ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಪ್ರತಿ ವರ್ಷ ಸಾವಿರಾರು ಮರಗಳ ಬಲಿ

Lingaraj Badiger
Updated On : 22 Jul 2013, 2:07 am

-ಮೌನೇಶ ವಿಶ್ವಕರ್ಮ
ಬಂಟ್ವಾಳ: ಒಂದೆಡೆ ಸಾಲು ಮರ, ಇನ್ನೊಂದೆಡೆ ಅಯ್ಯೋ ಮರ... ಹೌದು ಕಾಡು ಬೆಳೆಸಿರಣ್ಣ ನೀವು ನಾಡು ಉಳಿಸಿರಣ್ಣಾ... ಎಂದು ಅರಣ್ಯ ಇಲಾಖೆ ಹೇಳುತ್ತಿದ್ದರೂ ವಿವಿಧ ಕಾರಣಗಳಿಂದ ಬಂಟ್ವಾಳ ತಾಲೂಕಿನಲ್ಲಿ  ಮರಗಳ ಸಂಖ್ಯೆ ಕಡಿಮೆಯಾಗುತ್ತಿದೆ.
ಪ್ರತೀ ವರ್ಷ ವನಮಹೋತ್ಸವ, ಮನೆಗೊಂದು ಗಿಡ ಅಭಿಯಾನ, ಗಿಡ ನೆಡುವ ಕಾರ್ಯಕ್ರಮ, ನೆಡುತೋಪು ಹೀಗೆ ವಿವಿಧ ಕಾರ್ಯಕ್ರಮಗಳನ್ನು ಅರಣ್ಯ ಇಲಾಖೆ, ಸಂಘ ಸಂಸ್ಥೆಗಳು ನಡೆಸಿಕೊಂಡು ಬಂದಿದೆಯಾದರೂ, ಅದರ ಎರಡು ಪಟ್ಟು ಗಿಡಮರಗಳು ನಾಶವಾಗುವಂತ ಯೋಜನೆಗಳನ್ನು ಸರ್ಕಾರ, ಉದ್ದಿಮೆಗಳು ಅನುಷ್ಠಾನಗೊಳಿಸುತ್ತಿದೆ.
ರಸ್ತೆ ಅಗಲೀಕರಣ, ಸೆಝ್, ಉದ್ದಿಮೆ ಸ್ಥಾಪನೆ, ಅಣೆಕಟ್ಟು ನಿರ್ಮಾಣ, ಕಟ್ಟಡ ನಿರ್ಮಾಣ, ಮೈದಾನ ರಚನೆ, ಮರಗಳ್ಳರ ಹಾವಳಿ ಇವೇ ಮೊದಲಾದ ಕಾರಣಗಳಿಗೆ ಪ್ರತೀ ವರ್ಷ ಸಾವಿರಾರು ಮರಗಳು ಬಲಿಯಾಗುತ್ತಿವೆ.
ಇವೆಲ್ಲದರ ನಡುವೆ ಬಂಟ್ವಾಳ ತಾಲೂಕಿನಲ್ಲಿ ಕಾಡು ಸಂರಕ್ಷಣೆಯ ಹಲವು ಸರ್ಕಾರಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಪ್ರಾಮಾಣಿಕ ಪ್ರಯತ್ನ ಇಲಾಖೆಯಿಂದ ನಡೆಯುತ್ತಿದೆ. ಈ ವರ್ಷ 100 ಹೆಕ್ಟೇರ್ ಪ್ರದೇಶದಲ್ಲಿ ನೆಡುತೋಪು ಬೆಳೆಸುವ ಗುರಿ ಹೊಂದಲಾಗಿದ್ದು, ಈ ಬಗ್ಗೆ ಅರಣ್ಯ ಇಲಾಖೆ ಯೋಜನೆಯನ್ನೂ ರೂಪಿಸಿದೆ.
ಆರಣ್ಯ ಇಲಾಖೆಯಿಂದ ಪ್ರಾಯಶ್ಚಿತ..: ಕಳೆದ ವರ್ಷ ಅನಂತಾಡಿ ಗ್ರಾಮ ಪಂಚಾಯಿತಿ ಹಾಗೂ ವಾಮದಪದವು ಸಮೀಪದ ಗ್ರಾ.ಪಂ. ವ್ಯಾಪ್ತಿಯಲ್ಲಿ  ಅರಣ್ಯ ಇಲಾಖೆ ನೆಟ್ಟು ಬೆಳೆಸಿದ ಸಾಲು ಮರಗಳ ಸಾಲು ಗಮನ ಸೆಳೆಯುತ್ತಿದೆ. ಇನ್ನು ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಚತುಷ್ಪಥ ರಸ್ತೆ ನಿರ್ಮಾಣಕ್ಕೆಂದು ಹೆದ್ದಾರಿ ಇಲಾಖೆ ಸಾವಿರಕ್ಕೂ ಅಧಿಕ ಮರಗಳನ್ನು ಕಡಿದಿರುವುದಕ್ಕೆ ಅರಣ್ಯ ಇಲಾಖೆ ನಾಲ್ಕು ಸಾವಿರ ಸಾಲು ಮರಗಳನ್ನು ನೆಟ್ಟು ಪ್ರಾಯಶ್ಚಿತ್ತ ಮಾಡಿಕೊಂಡಿದೆ. ಬಿ.ಸಿ. ರೋಡ್‌ನಿಂದ ಫರಂಗಿಪೇಟೆವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಕಂಗೊಳಿಸುವ ಈ ಸಾಲು ಮರಗಳ ಸಾಲು ಹೆದ್ದಾರಿಯ ಮೆರುಗು ಹೆಚ್ಚಿಸಿದೆ.
ಬಂಟ್ವಾಳದಲ್ಲಿ ವಲಯ ಅರಣ್ಯ ಇಲಾಖೆ ಕಳೆದ ವರ್ಷ ಮಗುವಿಗೊಂದು ಮರ- ಶಾಲೆಗೊಂದು ವನ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾಗೊಳಿಸಿದ್ದು, ಸಾವಿರಾರು ಮರಗಳನ್ನು ವಿತರಿಸಿದೆ. ಶಾಲೆಗಳ ಮೂಲಕ ಮಕ್ಕಳ ಮನೆಗಳಿಗೆ ಗಿಡಗಳನ್ನು ತಲುಪಿಸಿದೆ. ಈ ಬಾರಿ ಆ ಯೋಜನೆ ಇಲ್ಲವಾಗಿದ್ದು ಮುಂದಿನ ವರ್ಷ ಮತ್ತೆ ಈ ಯೋಜನೆ ಕಾರ್ಯರೂಪಕ್ಕೆ ಬರಲಿದೆ.
ಯಾವ್ಯಾವ ಸಸಿ ಕೊಡ್ತಾರೆ..?: ಅರಣ್ಯ ಇಲಾಖೆ ಸರ್ಕಾರದ ಸೂಚನೆಯಂತೆ ವಿವಿಧ ಜಾತಿಯ ಸಸಿಗಳ ವಿತರಣೆ ಮಾಡುತ್ತಿದೆ. ರೈತರಿಂದ ಜಮೀನಿನ ಅಗತ್ಯ ದಾಖಲೆಗಳನ್ನು ಪಡೆದು ಅರಣ್ಯ ಇಲಾಖೆಗಳ ಸಸ್ಯ ಕ್ಷೇತ್ರಗಳಿಂದ ನೇರವಾಗಿ ಸುಮಾರು 20ಕ್ಕೂ ಅಧಿಕ ಜಾತಿಯ ಸಸಿಗಳನ್ನು ವಿತರಿಸುತ್ತಿದೆ. ಅಕೇಶಿಯಾ, ಮಹಾಗನಿ, ಹಲಸು, ಬಾದಾಮಿ, ನೇರಳೆ, ಶ್ರೀಗಂಧ, ಬೀಟೆ, ಸಾಗುವಾನಿ, ಹೊಳೆ ದಾಸವಾಳ, ರೆಂಜೆ, ಬೇಂಗ, ಧೂಪ, ಪುನರ್ ಪುಳಿ, ದಾಲ್ಚಿನಿ ಇವೇ ಮೊದಲಾದವುಗಳು ಅರಣ್ಯ ಇಲಾಖೆಯಲ್ಲಿ ಲಭ್ಯವಿರುವುದು.
 55 ಸಾವಿರ ಸಸಿ ವಿತರಣೆಯ ಗುರಿ..: ಈ ವರ್ಷ ಬಂಟ್ವಾಳ ಅರಣ್ಯ ಇಲಾಖೆಯಿಂದ ವಿವಿಧ ಯೋಜನೆಗಳ ಮೂಲಕ 55 ಸಾವಿರ ಸಸಿಗಳ ವಿತರಣೆಯ ಗುರಿ ಇರಿಸಲಾಗಿದೆ ಎಂದು ಬಂಟ್ವಾಳ ವಲಯ ಅರಣ್ಯಾಧಿಕಾರಿ ಸುಬ್ರಹ್ಮಣ್ಯ ರಾವ್ ಎನ್. ತಿಳಿಸಿದ್ದಾರೆ.
'ಕನ್ನಡಪ್ರಭ' ದೊಂದಿಗೆ ಮಾತನಾಡಿದ ಅವರು, ಈಗಾಗಲೇ ಸುಮಾರು 10 ಸಾವಿರ ಸಸಿಗಳ ವಿತರಣೆ ನಡೆಸಲಾಗಿದ್ದು, ಜುಲೈ ತಿಂಗಳಿನಲ್ಲಿ ವಿತರಣೆ ಪೂರ್ಣಗೊಳಿಸಲಾಗುವುದು. ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ ರೈತರನ್ನು ಪ್ರೋತ್ಸಾಹಿಸುವ ವಿಭಿನ್ನ ಯೋಜನೆಯಾಗಿದ್ದು, ಹಳ್ಳಿ ಪ್ರದೇಶದ ರೈತರು ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಈ ಯೋಜನೆಯನ್ವಯ ರಿಯಾಯಿತಿ ದರದಲ್ಲಿ ರೈತರಿಗೆ ಸಸಿಗಳ ವಿತರಣೆ ಮಾಡಲಾಗುವುದು ಹಾಗೂ ಸಸಿಗಳ ಗಾತ್ರಕ್ಕೆ ಆಧರಿಸಿ, ಮೂರು ವರ್ಷಗಳ ಕಾಲ ಪ್ರೋತ್ಸಾಹಧನ ವಿತರಿಸಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಅರಣ್ಯ ಇಲಾಖೆಯನ್ನು ಸಂಪರ್ಕಿಸಬಹುದು ಎಂದು ಹೇಳಿದ್ದಾರೆ.
ಬಂಟ್ವಾಳ ಕ್ಷೇತ್ರದ ಶಾಸಕ ಬಿ. ರಮಾನಾಥ ರೈಯವರೇ ಇದೀಗ ರಾಜ್ಯ ಅರಣ್ಯ ಸಚಿವರಾಗಿರುವುದು ಅರಣ್ಯ ಇಲಾಖಾ ಕೆಲಸಗಳಿಗೆ ಚುರುಕು ಮುಟ್ಟಿಸಿದಂತಾಗಿದೆ. ಭೂ ಪ್ರದೇಶದ ಶೇ.33 ರಷ್ಟು ಪ್ರದೇಶವು ಅರಣ್ಯದಿಂದ ಕೂಡಿರಬೇಕು ಎಂಬ ರಾಷ್ಟ್ರೀಯ ಅರಣ್ಯ ನೀತಿಯ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಅರಣ್ಯ ಇಲಾಖೆಯ ಕಾರ್ಯಕ್ರಮಗಳಿಗೆ ಸಾರ್ವಜನಿಕರ ಸಹಕಾರ ಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement