ಕುಮಾರಧಾರ ಸೇತುವೆ ಸಂಚಾರ ಮುಕ್ತ
ಸುಬ್ರಹ್ಮಣ್ಯ: ಶನಿವಾರ ರಾತ್ರಿ 10 ಗಂಟೆಗೆ ಮುಳುಗಡೆಯಾದ ಕುಮಾಧಾರ ಸೇತುವೆ ಭಾನುವಾರ ಬೆಳಗ್ಗೆ 11 ಗಂಟೆಗೆ ವಾಹನ ಸಂಚಾರಕ್ಕೆ ಮುಕ್ತವಾಯಿತು.
ಸುಮಾರು 13 ಗಂಟೆ ಕಾಲ ಬೆಂಗಳೂರು, ಹಾಸನ, ಮಂಗಳೂರು, ಧರ್ಮಸ್ಥಳಗಳಿಂದ ಬಂದ ಸಾವಿರಾರು ಭಕ್ತಾದಿಗಳು ಅನ್ನ ನೀರಿಗಾಗಿ ಪರದಾಟ ನಡೆಸಿದರು. ಶೌಚಾಲಯ ವ್ಯವಸ್ಥೆ ಇಲ್ಲದ ಕಾರಣ ಕಾಡನ್ನೇ ಆಶ್ರಯಿಸಬೇಕಾಯಿತು. ಹಲವರು ವಾಹನದಲ್ಲೇ ಮಲಗಿ ಆಸರೆ ಪಡೆದುಕೊಂಡರು.
ಶುಕ್ರವಾರ ಸಂಜೆ ಸೇತುವೆ ಮುಳುಗಿದಾಗ ಶಾಲೆ ವಿದ್ಯಾರ್ಥಿಗಳು ಮನೆ ಸೇರಲಾಗದೆ ಸುಬ್ರಹ್ಮಣ್ಯದಲ್ಲೇ ರಾತ್ರಿ ಕಳೆದರೆ, ಕೆಲವು ವಿದ್ಯಾರ್ಥಿಗಳು ದುಬಾರಿ ಹಣ ತೆತ್ತು ಪಂಜ ಮಾರ್ಗವಾಗಿ ತೆರಳಿ ತಡ ರಾತ್ರಿ ಮನೆ ಸೇರಿದರು.
ಸೇತುವೆ ಕನಸು ಮರೀಚಿಕೆ: ಕಳೆದ 2 ವರ್ಷಗಳ ಹಿಂದೆ 16 ಬಾರಿ ಕುಮಾರಧಾರ ಸೇತುವೆ ಮುಳುಗಡೆಗೊಂಡರೂ ಜನಪ್ರತಿನಿಧಿಗಳು ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಕಳೆದ 20 ವರ್ಷಗಳಿಂದ ಸುಬ್ರಹ್ಮಣ್ಯಕ್ಕೆ ಬರುವ ಯಾತ್ರಿಕರ ಸಂಖ್ಯೆ ಜಾಸ್ತಿಯಾಗಿದೆ. ಸೇತುವೆ ಮಾತ್ರ ಮೇಲ್ದರ್ಜೆಗೇರದೆ ಮರೀಚಿಕೆಯಾಗಿ ಉಳಿದಿದೆ. ರಾಜಕಾರಣಿಗಳು ಓಟಿನ ಸಮಯದಲ್ಲಿ ಸೇತುವೆಯನ್ನು ಮೇಲ್ದರ್ಜೆಗೆ ಏರಿಸುತ್ತೇವೆ ಎಂದು ಆಶ್ವಾಸನೆ ಕೊಡುತ್ತಾರೆ ನಂತರ ಮರೆತು ಬಿಡುತ್ತಾರೆ.
ದೂರದ ಯಾತ್ರಿಕರು ಕುಕ್ಕೆ ಕ್ಷೇತ್ರಕ್ಕೆ ಬರುವ ಮೊದಲು ದೇವಸ್ಥಾನ ಹಾಗೂ ವ್ಯಾಪಾರಸ್ಥರಿಗೆ ಕರೆ ಮಾಡಿ, ಸೇತುವೆ ಮುಳುಗಡೆಯಾಗಿದೆಯೇ, ಪೂಜೆ ನಡೆಯುತ್ತಿದೆಯೇ, ಯಾವಾಗ ಬರಬಹುದು ಎಂದು ವಿಚಾರಿಸುತ್ತಾರೆ. ಹೆಚ್ಚಿನವರು ಮಳೆಗಾಲ ಕುಕ್ಕೆಗೆ ಬರುವುದನ್ನು ನಿಲ್ಲಿಸಿದ್ದಾರೆ.