ಮಂಗಳೂರು: ಬಸ್ ಚಾಲಕ, ಕ್ಲೀನರ್ ಮೇಲೆ ದುಷ್ಕರ್ಮಿಗಳ ಹಲ್ಲೆ ಖಂಡಿಸಿ, ತಲಪಾಡಿಯಲ್ಲಿ ಖಾಸಗಿ ಬಸ್ ಸಿಬ್ಬಂದಿ ಮಿಂಚಿನ ಮುಷ್ಕರ ನಡೆಸಿದರು. ತಲಪಾಡಿಯಲ್ಲಿ ಸೋಮವಾರ ತಡರಾತ್ರಿ ಬಸ್ ಚಾಲಕ ಚಂದ್ರಕಾಂತ ಮತ್ತು ಕ್ಲೀನರ್ ಸ್ವಸ್ತಿಕ್ ಬಸ್ ತೊಳೆಯುತ್ತಿದ್ದರು. ಈ ವೇಳೆ ಅಪರಿಚಿತ ತಂಡ ಮೇಲೆರಗಿ ಹಲ್ಲೆ ನಡೆಸಿದೆ. ಇಬ್ಬರ ಬೊಬ್ಬೆ ಕೇಳಿ ಪಕ್ಕದಲ್ಲಿದ್ದ ಸಿಬ್ಬಂದಿ, ಅಯೂಬ್, ಇರ್ಷಾದ್ ಬಂದಿದ್ದರು. ಅವರಿಗೂ ಎರಡೇಟು ಬಿಗಿದಿದ್ದಾರೆ. ಕೊನೆಗೆ ಸ್ಥಳೀಯರು ಬಂದು ರಕ್ಷಿಸಿದರು. ಇದೇ ಘಟನೆಯನ್ನು ಖಂಡಿಸಿ ತಲಪಾಡಿ-ಮಂಗಳೂರಿಗೆ ತೆರಳುವ ನೂರಕ್ಕೂ ಹೆಚ್ಚು ಬಸ್ ಸಿಬ್ಬಂದಿ ಕೆಲ ಕಾಲ ಮುಷ್ಕರ ನಡೆಸಿ ಪ್ರತಿಭಟಿಸಿದರು. ಹಿನ್ನೆಲೆ: ಸೋಮವಾರ ಬೆಳಗ್ಗೆ ಕೇರಳಿಗರ ಗುಂಪೊಂದು ಈ ಬಸ್‌ನಲ್ಲಿ ಮಂಗಳೂರಿನತ್ತ ಪ್ರಯಾಣ ಬೆಳೆಸಿತ್ತು. ಗುಂಪಿನಲ್ಲಿದ್ದ ಕುಂಜತ್ತೂರಿನ ಒಬ್ಬ ಬಸ್ ಬಾನೆಟ್ ಮೇಲೆ ಕಾಲಿಟ್ಟಿದ್ದ. ಇದನ್ನು ಚಾಲಕ ಆಕ್ಷೇಪಿಸಿದ್ದ. ಆಗ ಗುಂಪು ಮತ್ತು ಬಸ್ ಚಾಲಕ, ಕ್ಲೀನರ್, ಕಂಡಕ್ಟರ್ ನಡುವೆ ಮಾತಿನ ಚಕಮಕಿ ನಡೆದಿತ್ತು. ಇದೇ ಕಾರಣಕ್ಕೆ ಸಿಟ್ಟಿಗೆದ್ದ ತಂಡ ರಾತ್ರಿ ಇವರನ್ನು ಹುಡುಕಿಕೊಂಡು ಹಲ್ಲೆ ನಡೆಸಿದೆ. ಹಲ್ಲೆಗೊಳಗಾದವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.