ಕೊರತೆ ಇಲ್ಲದಲ್ಲಿ ಕಡಲ್ಕೊರೆತ ತಡೆ ಪ್ರಯೋಗ!
ಮಂಗಳೂರು: ಕರಾವಳಿ ಪ್ರದೇಶ ಉಳ್ಳಾಲದ ಸಮುದ್ರ ತೀರದಲ್ಲಿ ಕಡಲ್ಕೊರೆತ ಇರುವ ಪ್ರದೇಶ ಬಿಟ್ಟು ಕಡಲ್ಕೊರೆತ ಇಲ್ಲದ ಜಾಗದಲ್ಲಿ ಪ್ರಾಯೋಗಿಕವಾಗಿ ಸಬ್ಮರ್ಸಿಬಲ್ ಬರ್ಮ್ಸ್ ತಂತ್ರಜ್ಞಾನ ಅಳವಡಿಸಿ ಕೋಟಿಗಟ್ಟಲೆ ಅನುದಾನ ಸಮುದ್ರಪಾಲು ಮಾಡಲು ರಾಜ್ಯ ಸರ್ಕಾರ ಹೊರಟಿದೆ!
ವಿಧಾನಸಭಾ ಅಧಿವೇಶನದಲ್ಲಿ ಕಡಲ್ಕೊರೆತ ತಡೆಗೆ ಶಾಶ್ವತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸರ್ಕಾರ ತೀರದ ನಿವಾಸಿಗಳಿಗೆ ಭರವಸೆ ನೀಡಿದ ಬೆನ್ನಿಗೇ ಇಂಥದ್ದೊಂದು ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಉಳ್ಳಾಲ ಪರಿಸರದಲ್ಲಿ ಕಡಲ್ಕೊರೆತ ಇರುವುದು ಕೋಟೆಪುರದಿಂದ ಮುಕ್ಕಚ್ಚೇರಿ ವರೆಗೆ ಸುಮಾರು 3 ಕಿ.ಮೀ ದೂರ ಮಾತ್ರ. ಈಗ ಪ್ರಾಯೋಗಿಕ ಅನುಷ್ಠಾನಕ್ಕೆ ಮುಂದಾಗಿರುವ ಜಾಗ ಸಮ್ಮರ್ಸ್ಯಾಂಡ್ ಬೀಚ್. ಪ್ರವಾಸಿ ತಾಣವಾದ ಇಲ್ಲಿ ಕಡಲ್ಕೊರೆತವೇ ಇಲ್ಲ.
ಹಿಂದಿನ ಟೆಂಡರ್ ರದ್ದು: ತೀವ್ರ ಕಡಲ್ಕೊರೆತ ಪ್ರದೇಶಗಳಾದ ಉಳ್ಳಾಲ ಕೋಟೆಪುರ, ಹಿಲಾರಿ ನಗರದಲ್ಲಿ ಸಬ್ಮರ್ಸಿಬಲ್ ರೀಫ್ ತಂತ್ರಜ್ಞಾನ ಅಳವಡಿಸಲು 2010ರಲ್ಲಿ ನೆದರ್ಲ್ಯಾಂಡ್ನ ಎಎಸ್ಆರ್ ಕಂಪನಿ ವಿನ್ಯಾಸ ತಯಾರಿಸಿತ್ತು. ಇದಕ್ಕೆ ರು. 140 ಕೋಟಿ ಅಂದಾಜುಪಟ್ಟಿಯನ್ನು ಸಿದ್ಧಪಡಿಸಿತ್ತು. ಈ ಕಂಪನಿ ಕೇರಳದ ಕೋವಳಂ ಬೀಚ್ನಲ್ಲಿ ಅಲ್ಲಿನ ಪ್ರವಾಸೋದ್ಯಮ ಇಲಾಖೆ ವತಿಯಿಂದ ರು. 8 ಕೋಟಿ ವೆಚ್ಚದಲ್ಲಿ ಅಳವಡಿಸಿದ ಇದೇ ತಂತ್ರಜ್ಞಾನ ವಿಫಲವಾಗಿತ್ತು.
ಉಳ್ಳಾಲದಲ್ಲಿ ಇದೇ ತಂತ್ರಜ್ಞಾನ ಅಳವಡಿಕೆಗೆ ಜಾಗತಿಕ ಟೆಂಡರ್ ಹಾಕಿತ್ತು. ಆದರೆ ಕನ್ಸಲ್ಟೆಂಟ್ ಕಂಪನಿ ಹಾಗೂ ಟೆಂಡರ್ ಪಡೆದ ಕಂಪನಿ ಒಂದೇ ಆಗಿರಬಾರದು ಎಂಬ ಕಾರಣಕ್ಕೆ ಎಎಸ್ಆರ್ ಕಂಪನಿಯ ಟೆಂಡರ್ನ್ನು ಎಡಿಬಿ ರದ್ದುಗೊಳಿಸಿ ಅದರ ವಿನ್ಯಾಸವನ್ನೂ ತಿರಸ್ಕರಿಸಿತ್ತು.
ಪ್ರಾಯೋಗಿಕ ಅನುಷ್ಠಾನ: ಬಳಿಕ 2012 ಅಕ್ಟೋಬರ್ನಲ್ಲಿ ಜಾಗತಿಕ ಟೆಂಡರ್ ಕರೆದಾಗ ಮೆಕ್ಡೊನಾಲ್ಡ್ ಕಂಪನಿಗೆ ಟೆಂಡರ್ ಲಭಿಸಿತ್ತು.
ಅಚ್ಚರಿ ಎಂದರೆ ಇದೇ ಕಂಪನಿಗೆ ಕನ್ಸಲ್ಟೆಂಟ್ನ್ನೂ ನೀಡಲಾಯಿತು. 2013 ಫೆಬ್ರವರಿಯಲ್ಲಿ ಪ್ರಸ್ತಾವಿತ ರು. 42 ಕೋಟಿಯಲ್ಲಿ ರು. 25.26 ಕೋಟಿ ಟೆಂಡರ್ಗೆ ಒಪ್ಪಿಗೆ ಸಿಕ್ಕಿತು.
ಆದರೆ ಈ ಕಂಪನಿ ಅನುಷ್ಠಾನಿಸುತ್ತಿರುವುದು ಸಬ್ಮರ್ಸಿಬಲ್ ಬರ್ಮ್ಸ್ನ್ನು. ರೀಫ್ ತಂತ್ರಜ್ಞಾನ ಸಮುದ್ರ ಮಧ್ಯದಲ್ಲಿ, ಬರ್ಮ್ಸ್ನಲ್ಲಿ ಸಮುದ್ರ ತೀರ ಆಳದಲ್ಲಿ ನಾಲ್ಕು ಮೀಟರ್ ವರೆಗಿನ ಮರಳ ಚೀಲವನ್ನು ಅಳವಡಿಸುವುದು.
ಕೊರೆತ ಇಲ್ಲದಲ್ಲಿ ಪ್ರಯೋಗ!: ಉಳ್ಳಾಲದ ಸಮ್ಮರ್ಸ್ಯಾಂಡ್, ಕೋಟೆಪುರ, ಹಿಲಾರಿ ನಗರ ಹಾಗೂ ಮುಕ್ಕಚ್ಚೇರಿ ಈ ನಾಲ್ಕು ಕಡೆಗಳಲ್ಲಿ ಸಬ್ಮರ್ಸಿಬಲ್ ಬರ್ಮ್ಸ್ ಅಳವಡಿಸಲು ಕಂಪನಿ ಹಾಗೂ ಕರಾವಳಿ ತೀರ ಸಂರಕ್ಷಣಾ ಯೋಜನೆ ನಿರ್ವಹಣೆ ಘಟಕ ಅಧಿಕಾರಿಗಳು ಸೇರಿ ಶಿಫಾರಸ್ಸು ಮಾಡಿದ್ದಾರೆ.
ಈ ಪೈಕಿ ಸಮ್ಮರ್ಸ್ಯಾಂಡ್ನಲ್ಲಿ ಕಡಲ್ಕೊರೆತ ಈ ವರೆಗೆ ಆಗಿಲ್ಲ. ವಿಪರ್ಯಾಸ ಎಂದರೆ, ಕಡಲ್ಕೊರೆತ ತಡೆಯ ಪ್ರಯೋಗ ನಡೆಯುವುದೇ ಇಲ್ಲಿ. ಬಂದರು ಇಲಾಖೆಯ ಬಾರ್ ಚಾರ್ಟ್ನಲ್ಲಿ ಕಡಲ್ಕೊರತೆ ಪ್ರದೇಶದಲ್ಲಿ ಸಮ್ಮರ್ಸ್ಯಾಂಡ್ನ ಉಲ್ಲೇಖವಿಲ್ಲ. ಆದರೆ ಅಲ್ಲಿಯೇ ಪ್ರಾಯೋಗಿಕ ತಂತ್ರಜ್ಞಾನ ಅಳವಡಿಸಬೇಕು ಎಂದು ಯಾಕೆ ನಿರ್ಧರಿಸಲಾಯಿತು ಎಂದರೆ ಅಧಿಕಾರಿಗಳಲ್ಲಿ ಖಚಿತ ಉತ್ತರ ಇಲ್ಲ.
ನಾಲ್ಕು ಕಡೆಗಳಲ್ಲಿ ನಾಲ್ಕು ಬರ್ಮ್ಸ್ ಅಳವಡಿಸಬೇಕಿದ್ದು, ಒಂದು ಬರ್ಮ್ಸ್ನಿಂದ 1.2 ಕಿ.ಮೀ. ವ್ಯಾಪ್ತಿಗೆ ಕೊರೆತ ಉಂಟಾಗದು ಎನ್ನುತ್ತಾರೆ ಅಧಿಕಾರಿಗಳು.
ಹಾಗಾದರೆ ನಾಲ್ಕು ಬರ್ಮ್ಸ್ ಯಾಕೆ ಎರಡೇ ಸಾಲದೇ? ಈ ಪ್ರಶ್ನೆಗೂ ಅಧಿಕಾರಿಗಳಲ್ಲಿ ಸ್ಪಷ್ಟತೆ ಇಲ್ಲ. ಕಡಲ್ಕೊರೆತ ಇಲ್ಲದಲ್ಲಿ ತಂತ್ರಜ್ಞಾನ ಯಾಕೆ ಅಳವಡಿಸುತ್ತೀರಿ ಎಂದು ಪ್ರಶ್ನಿಸಿದರೆ, ಕರಾವಳಿ ತೀರ ಸಂರಕ್ಷಣಾ ಯೋಜನೆ ನಿರ್ವಹಣಾ ಘಟಕ ಜಂಟಿ ನಿರ್ದೇಶಕ ಶಾಂತ ಕುಮಾರ್ ಸಮಜಾಯಿಸಿ-'ಅಲ್ಲಿ ಸಮೀಪದಲ್ಲೇ ಕಡಲ್ಕೊರೆತ ಇದೆ. ಹಾಗಾಗಿ ತಂತ್ರಜ್ಞಾನ ಅಳವಡಿಸಲಾಗುತ್ತದೆ' ಎನ್ನುತ್ತಾರೆ. ಒಟ್ಟಿನಲ್ಲಿ ರು. 25.26 ಕೋಟಿ ಅನುದಾನ ಪ್ರಯೋಗ ಹಂತದಲ್ಲೇ ವ್ಯರ್ಥ ಸಮುದ್ರ ಪಾಲಾಗುವ ಭೀತಿ ಎದುರಾಗಿದೆ.
-ಆತ್ಮಭೂಷಣ್