ತಗಡು ಶೀಟ್ ಬಿದ್ದು 5 ಮಕ್ಕಳಿಗೆ ಗಾಯ
ಬೆಳ್ತಂಗಡಿ: ಶಾಲೆಯಲ್ಲಿ ಕಾರ್ಯಕ್ರಮವೊಂದರ ನಿಮಿತ್ತ ಹಾಕಿದ್ದ ಚಪ್ಪರದ ತಗಡು ಶೀಟ್ಗಳು ಭಾರಿ ಗಾಳಿಗೆ ಕೆಳಗೆ ಬಿದ್ದು 5 ಮಕ್ಕಳು ಗಾಯಗೊಂಡ ಘಟನೆ ಮಡಂತ್ಯಾರಿನಲ್ಲಿ ಸೋಮವಾರ ನಡೆದಿದೆ.
ಮಡಂತ್ಯಾರಿನ ಸೇಕ್ರೆಡ್ ಹಾರ್ಟ್ ಸಂಸ್ಥೆಗೆ ಸೇರಿದ ಗಾರ್ಡಿಯನ್ ಏಂಜಲ್ಸ್ ಪ್ರೌಢಶಾಲೆಯಲ್ಲಿ ವಾರ್ಷಿಕ ಪ್ರತಿಭಾ ದಿನಾಚರಣೆ ನಡೆಯುತ್ತಿತ್ತು. ಮಧ್ಯಾಹ್ನ ವೇಳೆಗೆ ಬೀಸಿದ ಭಾರಿ ಗಾಳಿಗೆ ತಾತ್ಕಾಲಿಕವಾಗಿ ನಿರ್ಮಿಸಿದ ಸಭಾ ಚಪ್ಪರದ ಶೀಟ್ಗಳು ಹಾರಿದವು. ಈ ಪೈಕಿ ಶೀಟ್ವೊಂದು ಮಕ್ಕಳ ಸಮೂಹದ ಮೇಲೆ ಬಿದ್ದ ಪರಿಣಾಮ ಐವರಿಗೆ ಗಾಯಗಳಾದವು. ಗಂಭೀರ ಗಾಯಗೊಂಡವರನ್ನು ತುಂಬೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು, ಇತರ ಮಕ್ಕಳಿಗೆ ಸ್ಥಳೀಯವಾಗಿ ಚಿಕಿತ್ಸೆ ಕೊಡಿಸಲಾಗಿದೆ. ಪೂಂಜಾಲಕಟ್ಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ತಮ್ಮ ಪ್ರತಿನಿಧಿಯನ್ನು ಪರಿಶೀಲನೆಗೆ ಕಳುಹಿಸಿದ್ದಾರೆ. ಈ ಪ್ರೌಢಶಾಲೆಯಲ್ಲಿ ಇದ್ದ ಸಭಾಂಗಣವನ್ನು ಕಾಲೇಜಿನ ಹೊಸ ವಿಭಾಗಕ್ಕೆ ಬಿಟ್ಟು ಕೊಡಲಾಗಿದ್ದು, ಸಭಾ ಕಾರ್ಯಕ್ರಮಕ್ಕಾಗಿ ತಾತ್ಕಾಲಿಕ ಸಭಾಂಗಣ ನಿರ್ಮಿಸಲಾಗಿತ್ತು.