ನವೀನ್‌ಚಂದ್ರಪಾಲ್‌ಗೆ ವಿಶುಕುಮಾರ್ ಪ್ರಶಸ್ತಿ
ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ನೀಡುತ್ತಿರುವ ವಿಶುಕುಮಾರ್ ಪ್ರಶಸ್ತಿ ಈ ಬಾರಿ ಹಿರಿಯ ಪತ್ರಿಕೋದ್ಯಮಿ 'ಸಂಗಾತಿ' ಪತ್ರಿಕೆಯ ನವೀನ್‌ಚಂದ್ರಪಾಲ್ ಆಯ್ಕೆಯಾಗಿದ್ದಾರೆ.
ಕತೆಗಾರ, ಕಾದಂಬರಿಕಾರ, ನಟ, ನಿರ್ಮಾಪಕ, ನಿರ್ದೇಶಕ, ಕವಿ, ಸಾಹಿತಿ, ಪತ್ರಿಕೋದ್ಯಮಿ, ಸಂಘಟಕ ಹೀಗೆ ನಾನಾ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಅಲ್ಪಾವಧಿಯಲ್ಲಿ ಅಗಲಿ ಹೋದ ವಿಶುಕುಮಾರ್ ಹೆಸರಲ್ಲಿ ಯುವವಾಹಿನಿ 11 ವರ್ಷಗಳಿಂದ ಈ ಪ್ರಶಸ್ತಿ ನೀಡುತ್ತಿದೆ. ಅವರು ಸೇವೆ ಸಲ್ಲಿಸಿದ ಒಂದೊಂದು ಕ್ಷೇತ್ರವನ್ನು ಪ್ರತಿ ವರ್ಷ ಆಯ್ಕೆ ಮಾಡಿ ಪ್ರಶಸ್ತಿ ನೀಡಲಾಗುತ್ತಿದೆ. ಈ ವರ್ಷ ಪತ್ರಿಕೋದ್ಯಮ ಕ್ಷೇತ್ರ ಆಯ್ಕೆ ಮಾಡಿದ್ದು, ಐದು ತೀರ್ಪುಗಾರರು ಇರುವ ಸಮಿತಿ 86ರ ಹರೆಯದ ನವೀನ್‌ಚಂದ್ರಪಾಲ್ ಅವರನ್ನು ಆಯ್ಕೆ ಮಾಡಿದೆ.
ಚಂದ್ರಪಾಲ್ ಅವರು ಜಯಪ್ರಕಾಶ್ ನಾರಾಯಣ ಅವರ ಸಮಾಜವಾದಿ ಚಿಂತನೆಗಳ ದಟ್ಟ ಪ್ರೇರಣೆಯಿಂದ 1948ರಿಂದಲೇ ಪತ್ರಿಕಾ ರಂಗದಲ್ಲಿ ತಮ್ಮನ್ನು ತಾವು ಸಕ್ರಿಯರಾಗಿ ತೊಡಗಿಸಿಕೊಂಡರು. 1948ರಿಂದ 64ರವರೆಗೆ ಮಂಗಳೂರಲ್ಲಿ ಮೌಲ್ಯಯುತ 'ಸಂಗಾತಿ' ಪತ್ರಿಕೆ ನಡೆಸಿದರು. ಬಳಿಕ ಮುಂಬಯಿ ಸೇರಿ ಸರ್ಕಾರಿ ಕಾನೂನು ಕಾಲೇಜಲ್ಲಿ ಕಲಿತು, ಭಾರತೀಯ ವಿದ್ಯಾಭವನದ ಪತ್ರಿಕೋದ್ಯಮ ಡಿಪ್ಲೊಮಾದ ಪ್ರಾರಂಭಿಕ ವಿದ್ಯಾರ್ಥಿಯಾದರು. ಅತ್ಯುತ್ತಮ ವಿದ್ಯಾರ್ಥಿ ಎಂಬ ಸ್ವರ್ಣ ಪದಕ ಪಡೆದವರು.
ಮುಂಬಯಿ ಟೈಮ್ಸ್, ಇಂಡಿಯನ್ ಎಕ್ಸ್‌ಪ್ರೆಸ್ ಮೊದಲಾದ 6,7 ಪತ್ರಿಕೆಯಲ್ಲಿ ದುಡಿದವರು. ಬಳಿಕ ಊರಿಗೆ ಬಂದು 1980ರಿಂದ 8 ವರ್ಷಗಳ ಕಾಲ ಮತ್ತೆ ಸಂಗಾತಿ ಪತ್ರಿಕೆ ನಡೆಸಿ, ಅನೇಕ ಬರಹಗಾರರು, ಪತ್ರಕರ್ತರನ್ನು ಹುಟ್ಟುಹಾಕಿದರು.
ಈಗ ಮಂಗಳೂರಲ್ಲಿ ವಾಸವಿರುವ ಪಾಲ್, ಹಿಂದಿನ ಲವಲವಿಕೆಯೊಂದಿಗೆ ಇದ್ದಾರೆ. ಪ್ರಚಾರ, ಪುರಸ್ಕಾರದಿಂದ ದೂರವೇ ಉಳಿದರು. ಇವರ ಎಲ್ಲ ಸೇವೆ ಗುರುತಿಸಿ ವಿಶುಕುಮಾರ್ ಪ್ರಶಸ್ತಿ ಆಯ್ಕೆ ಮಾಡಲಾಗಿದೆ.
ಪ್ರಶಸ್ತಿ 10 ಸಾವಿರ ನಗದು ಹೊಂದಿದೆ. ಆ.4ರಂದು ಹೆಜಮಾಡಿ ಬಿಲ್ಲವ ಸಮಾಜ ಸೇವಾ ಸಂಘದ ಸಭಾಂಗಣದಲ್ಲಿ ಬಸ್ತಿ ವಾಮನ ಶೆಣೈ ಪ್ರಶಸ್ತಿ ಪ್ರದಾನ ಮಾಡುವರು. ಸಾಹಿತಿ ಅಂಬಾತನಯ ಮುದ್ರಾಡಿ ಅಧ್ಯಕ್ಷತೆ ವಹಿಸುವರು. ಚಂದ್ರಕಲಾ ನಂದಾವರ ಭಾಗವಹಿಸುವರು ಎಂದು ಯುವವಾಹಿನಿ ಸಂಸ್ಥೆ ಪ್ರಕಟಣೆ ತಿಳಿಸಿದೆ.