ಕೆರೆ ದುರಸ್ತಿಗೆ 'ಹೈ' ಆದೇಶ
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಸಾವ್ಯ ಗ್ರಾಮದ ಕೊರಂಬಾಡು ಸಾರ್ವಜನಿಕ ಕೆರೆಯನ್ನು ಎರಡು ತಿಂಗಳೊಳಗೆ ದುರಸ್ತಿಗೊಳಿಸುವಂತೆ ಉಚ್ಚ ನ್ಯಾಯಾಲಯ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿದೆ.
ವೇಣೂರು ಸಾವ್ಯ ಗ್ರಾಮದ ಕೊರಂಬಾಡು ಸಾರ್ವಜನಿಕ ಕೆರೆಯು ಸುಮಾರು ಒಂದೂವರೆ ಎಕರೆ ಜಾಗದಲ್ಲಿರುವ ಬಹಳ ಪುರಾತನವಾದ ಹಾಗೂ ದೊಡ್ದದಾದ ಕೆರೆಯಾಗಿದ್ದು, ಈ ಕೆರೆಯಿಂದಲೇ ನೂರಾರು ಎಕರೆ ಕೃಷಿ ಜಮೀನುಗಳಿಗೆ ನೀರು ಸರಬರಾಜು ಆಗುತ್ತಾ ಬಂದಿದೆ. ಕಳೆದ ಹತ್ತು ವರ್ಷಗಳಿಂದ ಈ ಕೆರೆಯನ್ನು ಸರ್ಕಾರ ದುರಸ್ತಿಗೊಳಿಸಿರುವುದಿಲ್ಲ. ಕೆರೆಯಲ್ಲಿ ಪೂರ್ತಿ ಹೂಳು ತುಂಬಿದೆಯಲ್ಲದೆ, ಕೆಲ ವ್ಯಕ್ತಿಗಳು ಕೆರೆಯ ಜಾಗವನ್ನು ಅತಿಕ್ರಮಿಸಿದ್ದಾರೆ ಎಂದು ಆರೋಪಿಸಲಾಗಿದೆ. ಸಾವ್ಯ ಗ್ರಾಮದ ಕೃಷಿಕ ರಾಜೇಶ್ ಮತ್ತು ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮತ್ತು ರಾಜ್ಯ ಸರ್ಕಾರಕ್ಕೆ ಅನೇಕ ಪತ್ರಗಳನ್ನು ಬರೆದು ಕೆರೆ ದುರಸ್ತಿಗೆ ಮನವಿ ಮಾಡುತ್ತಿದ್ದರೂ ಯಾವುದೇ ಫಲ ದೊರಕದ ಕಾರಣ ರಾಜೇಶ್ ಹೈಕೋರ್ಟ್ನಲ್ಲಿ ಪಿಐಎಲ್ ಅರ್ಜಿ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಎರಡು ತಿಂಗಳೊಳಗೆ ಕೆರೆ ದುರಸ್ತಿಗೊಳಿಸಿ, ಅತಿಕ್ರಮವನ್ನು ತೆರವುಗೊಳಿಸಬೇಕು ಎಂದು ರಾಜ್ಯ ಸರ್ಕಾರ ಹಾಗೂ ದಕ ಜಿಲ್ಲಾಧಿಕಾರಿಗೆ ಆದೇಶಿಸಿದೆ. ಅರ್ಜಿದಾರರ ಪರವಾಗಿ ನ್ಯಾಯವಾದಿ ಪಿ. ಪಿ. ಹೆಗ್ಡೆ ವಾದಿಸಿದ್ದರು.