ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಅಡಕೆ ಕೊಳೆರೋಗ: ಸರ್ಕಾರ ಸಂತೈಸುವುದು ಮಾತ್ರ

Mainashree
Updated On : 24 Jul 2013, 10:20 am

ಮಂಗಳೂರು: 2011ರಲ್ಲಿ ಅಡಕೆ ತೋಟಗಳಿಗೆ ಬಾಧಿಸಿದ ಕೊಳೆರೋಗ(ಎಳೆ ಅಡಕೆ ಉದುರುವುದು) ಉಂಟುಮಾಡಿದ ಫಸಲು ನಷ್ಟ ರು. 174 ಕೋಟಿ. ಮಳೆಗಾಲದಲ್ಲಿ ಕೊಳೆರೋಗ ವಿಪರೀತ ಬಾಧಿಸುವ ದ.ಕ. ಜಿಲ್ಲೆಯ 5 ತಾಲೂಕುಗಳ 21,892 ಬೆಳೆಗಾರರು 15,595.53 ಹೆಕ್ಟೇರ್ ಅಡಕೆ ತೋಟ ಹಾನಿಗೀಡಾದ ಬಗ್ಗೆ ಸಂತ್ರಸ್ತರು ತೋಟಗಾರಿಕೆ ಇಲಾಖೆಗೆ ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಒಂದು ವರ್ಷ ಬಳಿಕ ಈಗ ಮತ್ತೆ ಕೊಳೆರೋಗ ಕಾಣಿಸಿದೆ. ಹಿಂದಿನ ಸಾಲಿನ ಪರಿಹಾರ ಮೊತ್ತ ಕೋರಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದು ಬಿಟ್ಟರೆ ಯಾವುದೇ ಪ್ರಗತಿ ಆಗಿಲ್ಲ, ಪರಿಹಾರವೂ ಸಿಕ್ಕಿಲ್ಲ.
ಬೇರುಹುಳಕ್ಕೆ ಇದೆ, ಕೊಳೆರೋಗಕ್ಕಿಲ್ಲ: ಕೇಂದ್ರ ಸರ್ಕಾರ ನೇಮಿಸಿದ ಕೃಷಿ ಅಧಿಕಾರಿ ಗೋರಖ್‌ಸಿಂಗ್ ವರದಿ ಶಿಫಾರಸ್ಸಿನಂತೆ ಹಳದಿ ರೋಗ (ಅಡಕೆ ಮರ ಕೆಂಪಾಗುವುದು)ಪೀಡಿತ ಪ್ರದೇಶದ ಬೆಳೆಗಾರರಿಗೆ ವಿಶೇಷ ಪ್ಯಾಕೆಜ್‌ನಲ್ಲಿ ಪರಿಹಾರ ಸೌಲಭ್ಯ ಇದೆ. ಇದನ್ನು ಬೇರುಹುಳ ಮತ್ತು ಕೊಳೆರೋಗ ಬಾಧೆಗೂ ನೀಡುವಂತೆ ರಾಜ್ಯ ಸರ್ಕಾರ ಸೂಚಿಸಿದ್ದರೂ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಬೇರುಹುಳ ರೋಗಕ್ಕೆ ಮಾತ್ರ ಸೀಮಿತಗೊಳಿಸಿದ್ದಾರೆ. ಹಾಗಾಗಿ ಕೊಳೆರೋಗದ ಅಡಕೆ ತೋಟವನ್ನು ಕೇಳುವವರೇ ಇಲ್ಲದಂತಾಗಿದೆ.
 ವಿಶೇಷ ಪ್ಯಾಕೆಜ್‌ನಲ್ಲಿ ಜಿಲ್ಲೆಗೆ 2012ರಲ್ಲಿ ರು. 50 ಲಕ್ಷ ಸಿಕ್ಕಿತ್ತು. ಈ ಮೊತ್ತದಲ್ಲಿ ಹಳದಿರೋಗಕ್ಕೆ 639 ಮಂದಿಯ ತೋಟಕ್ಕೆ ಪರ್ಯಾಯ ಗಿಡ ನೆಡಲು ದೊರಕಿದ ಪರಿಹಾರ ರು. 32.40 ಲಕ್ಷ. ಉಳಿದ ರು. 26 ಲಕ್ಷ ಬೇರುಹುಳ ಬಾಧಿತ ಕೃಷಿಕರಿಗೆ ನೀಡಲಾಗಿದೆ. ಈ ವರ್ಷ ರು. 20 ಲಕ್ಷ ಬಿಡುಗಡೆಯ ನಿರೀಕ್ಷೆಯಲ್ಲಿದ್ದು, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಲ್ಲಿ ರು. 40 ಲಕ್ಷದ ಭರವಸೆ ಸಿಕ್ಕಿದೆ. ಇವೆಲ್ಲವೂ ಹಳದಿರೋಗ ಬಾಧಿತ ಸುಳ್ಯ ತಾಲೂಕಿನ 5 ಗ್ರಾಮಗಳಿಗೆ ಲಭಿಸಿದೆ. ಸಸ್ಯ ಸಂರಕ್ಷಣೆ ಯೋಜನೆಯಲ್ಲಿ ಬೇರೆಯೇ ಪರಿಹಾರ ಇರುವುದರಿಂದ ಕೊಳೆರೋಗಕ್ಕೆ ಇದರಲ್ಲಿ ಪರಿಹಾರ ನೀಡಿಲ್ಲ ಎಂಬ ಸಮಜಾಯಿಸಿ ತೋಟಗಾರಿಕೆ ಇಲಾಖೆ ಅಧಿಕಾರಿಗಳದ್ದು.
 ಸಸ್ಯ ಸಂರಕ್ಷಣೆಯ 3 ಹಂತದ ಯೋಜನೆಯಲ್ಲಿ ತೋಟಕ್ಕೆ ಔಷಧ ಸಿಂಪಡಣೆಗೆ ಮೈಲುತುತ್ತು(ಕಾಫರ್ ಸಲ್ಫೇಟ್) ಖರೀದಿಗೆ ಮಾತ್ರ ಅನುದಾನ ನೀಡುತ್ತಾರೆ. ಕಳೆದ ವರ್ಷ ರಾಷ್ಟ್ರೀಯ ತೋಟಗಾರಿಕಾ ಮಿಷನ್‌ನಡಿ 1,844 ಮಂದಿಗೆ ರು. 18 ಲಕ್ಷ, ರಾಜ್ಯ ವಲಯದಲ್ಲಿ 110 ಮಂದಿಗೆ ರು. 20.19 ಲಕ್ಷ ಹಾಗೂ ತಾಲೂಕು ಪಂಚಾಯ್ತಿ ಕಾರ್ಯಕ್ರಮದಲ್ಲಿ  300 ಮಂದಿಗೆ ರು. 5.98 ಲಕ್ಷ ನೀಡಿದ್ದಾರೆ.
 ಈ ಬಗ್ಗೆ ತೋಟಗಾರಿಕೆ ಇಲಾಖೆ ಅಧಿಕಾರಿ ಪ್ರವೀಣ್ ಹೇಳುವುದಿಷ್ಟು, ಕೊಳೆರೋಗ ಹಾನಿ ಪ್ರಸ್ತಾವನೆಯನ್ನು 2011 ಫೆ.15ರಂದು ಜಿಲ್ಲಾಧಿಕಾರಿಗೆ ಸಲ್ಲಿಸಲಾಗಿದೆ. ಈ ಬಾರಿ ಕೊಳೆರೋಗ ಬಾಧೆ ಕುರಿತು ಅಧಿಕೃತವಾಗಿ ಮಾಹಿತಿ ಬಂದಿಲ್ಲ. ಹಾನಿಯಾಗಿದ್ದರೆ ವರದಿ ಸಲ್ಲಿಸುವಂತೆ ತಾಲೂಕುಗಳ ತೋಟಗಾರಿಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇಲಾಖೆಯಿಂದ ಸಲ್ಲಿಕೆಯಾದ ವರದಿಯನ್ನು ಅದೇ ಅಕ್ಟೋಬರ್‌ನಲ್ಲಿ ಸರ್ಕಾರಕ್ಕೆ ಕಳುಹಿಸಲಾಗಿದೆ ಎನ್ನುತ್ತದೆ ಜಿಲ್ಲಾಡಳಿತ.

2011 ಕೊಳೆರೋಗ-ಎಲ್ಲೆಲ್ಲಿ ಎಷ್ಟೆಷ್ಟು ಹಾನಿ?
ಸ್ಥಳ               ಸಂತ್ರಸ್ತರು     ಹೆಕ್ಟೇರ್ ಹಾನಿ     ಮೊತ್ತ ಲಕ್ಷ
ಮಂಗಳೂರು--680--------207.68------157.57
ಬಂಟ್ವಾಳ----4763-------5757.57------4444
ಪುತ್ತೂರು----8343-------3342.78------6246.89
ಸುಳ್ಯ------4347-------2392.13------2672.69
ಬೆಳ್ತಂಗಡಿ----3759-------3895.37------3942.11
ಒಟ್ಟು------21892------15595.53-----17463.28

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement