ಉಪ್ಪಿನಂಗಡಿ: ವಿದ್ಯಾರ್ಥಿಗಳ ಪ್ರತಿಭಟನೆ, ಘರ್ಷಣೆ
ಉಪ್ಪಿನಂಗಡಿ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿನಿಗೆ ಕೀಟಲೆ ಮಾಡಲಾಗಿದೆ ಎಂಬ ಸುದ್ದಿ ಹರಡಿ, ವಿದ್ಯಾರ್ಥಿಗಳ ನಡುವೆ ಮಾರಾಮಾರಿಯಾಗಿ, ಕಲ್ಲು ತೂರಾಟ ನಡೆದು ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಬೇಕಾಯಿತು.
ಬುಧವಾರ ಕಾಲೇಜಿನ ವಿದ್ಯಾರ್ಥಿನಿ ಜಡೆಯನ್ನು ಭಿನ್ನ ಕೋಮಿನ ವಿದ್ಯಾರ್ಥಿಯೊಬ್ಬ ಎಳೆದಿದ್ದಾನೆಂಬ ಸುದ್ದಿ ಹರಡಿತ್ತು.
ಈ ಬಗ್ಗೆ ವಿಚಾರಿಸಲು ಹೋದ ವಿದ್ಯಾರ್ಥಿನಿಯ ಸಮುದಾಯಕ್ಕೆ ಸೇರಿದವರು, ಆಪಾದಿತ ವಿದ್ಯಾರ್ಥಿ ಮೇಲೆ ಗುರುವಾರ ದೈಹಿಕ ಹಲ್ಲೆ ನಡೆಸಿದ್ದರು. ಇದನ್ನು ಬಿಡಿಸಲು ಹೋದ ಸಹ ವಿದ್ಯಾರ್ಥಿಗಳ ನಡುವೆ ಪರಸ್ಪರ ಹೊಡೆದಾಟವೂ ಆಗಿತ್ತು.
ವಿಚಾರ ತಿಳಿದು ಸ್ಥಳಕ್ಕೆ ತೆರಳಿದ ಪೊಲೀಸರ ಸಮಕ್ಷಮದಲ್ಲಿಯೂ ಹೊಡೆದಾಟ ಮುಂದುವರಿದಿತ್ತು. ಏತನ್ಮಧ್ಯೆ, ಪ್ರಕರಣಕ್ಕೆ ಸಂಬಂಧಿಸಿ ಒಂದು ಸಮುದಾಯದ ಮೂವರು ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆಂಬ ಸುದ್ದಿ ಹರಡಿ ಎಬಿವಿಪಿ ಕಾರ್ಯಕರ್ತರು ಉಪ್ಪಿನಂಗಡಿ ಠಾಣೆ ಬಳಿ ಜಮಾಯಿಸಿದರು.
ನ್ಯಾಯ ದೊರಕಿಸಿಕೊಡಬೇಕೆಂಬ ಬೇಡಿಕೆ ಇಟ್ಟು ಒಂದು ಕೋಮಿಗೆ ಸೇರಿದ ವಿದ್ಯಾರ್ಥಿಗಳು ಘೋಷಣೆ ಕೂಗುತ್ತಿರುವಾಗಲೇ, ಮತ್ತೊಂದು ಕೋಮಿಗೆ ಸೇರಿದವರು ಪ್ರತಿ ಘೋಷಣೆಗಳನ್ನು ಹಾಕಿ ಪ್ರಕರಣ ಕೋಮು ಸ್ವರೂಪ ಪಡೆದುಕೊಂಡಿತ್ತು.
ಗುಂಪಿಗೆ ಕಲ್ಲು: ಸುದ್ದಿ ತಿಳಿದು ಬಂದ ವೃತ್ತ ನಿರೀಕ್ಷಕ ಸುರೇಶ್ ಕುಮಾರ್, ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಸಮಾಧಾನಿಸುವ ಮಾತುಕತೆ ನಡೆಯುತ್ತಿದ್ದಂತೆಯೇ ಗುಂಪಿನಿಂದ ಕಲ್ಲೊಂದು ಪ್ರತಿಭಟನಾನಿರತರ ಗುಂಪಿನತ್ತ ತೂರಿ ಬಂತು. ಪರಿಸ್ಥಿತಿ ಕೈ ಮೀರುವ ಸೂಚನೆ ದೊರೆತ ಕೂಡಲೇ ಮಿಂಚಿನ ಕಾರ್ಯಾಚರಣೆಗಿಳಿದ ಸಂಚಾರಿ ಪೊಲೀಸ್ ಸಿಬ್ಬಂದಿ ಉದ್ರಿಕ್ತರನ್ನು ಲಾಠಿ ಚಾರ್ಜ್ ಮಾಡಿ ಚದುರಿಸಿದರು.
ಇತ್ತ ಲಾಠಿ ಚಾರ್ಜ್ಗೆ ಒಳಗಾದ ಗುಂಪು ಪ್ರತಿಭಟನಾನಿರತ ವಿದ್ಯಾರ್ಥಿಗಳನ್ನು ಚದುರಿಸಲು ಅಗ್ರಹಿಸುತ್ತಿದ್ದಂತೆಯೇ ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಲು ಮುಂದಾದರು.
ಇಬ್ಬರು ವಶಕ್ಕೆ: ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ್ಪಿನಂಗಡಿ ಪೊಲೀಸರು ರಂಜಿತ್ ಮತ್ತು ಅಲ್ತಾಫ್ ಎಂಬಿಬ್ಬರನ್ನು ವಶಕ್ಕೆ ತೆಗೆದುಕೊಂಡು, ಘಟನಾವಳಿಗಳ ವಿಚಾರಣೆ ಕೈಗೊಂಡಿದ್ದಾರೆ. ವಿದ್ಯಾರ್ಥಿನಿ ತನ್ನ ಮೇಲೆ ಕೀಟಲೆ ನಡೆದಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾಳೆ.