆ.