ಕೊಲ್ಲೂರಲ್ಲಿ ವಿಶೇಷ ಪೂಜೆ ನೆರವೇರಿಸಿದ ತಮಿಳುನಾಡು ಭಕ್ತರು
ಕೊಲ್ಲೂರು: ತಮಿಳುನಾಡಿನ ತಿರುವಣ್ಣಾಮಲೈನ ಶ್ರೀಮೂಕಾಂಬಿಕಾ ಭಕ್ತ ಸಂಘದ ಗುರು ಮತ್ತು ಸಂಗಡಿಗರು 25 ವರ್ಷಗಳಿಂದ ನಿರಂತರವಾಗಿ ಆಷಾಢ ಮಾಸದಲ್ಲಿ ಕೊಲ್ಲೂರು ದೇವಳಕ್ಕೆ ಆಗಮಿಸುತ್ತಿದ್ದು, ಸೋಮವಾರ ಗುರು ಪೂರ್ಣಿಮೆ ದಿನ ತ್ರಿಕಾಲ ಪೂಜೆಗೆ ಆಗಮಿಸಿದ್ದರು. ಮಡಿ (ಒದ್ದೆ) ವಸ್ತ್ರದಲ್ಲಿ ದೇವಿಯ ದರ್ಶನ ಮಾಡಿ, ದೇವಳದಲ್ಲಿ ವಿಶೇಷ ಪೂಜೆ ಮತ್ತು ಚಂಡಿಕಾ ಹೋಮ ನೆರವೇರಿಸಿದರು. ನಂತರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಪ್ರಸಾದ್ ಅಡ್ಯಂತಾಯ ಮತ್ತು ಕಾರ್ಯ ನಿರ್ವಹಣಾಧಿಕಾರಿ ಎಲ್.ಎಸ್. ಮಾರುತಿ ಭಕ್ತರಿಗೆ ದೇವಿಯ ಪ್ರಸಾದ ರೂಪದಲ್ಲಿ ಸೀರೆಗಳನ್ನು ವಿತರಿಸಿದರು. ಸಹಾಯಕ ಕಾರ್ಯ ನಿರ್ವಹಣಾಧಿಕಾರಿ ಎಚ್. ಕೃಷ್ಣಮೂರ್ತಿ, ದೇವಳದ ಅಧೀಕ್ಷಕ ಕೆ. ರಾಮಕೃಷ್ಣ ಅಡಿಗ ಇದ್ದರು.