ನಿಡ್ಡೋಡಿ ಸ್ಥಾವರ ವಿರುದ್ಧ ನಳಿನ್ ಹೋರಾಟ ಘೋಷಣೆ
ಮಂಗಳೂರು: 'ನಿಡ್ಡೋಡಿಯಲ್ಲಿ ಬೃಹತ್ ಉಷ್ಣವಿದ್ಯುತ್ ಸ್ಥಾವರ ನಿರ್ಮಾಣ ವಿರುದ್ಧ ಇಂದಿನಿಂದಲೇ ಹೋರಾಟ ಶುರು ಮಾಡಿದ್ದೇನೆ, ಸಂಸತ್ ಅಧಿವೇಶನದಲ್ಲಿ ಈ ಬಗ್ಗೆ ದನಿ ಎತ್ತುತ್ತೇನೆ' ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಘೋಷಿಸಿದರು.
ನಿಡ್ಡೋಡಿ ಪ್ರದೇಶಕ್ಕೆ ಸೋಮವಾರ ಭೇಟಿ ನೀಡಿ ಕೃಷಿ ಭೂಮಿ ಪರಿಶೀಲಿಸಿದ ಬಳಿಕ ಮಾತನಾಡಿದರು. ಸುತ್ತಲೂ ಹಚ್ಚ ಹಸಿರಿನ ಕೃಷಿ ಭೂಮಿಯನ್ನು ಬಂಜರು ಭೂಮಿ ಎಂದು ಹೇಳಿ, ಇಲ್ಲಿನ ಧಾರಣಾ ಸಾಮಾರ್ಥ್ಯ ಅಧ್ಯಯನ ನಡೆಸದೆ ಉಷ್ಣ ವಿದ್ಯುತ್ ಸ್ಥಾವರ ಹೇರಲಾಗಿದೆ. ಇಲ್ಲಿ ಸ್ಥಾವರ ನಿರ್ಮಾಣ ಮತ್ತು ಪರಿಸರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲದ ಕಾರಣ ಇಲ್ಲಿಗೆ ಭೇಟಿ ನೀಡಿದ್ದೇನೆ. ಫಲವತ್ತಾದ ಭೂಮಿಯನ್ನು ಸ್ಥಾವರಕ್ಕೆ ಬಿಟ್ಟುಕೊಡಲು ಸಾಧ್ಯವೇ ಇಲ್ಲ ಎಂದು ಹೇಳಿದರು.
ಇದು ರಾಜಕೀಯ ರಹಿತ ಹೋರಾಟ. ಚುನಾವಣೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಕಳೆದ ಬಾರಿ ಸಂಸತ್ನಲ್ಲಿ ಈ ಬಗ್ಗೆ ಪ್ರಶ್ನೆ ಕೇಳಲು ಸಾಧ್ಯವಾಗಿರಲಿಲ್ಲ. ಕೇಂದ್ರ ಇಂಧನ ಸಚಿವರಲ್ಲಿ ಸ್ಪಷ್ಟ ಮಾಹಿತಿ ಪಡೆಯುತ್ತೇನೆ. ಸಚಿವರನ್ನು ಭೇಟಿಯಾಗಿ ವಸ್ತು ಸ್ಥಿತಿ ವಿವರಿಸುತ್ತೇನೆ ಎಂದರು. ರಾಜ್ಯ ಸರ್ಕಾರಕ್ಕೆ ಸ್ಥಾವರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ ಎಂದು ಹೇಳುತ್ತಿರುವುದು ಸುಳ್ಳು. ಸರ್ಕಾರಿ ಅಧಿಕಾರಿಗಳೇ ಸ್ಥಳ ಪರಿಶೀಲನೆ ನಡೆಸಿದ್ದಾರೆ ಆದ್ದರಿಂದ ಇದು ಸರ್ಕಾರಕ್ಕೆ ಗೊತ್ತಿದೆ ಎಂದರು. ಮುಖಂಡರಾದ ಜಗದೀಶ್ ಅಧಿಕಾರಿ, ಉಮಾನಾಥ ಕೋಟ್ಯಾನ್, ಶಾಂತಿಪ್ರಸಾದ್ ಹೆಗ್ಡೆ, ಜಿಪಂ ಸದಸ್ಯ ಈಶ್ವರ ಕಟೀಲ್, ಜನಾರ್ದನ ಗೌಡ, ನಿಡ್ಡೋಡಿ ಮಾತೃಭೂಮಿ ಸಂರಕ್ಷಣೆ ಸಮಿತಿ ಅಧ್ಯಕ್ಷ ಅಲ್ಫೋನ್ಸ್ ಡಿಸೋಜ ಇದ್ದರು.