ಪೆರಿಯಶಾಂತಿ: ಮರ ಬಿದ್ದು ಸಂಚಾರ ವ್ಯತ್ಯಯ
ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಧರ್ಮಸ್ಥಳ- ಪೆರಿಯಶಾಂತಿ ರಾಜ್ಯ ಹೆದ್ದಾರಿಯ ಪೆರಿಯಶಾಂತಿ ಬಳಿ ಭಾರಿ ಗಾತ್ರದ ಮರವೊಂದು ರಸ್ತೆಗಡ್ಡವಾಗಿ ಬಿದ್ದ ಪರಿಣಾಮ ವಾಹನ ಸಂಚಾರ ತಡೆಗಟ್ಟಿ, ನೂರಾರು ಯಾತ್ರಾರ್ಥಿಗಳು ಮತ್ತು ಪ್ರಯಾಣಿಕರು ಸಂಕಷ್ಟಕ್ಕೆ ತುತ್ತಾದ ಘಟನೆ ಆದಿತ್ಯವಾರ ಮಧ್ಯಾಹ್ನ ನಡೆದಿದೆ.
ಭಾನುವಾರ ಮಧ್ಯಾಹ್ನದ ವೇಳೆ ಭಾರೀ ಗಾಳಿಯೊಂದಿಗೆ ಸುರಿದ ಮಳೆಗೆ ರಸ್ತೆ ಬದಿಯಿದ್ದ ಮರ ರಾಜ್ಯ ಹೆದ್ದಾರಿಗೆ ಅಡ್ಡವಾಗಿ ಬಿತ್ತು. ರಸ್ತೆಯಲ್ಲಿ ವಾಹನಗಳ ಸಂಚಾರ ಬಹಳಷ್ಟಿದ್ದರೂ ಅದೃಷ್ಟವಶಾತ್ ಈ ಸಂದರ್ಭದಲ್ಲಿ ಯಾವುದೇ ವಾಹನ ಅಪಘಾತಕ್ಕೆ ಸಿಲುಕಲಿಲ್ಲ.
ಘಟನೆ ಸಂಭವಿಸಿದಾಕ್ಷಣ ಅರಣ್ಯ ಇಲಾಖಾ ಸಿಬ್ಬಂದಿ ಮತ್ತು ಸಾರ್ವಜನಿಕರು ಜೊತೆಗೂಡಿ ಮರವನ್ನು ತೆರವುಗೊಳಿಸಿ, ರಸ್ತೆಯನ್ನು ಸಂಚಾರಮುಕ್ತಗೊಳಿಸಿದರು.
ನೆಲ್ಯಾಡಿ ಹೊರಠಾಣಾ ಪೊಲೀಸರೂ ಬದಲಿ ಮಾರ್ಗದಲ್ಲಿ ವಾಹನಗಳನ್ನು ಕಳುಹಿಸಿ, ಸಂಚಾರ ನಿಯಂತ್ರಿಸಿದರು.