ಕೆರೆ ಒತ್ತುವರಿ ತೆರವು ಬಳಿಕ ಎತ್ತಿನ ಹೊಳೆ ಜಾರಿಗೆ ಚಿಂತಿಸಿ
ಮಂಗಳೂರು: ರಾಜ್ಯದಲ್ಲಿ ವಿವಿಧ ಕೆರೆಗಳ ಒತ್ತುವರಿ ತೆರವುಗೊಳಿಸಿದ ಬಳಿಕವೇ ಎತ್ತಿನ ಹೊಳೆ ಯೋಜನೆ ಬಗ್ಗೆ ಸರ್ಕಾರ ಯೋಚಿಸಬೇಕು ಎಂದು ಪುತ್ತೂರಿನ ಬಳಕೆದಾರರ ಹಿತರಕ್ಷಣ ವೇದಿಕೆ ಮುಖ್ಯಮಂತ್ರಿಯನ್ನು ಆಗ್ರಹಿಸಿದೆ.
'ಕನ್ನಡಪ್ರಭ'ದಲ್ಲಿ ಪ್ರಕಟವಾಗುತ್ತಿರುವ ಒತ್ತುವರಿ ಕುರಿತ ಸರಣಿ ವರದಿಗೆ ಪ್ರತಿಕ್ರಿಯೆ ನೀಡಿರುವ ವೇದಿಕೆ, ಬಯಲುಸೀಮೆಯ 7 ಜಿಲ್ಲೆಗಳ ಜಲ ಮೂಲದಲ್ಲಿ ನೀರಿಲ್ಲದ ಕಾರಣ ಎತ್ತಿನಹೊಳೆ ಯೋಜನೆ ಜಾರಿಯಾಗುತ್ತಿದೆ. ಈ ಜಿಲ್ಲೆಗಳ ಜಲಮೂಲ ನಾಶವಾಗಲು ಕಾರಣ ಏನು? ಅವುಗಳ ಪುನರುಜ್ಜೀವಕ್ಕೆ ಯಾವ ಕ್ರಮ ಕೈಗೊಳ್ಳಲಾಗಿದೆ? ಈಗಾಗಲೇ ಹೆಚ್ಚಿನ ಜಲಮೂಲಗಳ ಒತ್ತುವರಿಯಾದ ಬಗ್ಗೆ ವರದಿಯಾಗಿದೆ.
ಆದ್ದರಿಂದ ಈ ಎಲ್ಲ ಒತ್ತುವರಿಯನ್ನು ತೆರವುಗೊಳಿಸಬೇಕು. ಈ ಬಗ್ಗೆ ಸರ್ಕಾರ ಶ್ವೇತಪತ್ರ ಹೊರಡಿಸಿದ ನಂತರವೇ ಎತ್ತಿನ ಹೊಳೆ ಯೋಜನೆ ಜಾರಿ ಬಗ್ಗೆ ಯೋಚಿಸಬೇಕು ಎಂದು ವೇದಿಕೆ ಸಂಚಾಲಕ ಡಿ.ಕೆ.ಭಟ್ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.