ಮಲೆಕುಡಿಯರಿಗೆ ಉದ್ಯೋಗ: ಡಿವೈಎಫ್‌ಐ ವಿರೋಧ
ಮಂಗಳೂರು: ಆದಿವಾಸಿ ಬುಡಕಟ್ಟು ಕುಟುಂಬಗಳ ಯುವಕರನ್ನು ಗೃಹರಕ್ಷಕ ದಳಕ್ಕೆ ಸೇರಿಸುವ ಪೊಲೀಸರ ಕ್ರಮವನ್ನು ದ.ಕ. ಜಿಲ್ಲಾ ಡಿವೈಎಫ್‌ಐ ಖಂಡಿಸಿದೆ. ಈಗಾಗಲೇ 21 ಮಲೆಕುಡಿಯ ಯುವಕರನ್ನು ಗೃಹರಕ್ಷಕ ದಳಕ್ಕೆ ಸೇರಿಸಿಕೊಳ್ಳಲಾಗಿದ್ದು, ಮತ್ತಷ್ಟು ಯುವಕರನ್ನು ಸೇರಿಸಿಕೊಳ್ಳುವುದರಿಂದ ಪೊಲೀಸ್ ಮತ್ತು ಆದಿವಾಸಿಗಳ ನಡುವಿನ ಸಂಪರ್ಕ ಹೆಚ್ಚಾಗಲಿದೆ ಎಂಬ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಗೋಯಲ್ ಹೇಳಿಕೆಯನ್ನು ಡಿವೈಎಫ್‌ಐ ವಿರೋಧಿಸಿದೆ. ಗೃಹ ರಕ್ಷಕದಳ ಎಂಬುದು ಒಂದು ಉದ್ಯೋಗವೇ ಅಲ್ಲ, ಕೂಲಿ ಕೆಲಸದ ರೀತಿ ಅಲ್ಲಿ ನಿರಂತರತೆ ಇಲ್ಲ. ಗ್ರಾಮೀಣ ಪ್ರದೇಶದಲ್ಲಿ ಕೂಲಿ ಕಾರ್ಮಿಕರಿಗೆ ರು. 300 ಕನಿಷ್ಠ ವೇತನ ಇರುವಾಗ ರು. 250 ನೀಡಿ ಗೃಹರಕ್ಷಕ ದಳಕ್ಕೆ ಸೇರಿಸಿಕೊಳ್ಳುತ್ತೇವೆ ಎಂಬುದು ಸಾಧನೆಯೇ ಅಲ್ಲ ಎಂದು ಡಿವೈಎಫ್‌ಐ ಟೀಕಿಸಿದೆ. ಮಲೆಕುಡಿಯರಿಗೆ ಈ ನೇಮಕದಲ್ಲಿ ವಿಶೇಷ ಪ್ರಾಶಸ್ತ್ಯ ನೀಡಿದ್ದೇವೆ ಎಂಬ ನಾಟಕ ವನ್ನು ಅಭಿಷೇಕ್ ಗೋಯಲ್ ನಿಲ್ಲಿಸಬೇಕು. ಗೃಹರಕ್ಷಕ ದಳಕ್ಕೆ ಸೇರಲು ಯಾವುದೇ ಶಿಫಾರಸುಗಳ ಅಗತ್ಯವಿಲ್ಲ. ಯಾವುದೇ ನಿರುದ್ಯೋಗಿಗಳು ಸೇರಬಹುದು. ಪೊಲೀಸ್ ಇಲಾಖೆ ಮತ್ತು ಸರ್ಕಾರಕ್ಕೆ ಮಲೆಕುಡಿಯ ಸಮುದಾಯದ ಮೇಲೆ ನಿಜವಾದ ಕಾಳಜಿಯಿದ್ದರೆ ಸಮುದಾಯದ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ವಿಠಲ ಮಲೆಕುಡಿಯರಂತಹ ಉನ್ನತ ಶಿಕ್ಷಣ ಹಂಬಲದ ಯುವಕರನ್ನು ಶಿಕ್ಷಣ ವಂಚಿತರಾಗಿ ಮಾಡುವ ಕೃತ್ಯ ನಿಲ್ಲಿಸಬೇಕು. ಇದನ್ನೆಲ್ಲಾ ಬಿಟ್ಟು ಮಲೆಕುಡಿಯರ ಭವಿಷ್ಯದ ಜತೆ ಚೆಲ್ಲಾಟವಾಡಬಾರದು ಎಂದು ಡಿವೈಎಫ್‌ಐ ಜಿಲ್ಲಾಧ್ಯಕ್ಷ ಮುನೀರ್ ಕಾಟಿಪಳ್ಳ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.