ಕಡಿಮೆ ಮಳೆ;ಕಡಲ್ಕೊರೆತ ಹೆಚ್ಚಳ
ಮಂಗಳೂರು: ಮಂಗಳೂರಿನಲ್ಲಿ ಭಾನುವಾರ ಮಳೆ ಕಡಿಮೆಯಾಗಿದ್ದು, ಬೆಳಗ್ಗೆ ಜೋರಾಗಿ ಸುರಿದ ಮಳೆ ಸಂಜೆ ವೇಳೆ ಕಡಿಮೆಯಾಗಿತ್ತು. ನೇತ್ರಾವತಿ ನದಿ ನೀರಿನ ಮಟ್ಟ ಹೆಚ್ಚಾದ ಪರಿಣಾಮ ತಗ್ಗು ಪ್ರದೇಶಗಳಾದ ಕಲ್ಲಾಪು, ಜಪ್ಪಿನಮೊಗರು, ಪಟ್ಲ, ಆಡಂಕುದ್ದು, ಪೆರ್ಮನ್ನೂರಿನಲ್ಲಿ ನೀರು ನುಗ್ಗಿದೆ. ಬ್ರಹ್ಮರಕೂಟ್ಲು, ವಳಚ್ಚಿಲ್, ಫರಂಗಿಪೇಟೆ ಬಳಿ ನದಿಯ ನೀರು ತಗ್ಗು ಪ್ರದೇಶಕ್ಕೆ ನುಗ್ಗಿದ್ದು, ನದಿ ತಟದ ಗದ್ದೆಗಳು ನೀರಿನಿಂದ ಆವೃತ್ತವಾಗಿದೆ.
ಉಳ್ಳಾಲದ ಮುಕ್ಕಚೇರಿ, ಮೊಗವೀರ ಪಟ್ಣ, ಕೋಟೆಪುರ, ಉಚ್ಚಿಲ, ಸೋಮೇಶ್ವರದಲ್ಲಿ ಸಮುದ್ರದ ಅಬ್ಬರ ಹೆಚ್ಚಾಗಿದೆ.
ಪಲ್ಗುಣಿ ನದಿ ನೀರಿನ ಮಟ್ಟ ಹೆಚ್ಚಾದ ಪರಿಣಾಮ ಮರವೂರು ಡ್ಯಾಂ ಬಳಿ ನದಿ ತುಂಬಿ ಹರಿಯುತ್ತಿದೆ. ಕಳೆದ ಬಾರಿ ನದಿ ನೀರಿನಲ್ಲಿ ಕೊಚ್ಚಿ ಬಂದಿದ್ದ ಕಸ ಕಡ್ಡಿಗಳು ಡ್ಯಾಂನಲ್ಲಿ ಸಿಕ್ಕಿ ನೀರಿನ ಹರಿವಿಗೆ ತಡೆ ಉಂಟಾಗಿತ್ತು. ಈ ಬಾರಿ ಡ್ಯಾಂನ ಕಿಂಡಿಗಳಲ್ಲಿನ ಕಸಗಳನ್ನು ತೆರೆದಿದ್ದು, ಸರಾಗವಾಗಿ ನೀರು ಹರಿಯುತ್ತಿದೆ. ಭಾನುವಾರ ಬೆಳಗ್ಗಿನವರೆಗೆ ಜಿಲ್ಲೆಯ ಮೂಡುಬಿದಿರೆಯಲ್ಲಿ 77.2 ಮಿ.ಮೀ., ಗರಿಷ್ಠ ಮಳೆ ಸುರಿದಿದೆ.
ಮಳೆ ವಿವರ: ಪುತ್ತೂರು- 73.2 ಮಿ.ಮೀ., ಕಬಕ- 70.0 ಮಿ.ಮೀ., ಬಂಟ್ವಾಳ- 67.5 ಮಿ.ಮೀ., ಮಂಗಳೂರು- 50.2 ಮಿ.ಮೀ., ಸುಳ್ಯ- 46.0 ಮಿ.ಮೀ., ಬೆಳ್ತಂಗಡಿ- 29.0 ಮಿ.ಮೀ., ಮಳೆ ದಾಖಲಾಗಿದೆ.