ಮಳೆ ಕಡಿಮೆ, ಮರಬಿದ್ದು ಸಂಚಾರಕ್ಕೆ ತಡೆ
ಮಂಗಳೂರು: ಜಿಲ್ಲೆಯಾದ್ಯಂತ ವರುಣನ ಆರ್ಭಟ ಮಂಗಳವಾರ ಸ್ವಲ್ಪ ಕಡಿಮೆಯಾಗಿದೆ. ಆದರೆ ಮಂಗಳೂರಲ್ಲಿ ಬೆಳಗ್ಗೆ ಸುರಿದ ಮಳೆಗೆ ಮುಲ್ಲಕಾಡಿನಲ್ಲಿ ರಸ್ತೆಗಡ್ಡ ಮರ ಬಿದ್ದು ಸಂಜೆವರೆಗೆ ಸಂಚಾರಕ್ಕೆ ಅಡಚಣೆ ಉಂಟಾಗಿದೆ.
ದೇರೆಬೈಲ್-ಕಾವೂರು ರಸ್ತೆಯ ಮುಲ್ಲಕಾಡಿನಲ್ಲಿ ಗಾಳಿಮಳೆಗೆ ಬೆಳಗ್ಗೆ 6.30ರ ಸುಮಾರಿಗೆ ರಸ್ತೆಯಂಚಿನಲ್ಲಿದ್ದ ಹಳೆ ಮಾವಿನ ಮರ ಬಿದ್ದಿತ್ತು. ಈ ಘಟನೆಯಲ್ಲಿ ವಿದ್ಯುತ್ ತಂತಿ ತುಂಡಾಗಿದ್ದು, ಮಂಗಳೂರು ನಗರ ಮತ್ತು ಎರಡು ಮಾಲ್‌ಗಳಿಗೆ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತ್ತು.
ಬೆಳಗಿನ ಹೊತ್ತು ವಾಹನ ಸಂಚಾರ ಆರಂಭವಾಗದ್ದರಿಂದ ಯಾರಿಗೂ ಪ್ರಾಣಾಪಾಯ ಉಂಟಾಗಿಲ್ಲ. ಬಳಿಕ ಮಹಾನಗರ ಪಾಲಿಕೆ ಸದಸ್ಯ ದೀಪಕ್ ಪೂಜಾರಿ ನೇತೃತ್ವದಲ್ಲಿ ಮರ ತೆರವುಗೊಳಿಸುವ ಕಾರ್ಯ ಶುರುವಾಯಿತು. ಸ್ಥಳೀಯ ಅಗ್ನಿಶಾಮಕದಳ, ಖಾಸಗಿ ಗ್ಯಾಂಗ್‌ಮೆನ್ ಅಲ್ಲದೆ ಮಹಾನಗರ ಪಾಲಿಕೆ ಗ್ಯಾಂಗ್‌ಮೆನ್‌ಗಳ ನೆರವನ್ನು ಪಡೆಯಲಾಯಿತು. ಸುಮಾರು 70 ವರ್ಷ ಹಿಂದಿನ ಬೃಹತ್ ಗಾತ್ರದ ಮರ ಇದಾದ್ದರಿಂದ ತೆರವು ಕಾರ್ಯಾಚರಣೆ ಸಂಜೆ ವರೆಗೆ ನಡೆಯಿತು. ಸಂಜೆ 3 ಗಂಟೆ ನಂತರ ಬಸ್ ಸಂಚಾರ ಪ್ರಾರಂಭವಾಗಿದ್ದು, ಸಂಜೆ 6.30ರ ವೇಳೆಗೆ ರಸ್ತೆಯನ್ನು ಪೂರ್ತಿ ಸಂಚಾರಕ್ಕೆ ಮುಕ್ತಗೊಳಿಸಲಾಯಿತು. ಹಗಲು ಹೊತ್ತು ಮೋಡಕವಿದ ವಾತಾವರಣವಿದ್ದು, ಅಪರಾಹ್ನ ಮಳೆ ಕಾಣಿಸಿತು. ಸಂಜೆಯಾಗುತ್ತಿದ್ದಂತೆ ತುಂತುರು ಮಳೆ ಹನಿಯತೊಡಗಿತು.
ಬೆಳ್ತಂಗಡಿಯಲ್ಲಿ ಗರಿಷ್ಠ ಮಳೆ: ಮಂಗಳವಾರ ಬೆಳಗ್ಗಿನವರೆಗೆ ಜಿಲ್ಲೆಯ ಬೆಳ್ತಂಗಡಿಯಲ್ಲಿ ಗರಿಷ್ಠ 31.2 ಮಿಲಿ ಮೀಟರ್ ಮಳೆ ದಾಖಲಾಗಿದೆ. ಬಂಟ್ವಾಳ 9.4 ಮಿ.ಮೀ, ಬೆಳ್ತಂಗಡಿ 31.2 ಮಿ.ಮೀ, ಮಂಗಳೂರು 8.7 ಮಿ.ಮೀ, ಪುತ್ತೂರು 17 ಮಿ.ಮೀ, ಸುಳ್ಯ 16.8 ಮಿ.ಮೀ ಮಳೆಯಾಗಿದೆ. ಈ ದಿನ ಕಳೆದ ಬಾರಿಗಿಂತ(26.6 ಮಿ.ಮೀ)ಈ ಸಲ ಕಡಿಮೆ(16.6 ಮಿ.ಮೀ)ಮಳೆ ದಾಖಲಾಗಿದೆ.
ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 2460 ಮಿ.ಮೀ ಮಳೆಯಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ(1344.5 ಮಿ.ಮೀ) ಇದು ಗರಿಷ್ಠ ಮಳೆ. ಉಪ್ಪಿನಂಗಡಿಯಲ್ಲಿ ನೇತ್ರಾವತಿ, ಕುಮಾರಧಾರಾ ನದಿ ನೀರಿನ ಮಟ್ಟ ಅಪಾಯ ಮಟ್ಟಕ್ಕಿಂತ ಕಡಿಮೆ(21 ಮೀಟರ್)ಎತ್ತರದಲ್ಲಿ ಹರಿಯುತ್ತಿದೆ.