ಗುರುತತ್ವದಿಂದ ಧರ್ಮಪಾಲನೆ: ಕನ್ಯಾಡಿ ಶ್ರೀ
ಬೆಳ್ತಂಗಡಿ: ಗುರುತತ್ವ ಅನುಸರಿಸಿದರೆ ಸತ್ಯ, ಧರ್ಮ ಪಾಲನೆ ಮಾಡಿದಂತೆ ಎಂದು ಕನ್ಯಾಡಿ ಶ್ರೀಗುರುದೇವ ಮಠದ ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ಹೇಳಿದ್ದಾರೆ.
ಧರ್ಮಸ್ಥಳ ನಿತ್ಯಾನಂದ ನಗರದ ಶ್ರೀರಾಮಕ್ಷೇತ್ರದಲ್ಲಿ ಸೋಮವಾರ ಶ್ರೀ ಗುರುಪೂರ್ಣಿಮೆ ನಿಮಿತ್ತ ಗುರುಪೂಜೆ ಸ್ವೀಕರಿಸಿ ಅವರು ಆಶೀರ್ವಚನ ನೀಡಿದರು.
ನಮ್ಮ ಶರೀರ ಇರುವುದು ಆತ್ಮ ಸಾಕ್ಷಾತ್ಕಾರಕ್ಕಾಗಿ. ಮನುಷ್ಯನಿಗೆ ಮನುಷ್ಯನಾಗಿ ಬಾಳುವ ವಿದ್ಯೆ ಅಗತ್ಯ. ಇಂದಿನ ಸರ್ಟಿಫಿಕೆಟ್ ವಿದ್ಯೆಗಳಿಂದ ಇಂದ್ರಿಯ ನಿಗ್ರಹ ಮಾತು ದೂರವೇ ಉಳಿದಿದೆ. ಪಾರಮಾರ್ಥಿಕ ವಿದ್ಯೆಗೆ ಮಠ ಮಾನ್ಯಗಳು ಪ್ರೋತ್ಸಾಹ ನೀಡುತ್ತವೆಯೇ ಹೊರತು ಸರ್ಕಾರಕ್ಕೆ ಇದು ಬೇಡವಾಗಿದೆ ಎಂದು ಸ್ವಾಮೀಜಿ ಹೇಳಿದರು.
ಕಿರೀಟ ಧಾರಣೆ: ಇದೇ ವೇಳೆ ಸ್ವಾಮೀಜಿಗೆ ಪಾದಪೂಜೆ, ಕಿರೀಟ ಧಾರಣೆ, ಪೀಠಾರೋಹಣ ನಡೆದವು. ಉಜಿರೆ ಎಸ್ಡಿಎಂ ಕಾಲೇಜಿನ ಸಂಸ್ಕೃತ ಉಪನ್ಯಾಸಕ ಎ. ಮಹಾಬಲ ಭಟ್ ಹಾಗೂ ಜ್ಯೋತಿಷಿ ವೆಂಕಟೇಶ ಕಿಣಿ ದಿನದ ಮಹತ್ವದ ಬಗ್ಗೆ ವಿವರಿಸಿದರು.
ಮಾಜಿ ಶಾಸಕರಾದ ಪ್ರಭಾಕರ ಬಂಗೇರ, ರುಕ್ಮಯ ಪೂಜಾರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಚಿತ್ತರಂಜನ್, ಜೆ.ಎನ್. ನಾಯ್ಕ, ಸಿಸರ್ ಭೀಮಣ್ಣ ನಾಯ್ಕ, ಗೋವಿಂದ ನಾಯ್ಕ ಭಟ್ಕಳ, ಎಲ್.ಎಸ್. ನಾಯ್ಕ, ಯೋಗೀಶ್ ಕುಮಾರ್, ವಸಂತ ಪುದುವೆಟ್ಟು, ಧರ್ಮಸ್ಥಳ ಗ್ರಾ.ಪಂ. ಉಪಾಧ್ಯಕ್ಷ ಸೂರ್ಯ ಪ್ರಕಾಶ್ ಇದ್ದರು.
ಇದಕ್ಕೂ ಮೊದಲು ಧರ್ಮಸ್ಥಳ ಕಮಲಾಕ್ಷ ಬಳಗದಿಂದ ರಸಮಂಜರಿ ನಡೆಯಿತು. ಶ್ರೀ ರಾಮಕ್ಷೇತ್ರದ ಟ್ರಸ್ಟಿ ತುಕಾರಾಮ್ ಸ್ವಾಗತಿಸಿ, ವಂದಿಸಿದರು.