ವಾರದೊಳಗೆ ಎಂಡೋ ಸಂತ್ರಸ್ತರ ಸ್ಕ್ಯಾನಿಂಗ್ ಆರಂಭಿಸಿ: ಶ್ರೀಧರ ಗೌಡ
ಉಪ್ಪಿನಂಗಡಿ: ಎಂಡೋಸಲ್ಫಾನ್ ಸಂತ್ರಸ್ತ ಗರ್ಭಿಣಿಯರ ಉಚಿತ ಸ್ಕ್ಯಾನಿಂಗ್ ವ್ಯವಸ್ಥೆಯನ್ನು ಸರ್ಕಾರ ವಾರದೊಳಗೆ ಆರಂಭಿಸದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಎಂಡೋ ಸಂತ್ರಸ್ತರು ಮತ್ತು ವಿವಿಧ ಸಂಘಟನೆಗಳೊಂದಿಗೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಂಡೋಸಲ್ಫಾನ್ ವಿರೋಧಿ ಹೋರಾಟ ಸಮಿತಿ ಕೊಕ್ಕಡದ ಅಧ್ಯಕ್ಷ ಶ್ರೀಧರ ಗೌಡ ಕೆ. ಎಚ್ಚರಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ತಿಂಗಳ ಹಿಂದೆ ಎಂಡೋಸಲ್ಫಾನ್ ಸಂತ್ರಸ್ತರ ಹಿತ ರಕ್ಷಣಾ ಪ್ರತಿಷ್ಠಾನ ಉಡುಪಿ ಮತ್ತು ರೋಟರಿ ಕ್ಲಬ್ ಪುತ್ತೂರು ಇವರ ಆಶ್ರಯದಲ್ಲಿ ಎಂಡೋ ಬಾಧಿತ ಗ್ರಾಮಗಳ ಗರ್ಭಿಣಿಯರ ಉಚಿತ ಸ್ಕ್ಯಾನಿಂಗ್ ಆರಂಭಿಸಿದ್ದರು. ಆದರೆ ಉದ್ಘಾಟನೆಗೊಂಡು ಎರಡು ಗಂಟೆಯೊಳಗೆ ಆರೋಗ್ಯ ಸಚಿವರ ಸೂಚನೆಯಂತೆ ಜಿಲ್ಲಾ ಆರೋಗ್ಯಾಧಿಕಾರಿಗಳು ಸ್ಕ್ಯಾನಿಂಗ್ ಪ್ರಕ್ರಿಯೆಯನ್ನು ತಡೆಹಿಡಿದಿರುತ್ತಾರೆ. ಇದು ಎಂಡೋಪೀಡಿತರ ಬದುಕಿನ ಬವಣೆಯಲ್ಲಿ ಚೆಲ್ಲಾಟವಾಡುವ ಕೃತ್ಯವಾಗಿದೆ.
ಈ ವ್ಯವಸ್ಥೆಯನ್ನು ತಡೆ ಹಿಡಿಯುವಾಗ ಆರೋಗ್ಯ ಇಲಾಖೆಯ ಅನುಮತಿ ಪಡೆದಿಲ್ಲ ಎಂಬ ಕಾರಣವನ್ನು ಪತ್ರಿಕೆಗಳ ಮೂಲಕ ನೀಡಿತ್ತು. ಆದರೆ ಜಿಲ್ಲಾದ್ಯಂತ ಸ್ವಯಂಸೇವಾ ಸಂಘಟನೆಗಳು ನೂರಾರು ಕಣ್ಣು, ಇ.ಎನ್.ಟಿ. ಹೃದ್ರೋಗ ಮಧುಮೇಹ ಇತ್ಯಾದಿ ರೋಗಗಳ ಬಗ್ಗೆ ನಿರಂತರ ತಜ್ಞ ವೈದ್ಯಕೀಯ ಶಿಬಿರಗಳು ನಡೆಸುತ್ತಾ ಬಂದಿವೆ. ಜಿಲ್ಲಾ ಆರೋಗ್ಯ ಅಧಿಕಾರಿಗಳಲ್ಲಿ ಅನುಮತಿ ಪಡೆದಿರುವ ಸಂಘಟನೆಗಳ ಬಗ್ಗೆ ಆರೋಗ್ಯಾಧಿಕಾರಿಗಳು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸರ್ಕಾರದಿಂದ ಅಡ್ಡಗಾಲು: ಸರ್ಕಾರವೇ ಸ್ಕ್ಯಾನಿಂಗ್ ವ್ಯವಸ್ಥೆ ಕಲ್ಪಿಸಲಿ ಎಂದು ಅಗ್ರಹಿಸಿದಾಗ ಮೌನವಾಗಿ, ಇದೀಗ ಸ್ವಯಂ ಸೇವಾ ಸಂಸ್ಥೆಗಳು ಈ ಕಾರ್ಯಕ್ಕೆ ಮುಂದಾದಾಗ ಅದನ್ನು ತಡೆಗಟ್ಟಿರುವುದು ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡಿದಂತಾಗಿದೆ ಎಂದು ಆರೋಪಿಸಿದ್ದಾರೆ.
ಎಂಡೋಸಂತ್ರಸ್ತರ ಹಿತರಕ್ಷಣಾ ಪ್ರತಿಷ್ಠಾನ ಉಡುಪಿ ಇದರ ಸಂಚಾಲಕರಾಗಿರುವ ಡಾ. ರವೀಂದ್ರನಾಥ್ ಶಾನುಭಾಗ್ ಕಳೆದ 15 ವರ್ಷಗಳಿಂದ ಎಂಡೋಸಲ್ಫಾನ್ ಸಂತ್ರಸ್ತರ ಸೇವೆಯನ್ನು ದೇವರ ಸೇವೆ ಎಂದು ನಂಬಿದವರು. ಎಂಡೋಸಲ್ಫಾನ್ ಸಂತ್ರಸ್ತರಿಗೆ ಭಿಕ್ಷೆಯ ಬದಲು ಅವರ ಹಕ್ಕಿನ ಸ್ವಾಭಿಮಾನದ ಬದುಕನ್ನು ಕಟ್ಟಿಕೊಡಲು ಪ್ರಯತ್ನಿಸಿದವರು. ಎಂಡೋಸಲ್ಫಾನಿನ ದುರಂತದ ಬಗ್ಗೆ ಅಧ್ಯಯನ ಮಾಡಿ ಉಚ್ಚ ಮತ್ತು ಸರ್ವೋಚ್ಚ ನ್ಯಾಯಾಲಯಗಳಲ್ಲಿ ಎಂಡೋಸಲ್ಫಾನ್ ಸಂತ್ರಸ್ತರ ಧ್ವನಿಯಾಗಿ ನಿಂತವರು. ಇಂತಹ ವ್ಯಕ್ತಿ ಎಂಡೋಸಲ್ಫಾನ್ ಸಂತ್ರಸ್ತರ ಬಗ್ಗೆ ತೆಗೆದುಕೊಳ್ಳುವ ಕಾರ್ಯಗಳಿಗೆ ತಡೆಯೊಡ್ಡಿದರೆ ಎಂಡೋ ಸಂತ್ರಸ್ತರ ಹೋರಾಟವನ್ನು ಹತ್ತಿಕ್ಕಬಹುದೆಂಬ ಉದ್ದೇಶದಿಂದ ಆರೋಗ್ಯಾಧಿಕಾರಿಗಳು ಮತ್ತು ಆರೋಗ್ಯ ಸಚಿವರು ಈ ಪ್ರಕ್ರಿಯೆಯನ್ನು ತಡೆಹಿಡಿದಿದ್ದಾರೆ ಎಂದು ಶ್ರೀಧರ ಗೌಡ ಆರೋಪಿಸಿದ್ದಾರೆ.
ಆರೋಗ್ಯ ಇಲಾಖೆ ಸಂತ್ರಸ್ತರ ಬಾಳಲ್ಲಿ ರಾಜಕೀಯ ಮಾಡದೇ ಎಂಡೋಸಲ್ಫಾನ್ ಮುಕ್ತ ಜಿಲ್ಲೆಯನ್ನಾಗಿ ಮಾಡುವ ಕಡೆಗೆ ದಿಟ್ಟ ಹೆಜ್ಜೆಯನ್ನು ಇಟ್ಟು ವಾರದೊಳಗೆ ಆರೋಗ್ಯ ಇಲಾಖೆ ಈ ಉಚಿತ ಸ್ಕ್ಯಾನಿಂಗ್ ವ್ಯವಸ್ಥೆಯನ್ನು ಆರಂಭಿಸಬೇಕು. ಇಲ್ಲವಾದಲ್ಲಿ ಆರೋಗ್ಯ ಅಧಿಕಾರಿಗಳ ಕಚೇರಿ ಎದುರು ಬೃಹತ್ ಪ್ರತಿಭಟನೆಯನ್ನು ನಡೆಸಲಾಗುವುದು ಎಂದವರು ಎಚ್ಚರಿಸಿದ್ದಾರೆ.