ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಮಾಣಿ ಮಠದಲ್ಲಿ ರಾಘವೇಶ್ವರ ಶ್ರೀಗಳ ಚಾತುರ್ಮಾಸ್ಯ

Lingaraj Badiger
Updated On : 22 Jul 2013, 2:07 am

ವಿಟ್ಲ: ಮಾಣಿಯ ಶ್ರೀರಾಮಚಂದ್ರಾಪುರ ಮಠದಲ್ಲಿ ಜು.22ರಿಂದ ಸೆ.19ರವರೆಗೆ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ವಿಜಯ ಚಾತುರ್ಮಾಸ್ಯ ನಡೆಯಲಿದೆ.
ಇದು ಶ್ರೀಗಳ 20ನೇ ಚಾತುರ್ಮಾಸ್ಯವಾಗಿದ್ದು, ಹನುಮನ ಸನ್ನಿಧಿಯಲ್ಲಿ ಜರುಗಲಿರುವುದರಿಂದ ಹನುಮನಿಗೆ ಸಮರ್ಪಿತವಾಗಲಿದೆ. ಸೆ.19ರಂದು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನಕ್ಕೆ ಹೋಗುವ ಮೂಲಕ ಸೀಮೋಲ್ಲಂಘನೆ ನಡೆಯಲಿದೆ.
ಚಾತುರ್ಮಾಸ್ಯ ಎಂದರೆ: ಚಾತುರ್ಮಾಸ್ಯ ಎಂಬುದು ಒಂದು ಯತಿವಿಧಿ. ಸದಾ ಸಂಚಾರದಲ್ಲಿರುತ್ತಾ ಜನತಗೆ ಧರ್ಮ ಮಾರ್ಗ ಬೋಧನೆ ಮಾಡುವ ಸರ್ವ ಸಂಗ ಪರಿತ್ಯಾಗಿಗಳಾದ ಸಂತ ಶ್ರೇಷ್ಠ ಸನ್ಯಾಸಿಗಳು ಆಚರಿಸಬೇಕಾದ ವಾರ್ಷಿಕ ನಿಯಮ.
ಹಂಸಗಳು ಮಳೆಗಾಲದಲ್ಲಿ ತಮ್ಮ ಮೂಲಸ್ಥಾನವಾದ ಹಿಮಾಲಯದ ಮಾನಸ ಸರೋವರಕ್ಕೆ ಹೋಗುತ್ತವೆ ಎಂಬುದು ನಂಬಿಕೆಯಾದರೆ, ಯತಿಗಳೂ ಸಹ 8 ತಿಂಗಳು ಸಮಾಜಮುಖಿಗಳಾಗಿರುವುದರಿಂದ ಮಳೆಗಾಲದ 4 ತಿಂಗಳು ಒಂದೇ ಕಡೆ ಇದ್ದು ಧ್ಯಾನ ಪಾರಾಯಣರಾಗಿ ಪರಮಾತ್ಮನ ಸಾನಿಧ್ಯವನ್ನು ಸಂದರ್ಶಿಸುತ್ತಾರೆ. ಮಳೆಗಾಲದಲ್ಲಿ ಸೂಕ್ಷ್ಮಾಣು ಜೀವಿಗಳು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಅವುಗಳಿಗೆ ತಮ್ಮಿಂದ ಬಾಧಕವಾಗದಂತೆ ತಾವು ಸನ್ಯಾಸ ಸ್ವೀಕರಿಸುವಾಗ ಎಲ್ಲ ಜೀವಿಗಳಿಗೂ ಅಭಯವನ್ನಿತ್ತ ಮಾತಿನ ಹಿನ್ನೆಲೆಯು ಈ ವಿಧಿಗೆ ಪೋಷಕವಾಗಿದೆ.
ಚಾತುರ್ಮಾಸ್ಯ 4 ತಿಂಗಳಿನ ವ್ರತ. ಆದರೆ, ಪಕ್ಷವನ್ನೂ ಮಾಸ ಎಂದು ಪರಿಗಣಿಸುವ ವಿಧಿ ಇರುವುದರಿಂದಾಗಿ ಆಷಾಢ ಪೌರ್ಣಮಿ ದಿನದಿಂದ ಆರಂಭಿಸಿ 4 ಪಕ್ಷಗಳ ಕಾಲ ಚಾತುರ್ಮಾಸ್ಯ ಎಂಬ ವ್ಯವಹಾರ ಚಾಲ್ತಿಯಲ್ಲಿದೆ. ಲೋಕ ಗುರುವಾದ ವ್ಯಾಸ ಸಂಬಂಧಿಯಾದ ಗುರು ಪೌರ್ಣಿಮಿ ದಿನದಂದೇ ಚಾತುರ್ಮಾಸ್ಯದ ಆರಂಭ. ಅಂದು ವಿಶೇಷವಾಗಿ ಪೂಜೆ ಸಲ್ಲುವುದು- ಶ್ರೀಕೃಷ್ಣ, ವೇದ ವ್ಯಾಸರು, ಗೌಡ ಪಾದಾಚಾರ್ಯರು, ಸನಕಸನಂದನಾದಿಗಳು, ಗೋವಿಂದ ಭಗವತ್ಪಾದರು, ಲೋಕದಲ್ಲಿ ಮಠದ ಸಂಸ್ಕೃತಿಯನ್ನು ಪ್ರಾರಂಭಿಸಿದ ಶ್ರೀಮದಾಚಾರ್ಯ ಶಂಕರ ಭಗವತ್ಪಾದರು ಮತ್ತು ಅವರ ಪರಂಪರೆಯಲ್ಲಿ ಬಂದ ಎಲ್ಲ ಆಚಾರ್ಯ ಶ್ರೇಷ್ಠರಿಗೆ.
ವಿಶಾಲ ಮಂಟಪದಲ್ಲಿ ಅಕ್ಕಿ ರಾಶಿಯನ್ನು ಹಾಕಿ ನಿಂಬೆಯ ಹಣ್ಣುಗಳನ್ನಿಟ್ಟು ಆವಾಜಿಸಿ ಅರ್ಚಿಸಲಾಗುತ್ತದೆ. ಪೂಜಾ ಸಮಾಪ್ತಿಯ ನಂತರ ಅದನ್ನೇ ವ್ಯಾಸ ಮಂತ್ರಾಕ್ಷತೆಯನ್ನಾಗಿ ಶಿಷ್ಯರಿಗೆ ಅನುಗ್ರಹಿಸಲಾಗುತ್ತದೆ. ಪ್ರತಿಯೋರ್ವ ಶಿಷ್ಯನು ವರ್ಷದಲ್ಲಿ ಒಮ್ಮೆಯಾದರೂ ಗುರು ಮಠಕ್ಕೆ ಹೋಗಿ ಶ್ರೀ ಗುರುಗಳನ್ನು ಸಂದರ್ಶಿಸಿ ಅನುಗ್ರಹ ಪಡೆಯಬೇಕು. ಉಳಿದ ಸಮಯದಲ್ಲಿ ಅಸಾಧ್ಯವಾದರೂ ಚಾತುರ್ಮಾಸ್ಯದಲ್ಲಿ ಒಮ್ಮೆಯಾದರೂ ಹೋಗಿ ಮಂತ್ರಾಕ್ಷತೆಯನ್ನು ಶ್ರೀ ಗುರುವಿನ ಅನುಗ್ರಹವನ್ನು ಪಡೆಯಬೇಕು ಎಂಬುದು ಶ್ರೀ ಮಠದ ಶಿಷ್ಯರಲ್ಲಿ ಬಂದಿರುವ ಅಚಲವಾದ ನಂಬಿಕೆ.
ಅವಿಚ್ಛಿನ್ನ ಪರಂಪರೆಯ ಶ್ರೀ ಮಹಾಸಂಸ್ಥಾನದ ಈಗಿನ ಪೀಠಾಧಿಪತಿಗಳಾಗಿರುವ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಅವರು ಪರಮಪೂಜ್ಯರೂ, ಮಹಾನ್ ತಪಸ್ವಿಗಳೂ, ಶ್ರೇಷ್ಠ ವಿದ್ವಾಂಸರೂ ಆಗಿದ್ದ ಬ್ರಹ್ಮಲೀನ ಶ್ರೀರಾಘವೇಂದ್ರ ಭಾರತೀ ಮಹಾಸ್ವಾಮಿಗಳವರಿಂದ 1994ರ ಏಪ್ರಿಲ್‌ನಲ್ಲಿ ಸನ್ಯಾಸ ದೀಕ್ಷೆ ಪಡೆದರು. 1999ರ ಏಪ್ರಿಲ್‌ನಲ್ಲಿ ಪೀಠಾರೋಹಣ ಮಾಡಿದಂದಿನಿಂದ ಜಗತ್ತಿನ ಶಾಂತಿ ಸಮೃದ್ಧಿಗಾಗಿ ತಮ್ಮನ್ನು ಸಮರ್ಪಿಸಿಕೊಂಡರು.
ರಾಮ ಕಥೆ: ಚಾತುರ್ಮಾಸ್ಯದ ಈ 60 ದಿನಗಳಲ್ಲಿ ಏಳು ದಿನಗಳ 3 ಕಂತಿನ ರಾಮ ಕಥಾ ಕಾರ್ಯಕ್ರಮವನ್ನು ರಾಘವೇಶ್ವರ ಶ್ರೀಗಳು  ನಡೆಸಿಕೊಡುವರು. ಇದರೊಂದಿಗೆ ಗೀತೆ, ವಾದ್ಯ, ನೃತ್ಯ, ಚಿತ್ರ, ರೂಪಕ ಇತ್ಯಾದಿ ಕಲಾ ವೈವಿಧ್ಯ, ವಿವಿಧ ಸಮಾವೇಶ ನಡೆಯಲಿದೆ. ಜೊತೆಗೆ ಪ್ರತಿದಿನ ಧರ್ಮ ವಿಭಾಗದಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಸುಮಾರು 1 ರಿಂದ 1,50,000 ಲಕ್ಷ ಜನ ಭಾಗವಹಿಸುವ ನಿರೀಕ್ಷೆ ಇರುವುದರಿಂದ ಉತ್ತಮವಾದ ಪಾಕ ಶಾಲೆಯನ್ನು ನಿರ್ಮಿಸಲಾಗಿದೆ. ಸ್ಟೀಮ್ ಸಿಸ್ಟಮ್ ಅಳವಡಿಸಲಾಗಿದೆ. ದಿನಂಪ್ರತಿ ಪ್ರಸಾದ ಭೋಜನ ವ್ಯವಸ್ಥೆ ಇದೆ. ದೂರದ ಊರಿಂದ ಬಂದವರಿಗೆ ಉಚಿತ ವಸತಿ ವ್ಯವಸ್ಥೆ ಕೂಡಾ ಇದೆ. ಮಾಣಿಯಿಂದ ಮಠದವರೆಗೆ ಬರುವ ಭಕ್ತಾಧಿಗಳಿಗೆ ಉಚಿತ ವಾಹನ ವ್ಯವಸ್ಥೆ, ಇದರೊಂದಿಗೆ ವಿಶೇಷವಾಗಿ ಪ್ರತಿ ದಿನ ಗೋವು ತುಲಾಭಾರ ನಡೆಸಲಾಗುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement