ಮೆಟ್ಟಿಲು ಹತ್ತಿದ್ರೆ, ರಸ್ತೆ ಉಬ್ಬು ದಾಟಿದ್ರೆ ವಿದ್ಯುತ್!
ಮಂಗಳೂರು: ಪಿಲಿಕುಳದಲ್ಲಿ ಭಾವಿ ವಿಜ್ಞಾನಿಗಳು (ಹಿರಿಯ ಪ್ರಾಥಮಿಕ, ಪ್ರೌಢಶಾಲೆ ವಿದ್ಯಾರ್ಥಿಗಳು) ಶ್ರದ್ಧೆಯಿಂದ ಪ್ರದರ್ಶನಕ್ಕಿಟ್ಟ ವಿಜ್ಞಾನ ಮಾದರಿಗಳು ಸಾರ್ವಜನಿಕ ಜೀವನದಲ್ಲಿ ಬಳಸಲು ಲಭ್ಯವಾದರೆ ಜನರ ಬಹುತೇಕ ಸಮಸ್ಯೆಗಳಿಗೆ ಸುಲಭದ ಪರಿಹಾರ ವಾಗಬಲ್ಲದು.
ರಸ್ತೆ ಉಬ್ಬುಗಳಿಂದ ವಿದ್ಯುತ್, ಜನರು ಮೆಟ್ಟಿಲು ಹತ್ತಿ ಹೋದರೆ ಅಲ್ಲಿಯೂ ವಿದ್ಯುತ್ ತಯಾರಿಸಬಹುದು, ಗಾಳಿ, ಬೆಳಕು, ನೀರುಗಳಿಂದ ನಾನಾ ರೀತಿಯಲ್ಲಿ ವಿದ್ಯುತ್... ಮಕ್ಕಳು ವಿಜ್ಞಾನ ಪ್ರದರ್ಶನದಲ್ಲಿ ವಿದ್ಯುತ್ ಉಳಿತಾಯ ಮತ್ತು ಉತ್ಪಾದನೆ ಸುಲಭ ವಿಧಾನ ತೋರಿಸುವಾಗ ಜನಜೀವನವನ್ನು ನುಂಗುತ್ತಿರುವ ಉಷ್ಣ ವಿದ್ಯುತ್ ಸ್ಥಾವರಗಳು ಬೇಕೆ ಎಂಬ ಪ್ರಶ್ನೆ ಮೂಡಿಸಿದ್ದು ಸುಳ್ಳಲ್ಲ.
ಮೆಟ್ಟಿಲುಗಳ ಮೂಲಕ ನಡೆಯುವಾಗ ಮಾನವ ಶಕ್ತಿ ಮೂಲಕ ವಿದ್ಯುತ್ ಉತ್ಪಾದಿಸುವ ವಿಧಾನವನ್ನು ಸಸಿಹಿತ್ಲು ಶಾಲೆಯ ಪ್ರೀತಿ ಕಂಡು ಹಿಡಿದಿದ್ದಾಳೆ. ಫಿಜೋ ಇಲೆಕ್ಟ್ರಿಕ್ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಫೂಟ್ ಸ್ಟೆಪ್ ಜನರೇಶನ್ ಮೂಲಕ ವಿದ್ಯುತ್ ಉತ್ಪಾದನೆ ಮಾಡಬಹುದು ಎಂಬುದನ್ನು ಪ್ರೀತಿ ವಿವರಿಸುತ್ತಾರೆ. ಈ ಆವಿಷ್ಕಾರಕ್ಕೆ ಪ್ರಮುಖ ಸಹಕಾರ ಲಕ್ಷ್ಮೀ ಟೀಚರ್ ಅವರದು.
ಮಂಗಳೂರಲ್ಲಿ ಹೊಂಡ ಗುಂಡಿಗಳು ಮಾಮೂಲು. ಒಂದೆರಡು ತಿಂಗಳು ಮುಚ್ಚಿಕೊಂಡಿರುತ್ತವೆ. ರಸ್ತೆ ಉಬ್ಬುಗಳು ನಗರ ತುಂಬಾ ಹಾಕಿದ್ದಾರೆ. ರಸ್ತೆ ಉಬ್ಬು ಮೂಲಕ ವಿದ್ಯುತ್ ತಯಾರಿಸುವ ವಿಧಾನವೂ ಪ್ರದರ್ಶನದಲ್ಲಿದೆ.
ಒಂದು ಮಾಲ್ಗಳಿಂದ ಇನ್ನೊಂದು ಮಾಲ್ಗೆ ಹೋಗುವಾಗ ಟ್ರಾಫಿಕ್ ಜಾಮ್ ಆಗಬಹುದು, ಆಗ ಸುಲಭದಲ್ಲಿ ರೋಪ್ವೇ ಬಳಸಬಹುದಾದ ವಿಧಾನವನ್ನು ಗಾಂಧಿನಗರ ಶಾಲೆಯ ವಿದ್ಯಾರ್ಥಿ ಗಣೇಶ್ ವಿವರಿಸುತ್ತಾರೆ.
ಹೆದ್ದಾರಿಗಳಲ್ಲಿ ಟ್ರಾಫಿಕ್ ಜಾಮ್ ಆದಾಗ ಕೆಳ ರಸ್ತೆ ಎತ್ತರಿಸಿ ಹೆದ್ದಾರಿಗೆ ಜೋಡಿಸುವ ವಿಧಾನವನ್ನು ಅಕ್ಷಯ್ ಕೆ.ಟಿ., ಕಡಿಮೆ ವಿದ್ಯುತ್ ವೋಲ್ಟೇಜ್ನಲ್ಲಿ ಎಸಿ ಕಾರ್ಯ ವಿಧಾನವನ್ನು ಬ್ಯಾರಿ ಪಬ್ಲಿಕ್ ಸ್ಕೂಲ್ನ ಸುವಿಜ್ಞಾ ಪ್ರದರ್ಶಿಸಿದ್ದಾರೆ. ಸೈಕಲ್ ಪೆಡಲಿಂಗ್ ಮೂಲಕ ಮೊಬೈಲ್ ಚಾರ್ಜ್, ವಿದ್ಯುತ್ ಉತ್ಪಾದನೆ ವಿಧಾನಗಳು ವಿದ್ಯಾರ್ಥಿಗಳು ಚೊಕ್ಕವಾಗಿ ತೋರಿಸಿದ್ದಾರೆ.
ಇಂಧನ ಉಳಿತಾಯ: ಬೀದಿ ದೀಪ ವಿದ್ಯುತ್ ಉಳಿಕೆಗೆ ಮನುಷ್ಯರು ನಡೆದಾಡಿದಾಗ ಮಾತ್ರ ಬೆಳಕು ಬೀರುವ ತಂತ್ರಜ್ಞಾನ ಶೋಧಿಸಿದ್ದಾಳೆ ಬಾಲಕಿ ಚೈತ್ರಾ.
ರಸ್ತೆಯಲ್ಲಿ ನಡೆದು ಹೋದಾಗ ಮಾತ್ರ ವಿದ್ಯುತ್ ಕಂಬದಲ್ಲಿ ಅಳವಡಿಸಿ ಪಿಐಆರ್ ಸೆನ್ಸರ್ ಅದನ್ನು ಗ್ರಹಿಸಿ ಲೈಟ್ ತನ್ನಿಂದತಾನಾಗಿಯೇ ಆನ್ ಆಗುತ್ತದೆ. ಇದೇ ರೀತಿ ಕತ್ತಲು ಆವರಿಸಿದ ತಕ್ಷಣ ಬೀದಿ ದೀಪಗಳು ತನ್ನಿಂದ ತಾನಾಗಿಯೇ ಉರಿಯುವ, ಹಗಲು ಆದ ತಕ್ಷಣ ಆರುವ ತಂತ್ರಜ್ಞಾನ ನೀರೇಶ್ವಾಲ್ಯ ಶಾಲೆ ರಿಲ್ವಾನ್ ಶೋಧಿಸಿ, ಪ್ರದರ್ಶನಕ್ಕಿರಿಸಿದ್ದ.
ಮಳೆನೀರು ಕೊಳವೆ ಮೂಲಕ ತಾಮ್ರದ ತಂತಿಗಳ ನಡುವೆ ಹರಿಸಿ ಮನೆ ಇಡೀ ಮಿನುಗು ದೀಪಗಳನ್ನು ಮಾಡಬಹುದು ಎಂದು ಲೇಡಿಹಿಲ್ ಶಾಲೆಯ ಮಂಜುಳಾ ತೋರಿಸಿಕೊಟ್ಟಿದ್ದಾಳೆ.
ಮಳೆ ನೀರು ಇಂಗು ಗುಂಡಿಗಳ ಮೂಲಕ ಉಳಿಸಿ ಬೇಸಗೆಯಲ್ಲಿ ಕುಡಿಯಬಹುದು ಎಂಬುದನ್ನು ಇನ್ನೊಬ್ಬ ವಿದ್ಯಾರ್ಥಿ ಪ್ರದರ್ಶನ ಮೂಲಕ ಜಾಗೃತಿ ಮೂಡಿಸಿದ್ದ.
ಗಮನ್ ಸೆಳೆದ!: ಕೊಳಚೆ ನೀರು, ಉಪ್ಪು ನೀರು ಬಳಸಿ ವಿದ್ಯುತ್ ಉತ್ಪಾದಿಸಬಹುದು, ಉಳಿದ ನೀರನ್ನು ತೋಟಕ್ಕೆ ಬಳಸುವ ಬಹುಪಯೋಗಿ ವಿಜ್ಞಾನ ಮಾದರಿಯನ್ನು ಪುಟಾಣಿ ಗಮನ್ ಪ್ರದರ್ಶಿಸುವ ಮೂಲಕ ಗಮನ ಸೆಳೆದರು.
ಕಳ್ಳರೇ ಎಚ್ಚರ!: ಕಳ್ಳರ ಹಾವಳಿ ತಡೆಯಲು ತೆಂಕಮಿಜಾರು ಶಾಲೆ ಪಲ್ಲವಿ, ಕಳ್ಳ ಬಂದು ಬಾಗಿಲಿಗೆ ಟಾರ್ಚ್ ಹಾಕಿದ ತಕ್ಷಣ ಸೈರನ್ ಆಗುವ ಯಂತ್ರ ಆವಿಷ್ಕರಿಸಿದ್ದಾಳೆ. ಇದರ ಜತೆ ತಕ್ಷಣ ಲೈಟ್ ಉರಿಯುತ್ತದೆ, ಕಳ್ಳ ಸಿಕ್ಕಿ ಬೀಳುವುದು ಗ್ಯಾರಂಟಿ!
ಮಳೆ ಬಂದ್ರೆ ಬಾಗಿಲು ಬಂದ್: ಪುಟಾಣಿ ದೀಕ್ಷಿತ್ ಶೆಟ್ಟಿ, ಮಳೆ ಬಂದ ತಕ್ಷಣ, ಮಳೆ ನೀರು ಒಳಗೆ ಬಾರದಂತೆ ಮಾಡಲು ಕಿಟಕಿ ಬಾಗಿಲು ಮುಚ್ಚುವ ತಂತ್ರಜ್ಞಾನ ರೂಪಿಸಿದ್ದಾನೆ. ಜಯಂತಿ ಟೀಚರ್ ಇದಕ್ಕೆ ನೆರವು ನೀಡಿದ್ದನ್ನು ಹೇಳಲು ಆತ ಮರೆಯುವುದಿಲ್ಲ.
ಸೌರ ಫಲಕಗಳು ಒಂದೇ ಕಡೆ ಫಿಕ್ಸ್ ಆಗಿರುವುದನ್ನು ನೀವು ನೋಡುತ್ತೀರಿ. ಆದರೆ ಸೂರ್ಯ ಬೆಳಕು ಇದ್ದೆಡೆ ತಿರುಗುವ ಸೌರಫಲಕಗಳನ್ನು ಹಳೆಯಂಗಡಿ ಶಾಲೆಯ ಅಮೃತೇಶ್ ಅನ್ವೇಷಣೆ ಮಾಡಿದ್ದ. ವಾಹನದಲ್ಲಿ ಎಕ್ಸಿಲೇಟರ್ ಅದುಮಿ ಬಿಟ್ಟಾಗ ಬ್ಯಾಟರಿ ಚಾರ್ಜ್ಆಗಿ ಸುಲಭವಾಗಿ ಕಾರು ಚಲಾಯಿಸುವ ವಿಧಾನವನ್ನು ಪುತ್ತೂರು ವಿವೇಕಾನಂದ ಕಾಲೇಜ್ನ ಸೈಯದ್ ಇಮ್ತಿಯಾಜ್ ಪ್ರದರ್ಶಿಸಿ ಸೈ ಎನಿಸಿಕೊಂಡಿದ್ದಾರೆ.
ಹತ್ತು ಲಕ್ಷ ಭಾವಿ ವಿಜ್ಞಾನಿಗಳು!
ದೇಶದಲ್ಲಿ ಹತ್ತು ಲಕ್ಷ ವಿದ್ಯಾರ್ಥಿಗಳು ನಾನಾ ರೀತಿಯ ವಿಜ್ಞಾನ ಮಾದರಿ ಪ್ರದರ್ಶಿಸುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1,434 ಮಕ್ಕಳು ಜಿಲ್ಲಾ ಮಟ್ಟದ ವಿಜ್ಞಾನ ಪ್ರದರ್ಶನಕ್ಕೆ ಆಯ್ಕೆಯಾಗಿದ್ದಾರೆ. ಒಟ್ಟು 6 ದಿನಗಳ ಕಾಲ ಪ್ರದರ್ಶನ ನಡೆಯಲಿದೆ ಎಂದು ಪ್ರದರ್ಶನ ಸಂಯೋಜಕಿ ಡಯಟ್ ಉಪನ್ಯಾಸಕಿ ದಯಾವತಿ ಹೇಳುತ್ತಾರೆ.
-ಜಿತೇಂದ್ರ ಕುಂದೇಶ್ವರ