ಸುದ್ದಿ ಸಂಕ್ಷೇಪ
ಅನುಮಾನಾಸ್ಪದ ವ್ಯಕ್ತಿಗಳಿಬ್ಬರ ಸೆರೆ: ಬ್ಯಾಟರಿ ಕಳವು ಪ್ರಕರಣ ಬಯಲು
ಮೂಲ್ಕಿ: ಕಿನ್ನಿಗೋಳಿ ಪೇಟೆಯ ಬಳಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಮೂಲ್ಕಿ ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಬ್ಯಾಟರಿ ಕಳವು ಪ್ರಕರಣ ಬಯಲಾಗಿದೆ. ಕಿನ್ನಿಗೋಳಿ ಬಳಿ ಮೂಲ್ಕಿ ಪೊಲೀಸರು ಗಸ್ತು ತಿರುಗಾಟದ ಸಂದರ್ಭದಲ್ಲಿ ಸಂಜೆ, ಕಿನ್ನಿಗೋಳಿಯ ಪೇಟೆಯ ಬಳಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ವ್ಯಕ್ತಿಗಳನ್ನು ವಿಚಾರಿಸಿದಾಗ ಅವರು ಕಾರ್ಕಳದ ಶಂಕರ್ ಅಮೀನ್ ಮತ್ತು ಅರುಣ್ ಎಂದು ತಿಳಿದು ಬಂದಿದ್ದು, ಲಾರಿ ಮತ್ತಿತರ ವಾಹನಗಳ ಬ್ಯಾಟರಿಗಳನ್ನು ಕದ್ದು ಮಾರಲು ಯತ್ನಿಸುತ್ತಿರುವುದು ಕಂಡು ಬಂದಿದೆ. ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುರಸಭೆ ಸದಸ್ಯ ಆತ್ಮಹತ್ಯೆ
ಮಂಗಳೂರು: ಮೂಡುಬಿದಿರೆ ಪುರಸಭೆ ಸದಸ್ಯ ಶಿವರಾಜ್ ರೈ (41) ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೋಟೆಬಾಗಿಲು ವಾರ್ಡ್ನಿಂದ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಗೆದ್ದಿದ್ದರು. ಜೆಡಿಎಸ್ ಪಕ್ಷದಲ್ಲಿ ಸಕ್ರಿಯರಾಗಿದ್ದ ಅವರು ಇತ್ತೀಚೆಗಷ್ಟೇ ಕಾಂಗ್ರೆಸ್ ಸೇರಿದ್ದರು. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಜೀವನದಲ್ಲಿ ಜಿಗುಪ್ಸೆಗೊಂಡು ಸೋಮವಾರ ಆತ್ಮಹತ್ಯೆಗೆ ಶರಣಾದರು ಎಂದು ಮೂಡುಬಿದರೆ ಪೊಲೀಸರು ತಿಳಿಸಿದ್ದಾರೆ. 2 ವರ್ಷದ ಹಿಂದೆ ಮದುವೆಯಾಗಿದ್ದ ರೈಗಳಿಗೆ ಪತ್ನಿ, ಪುಟ್ಟ ಮಗು ಇದೆ.
ಎಕ್ಸ್ಪ್ರೆಸ್ ಬಸ್ ಕಳವು!
ಮಂಗಳೂರು: ಮಂಗಳೂರು-ಉಡುಪಿ ಎಕ್ಸ್ಪ್ರೆಸ್ 'ಸುಬ್ರಹ್ಮಣ್ಯ' ಬಸ್ ವೆಲೆನ್ಸಿಯಾದಲ್ಲಿ ರಾತ್ರಿ ನಿಲ್ಲಿಸಿದ್ದಲ್ಲಿಂದ ಕಳವಾಗಿದೆ. ವೆಲೆನ್ಸಿಯಾ ಸೇಂಟ್ ಜೋಸೆಫ್ ಸರ್ವಿಸ್ ಸ್ಟೇಶನ್ ಬಳಿ ಬಸ್ಸನ್ನು ಜು.13ರಂದು ರಾತ್ರಿ 7.35ಕ್ಕೆ ನಿಲ್ಲಿಸಿದ್ದರು. ಮರುದಿನ ಬೆಳಗ್ಗೆ ಎಂದಿನಂತೆ ಬಸ್ ಸಂಚಾರಕ್ಕೆ ತೆರಳಲು ಚಾಲಕ ಸಂತೋಷ್ ಕುಮಾರ್ ಸ್ಥಳಕ್ಕೆ ಬಂದಾಗ ಬಸ್ ಕಾಣೆಯಾಗಿತ್ತು. ಇದನ್ನು ಮಾಲೀಕ ನಾಗರಾಜ್ ಕೆ.ಎಂಬವರಿಗೆ ಚಾಲಕ ಕರೆ ಮಾಡಿ ತಿಳಿಸಿದರು. ಎಲ್ಲರೂ ಹುಡುಕಾಡಿದರೂ ಬಸ್ ಸಿಗಲಿಲ್ಲ. ಬಸ್ ಕಳವು ಮಾಡಿದ ಬಗ್ಗೆ ಪಾಂಡೇಶ್ವರ ಪೊಲೀಸರಿಗೆ ಮಾಲೀಕರು ದೂರು ನೀಡಿದ್ದಾರೆ.
ನಕಲಿ ದಾಖಲೆ ಸೃಷ್ಟಿಸಿ ಸಾಲ: ದೂರು
ಸುಳ್ಯ: ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕಿನಿಂದ ಸಾಲ ಪಡೆದು ವಂಚಿಸಿದ್ದಾರೆಂದು ವ್ಯಕ್ತಿಯೊಬ್ಬರು ಸುಳ್ಯ ಪೊಲೀಸರಿಗೆ ದೂರು ನೀಡಿದ ಘಟನೆ ನಡೆದಿದೆ. ಅಮರಮುಡ್ನೂರು ಗ್ರಾಮದ ಪಾರೆ ನಿವಾಸಿ ಕುಂಞಮುಗೇರ ಎಂಬವರ ಮಗ ಚನಿಯ ಮುಗೇರ ಎಂಬಾತ ರಾಂಪ್ರಸಾದ್ ಎಂಬವರ ಮನೆಗೆ ಕೆಲಸಕ್ಕೆಂದು ಹೋಗುತ್ತಿದ್ದರು. ರಾಂ ಪ್ರಸಾದ ತನಗೆ ತಿಳಿಯದೇ ತನ್ನ ಹೆಸರಿನಲ್ಲಿ ನಕಲಿ ದಾಖಲೆ ಸಷ್ಟಿಸಿ ಸುಳ್ಯ ಕೆನರಾ ಬ್ಯಾಂಕ್ ಶಾಖೆಯಿಂದ ರು. 2.4 ಲಕ್ಷ ಸಾಲ ಪಡೆದು ನನಗೆ ವಂಚನೆ ಎಸಗಿದ್ದಾರೆಂದು ಚನಿಯ ಮುಗೇರ ಸುಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮಹಿಳೆ
ಮಂಗಳೂರು: ಉರ್ವ ಮಹಾಗಣಪತಿ ದೇವಸ್ಥಾನ ಅರ್ಚಕರ ಪತ್ನಿ ಮಂಜುಳಾ (28) ಸೋಮವಾರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 13 ವರ್ಷ ಹಿಂದೆ ಮದುವೆಯಾಗಿದ್ದು ಇಬ್ಬರು ಮಕ್ಕಳಿದ್ದಾರೆ. ಜೀವನದಲ್ಲಿ ಜಿಗುಪ್ಸೆ ಹೊಂದಿ ಸೋಮವಾರ ಸಿಂಧೂರ ವಸತಿ ಗೃಹದಲ್ಲಿ ಸೀಲಿಂಗ್ ಫ್ಯಾನ್ಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿ ರತ್ನಾಕರ ಭಟ್ (43) ಉರ್ವ ಪೊಲೀಸರಿಗೆ ದೂರು ನೀಡಿದ್ದಾರೆ.
ಅಪಘಾತ: ಪಾದಚಾರಿ ಸಾವು
ಬ್ರಹ್ಮಾವರ: ಇಲ್ಲಿನ ಉಪ್ಪೂರು ಗ್ರಾಮದ ಕೊಳಲಗಿರಿಯ ಮೀನು ಮಾರುಕಟ್ಟೆಯ ಬಳಿ ಭಾನುವಾರ ಸಂಜೆ ನಡೆದ ಅಪಘಾತದಲ್ಲಿ ಪಾದಚಾರಿ ಮೃತಪಟ್ಟಿದ್ದಾರೆ. ಮಥಾಯಿಸ್ ಮಸ್ಕರೇನಸ್ (55) ಮೃತರು.
ಅವರು ಸಂಜೆ 6.30ರ ವೇಳೆಗೆ ರಸ್ತೆ ದಾಟುತ್ತಿದ್ದಾಗ, ಕೆ.ಜಿ. ರೋಡ್ ಕಡೆಯಿಂದ ಅತಿ ವೇಗದಲ್ಲಿ ಬಂದ, ಸದಾಶಿವ ಎಂಬವರು ತಚಲಾಯಿಸುತ್ತಿದ್ದ ಬೈಕ್ ಡಿಕ್ಕಿ ಹೊಡೆದಿದೆ. ಪರಿಣಾಮ ಮಸ್ಕರೇನಸ್ ತೀವ್ರವಾಗಿ ಗಾಯಗೊಂಡು ಪ್ರಜ್ಞಾಹೀನರಾದರು.
ಅವರನ್ನು ತಕ್ಷಣ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಮೃತಪಟ್ಟಿದ್ದಾರೆ. ಈ ಬಗ್ಗೆ ವಿಶ್ವನಾಥ ಎಂಬವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಾಗಿದೆ.
ವಿದ್ಯುತ್ ಶಾಕ್: ಯುವಕ ಸಾವು
ಉಡುಪಿ: ಇಲ್ಲಿನ ಅಲೆವೂರು ಗ್ರಾಮದಲ್ಲಿ ಯುವಕನೊಬ್ಬ ವಿದ್ಯುತ್ ಅಪಘಾತದಿಂದ ಮೃತಪಟ್ಟ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ. ಮೃತರು ಅಜಯ್ (22), ಈತ ಇಲ್ಲಿನ ನಿವಾಸಿ ಸಂಕು ಎಂಬವರ ಮಗ. ಈತ ಮಧ್ಯಾಹ್ನ ಹೊನ್ನೆಕುಡಿ ಎಂಬಲ್ಲಿ ಹಲಸಿನ ಕಾಯಿ ಕೊಯ್ಯುವುದಕ್ಕಾಗಿ ಮರ ಹತ್ತಿದ್ದರು. ಮರದ ಪಕ್ಕದಲ್ಲಿಯೆ ವಿದ್ಯುತ್ ಹರಿಯುತ್ತಿದ್ದ ತಂತಿ ಹಾದು ಹೋಗಿದ್ದು, ಮಳೆಗಾಲವಾದ್ದರಿಂದ ಗಾಳಿ ಬೀಸಿದಾಗ ತಂತಿ ತಗಲಿ ಮರದಲ್ಲಿ ವಿದ್ಯುತ್ ಹರಿಯುತ್ತಿತ್ತು. ಈ ಮರ ಹತ್ತಿದ್ದ ಅಜಯ್ ಕೂಡ ವಿದ್ಯುತ್ನ ತೀವ್ರ ಶಾಕ್ ಹೊಡೆದು ಮರದಲ್ಲಿಯೇ ಮೃತಪಟ್ಟಿದ್ದಾರೆ. ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಗು-ಪತಿ ನಾಪತ್ತೆ: ಪತ್ನಿ ದೂರು
ಉಪ್ಪಿನಂಗಡಿ: ಇಲ್ಲಿನ ಸಮೀಪದ ಕೊಕ್ಕಡದ ಹಾರ ಮನೆ ನಿವಾಸಿ ಕಮಲನಾಥನ್ (37) ಮತ್ತು ಅವರ ಮೂರುವರೆ ವರ್ಷ ಪ್ರಾಯದ ಕಿ.ಜೆ. ಜರೀನ್ ಡೇವಿಡ್ ಜು. 17ರಿಂದ ನಾಪತ್ತೆಯಾಗಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ಕಮಲನಾಥನ್ ಪತ್ನಿ ರಾಜಿ ಎಂಬಾಕೆ ಪೊಲೀಸರಿಗೆ ದೂರು ನೀಡಿದ್ದು, ಪತಿ ಮತ್ತು ಕಿರಿಯ ಮಗ ಜೊತೆಯಾಗಿ ನಾಪತ್ತೆಯಾಗಿದ್ದಾರೆ ಎಂದು ತಿಳಿಸಿದ್ದಾರೆ. ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಬಿಸಿ ನೀರಿಗೆ ಬಿದ್ದು ಗಾಯಗೊಂಡಿದ್ದ ಮಗು ಸಾವು
ಕಾರ್ಕಳ: ಇಲ್ಲಿನ ಎರ್ಲಪಾಡಿ ಗ್ರಾಮದ ಜಾರ್ಕಳ ಎಂಬಲ್ಲಿ ಮಗವೊಂದು ಬಿಸಿ ನೀರಿನ ಪಾತ್ರೆಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ.
ಇಲ್ಲಿನ ನಿವಾಸಿ ಸದಾಶಿವ ಎಂಬವರ ಮಗಳು ಸಮೃದ್ಧಿ (3)ಯನ್ನು ಆಕೆಯ ತಾಯಿ ಜು. 17ರಂದು ಬೆಳಗ್ಗೆ 9.15 ಗಂಟೆಗೆ ಸ್ನಾನ ಮಾಡಿಸಲೆಂದು ಪಾತ್ರೆಯಲ್ಲಿ ಬಿಸಿ ನೀರು ತಂದಿಟ್ಟಿದ್ದರು. ಈ ಮಗು ಆಕಸ್ಮಿಕವಾಗಿ ಪಾತ್ರೆಯೊಳಗೆ ಬಿದ್ದು ತೀವ್ರ ಸುಟ್ಟ ಗಾಯವಾಗಿತ್ತು.
ಬೈಲೂರು ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ನಂತರ ಮಣಿಪಾಲ ಕೆ.ಎಂ.ಸಿ.ಗೆ ದಾಖಲಿಸಲಾಗಿತ್ತು. ಅಲ್ಲಿ ಆಕೆ ಸೋಮವಾರ ಮುಂಜಾನೆ ಮೃತಪಟ್ಟಿದ್ದಾಳೆ. ಈ ಬಗ್ಗೆ ಹರೀಶ್ ಆಚಾರ್ಯ ಎಂಬವರು ನೀಡಿದ ದೂರಿನಂತೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.