ಧರ್ಮ ನಿಂದನೆ : ಯುವಕನಿಗೆ ಉದ್ರಿಕ್ತರಿಂದ 'ಚಾಟ್' ಏಟು
ಮಂಗಳೂರು: ಭಿನ್ನ ಕೋಮಿನ ಯುವಕರಿಬ್ಬರು ಮೊಬೈಲ್ ಮೂಲಕ ಫೇಸ್‌ಬುಕ್ ಚಾಟ್‌ನಲ್ಲಿ ಧಾರ್ಮಿಕ ವಿಚಾರದಲ್ಲಿ ಪರಸ್ಪರ ದೂಷಿಸಿದ ಬಳಿಕ ಉದ್ರಿಕ್ತರ ಯುವಕ ಗುಂಪೊಂದು ಧರ್ಮನಿಂದನೆ ಆರೋಪದಲ್ಲಿ ಒಬ್ಬ ಯುವಕನ ಮೇಲೆ ಹಲ್ಲೆ ನಡೆಸಿದ ಘಟನೆ ಕೊಣಾಜೆ ಸಮೀಪ ಫಜೀರು ಗ್ರಾಮದಲ್ಲಿ ಗುರುವಾರ ನಡೆದಿದೆ.
ಮುಡಿಪು ಕಂಬಳಪದವಿನ ಇನ್‌ಫೊಸಿಸ್ ಸಂಸ್ಥೆ ಬಳಿಯ ಬೈಕ್ ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದ ಪ್ರಸಾದ್ ಹಲ್ಲೆಗೊಳಗಾದ ಯುವಕ.
ಘಟನೆ ವಿವರ: ಎರಡು ತಿಂಗಳ ಹಿಂದೆ ಪ್ರಸಾದ್ ಫೇಸ್‌ಬುಕ್‌ನಲ್ಲಿ 'ಚಾಟ್' ಮಾಡುವಾಗ ಮುಡಿಪು ಅಶ್ರಫ್ ಲೈವ್ ಸಿಕ್ಕಿದ್ದ. ಮಾತನಾಡುತ್ತಾ ಅಶ್ರಫ್ ಆರ್‌ಎಸ್‌ಎಸ್ ಇನ್ನಿತರ ವಿಚಾರದ ಬಗ್ಗೆ ಅವಹೇಳನ ಮಾಡಿದ್ದ ಎನ್ನಲಾಗಿದೆ. ಇದರಿಂದ ಸಿಟ್ಟಿಗೆದ್ದ ಪ್ರಸಾದ್ ಮುಸ್ಲಿಮರ ಧಾರ್ಮಿಕ ಸಂಕೇತಗಳಿಗೆ ಅವಹೇಳನ ಮಾಡುವ, ಹಂದಿ ತಲೆಯ ಚಿತ್ರಗಳನ್ನು ಚಾಟ್ ಮಾಡುತ್ತಾ ಕಳುಹಿಸಿದ್ದಾನೆ. ಗುರುವಾರ ಮಧ್ಯಾಹ್ನ ಗ್ಯಾರೇಜ್‌ಗೆ ಬಂದು 100ಕ್ಕೂ ಹೆಚ್ಚು ಮಂದಿ ಪ್ರಸಾದ್‌ನ ಮೊಬೈಲ್ ಪರಿಶೀಲಿಸಿ, ಫೇಸ್ ಬುಕ್ ತೆರೆಯುವಂತೆ ಹೇಳಿದ್ದಾರೆ. ಬಳಿಕ ಚಿತ್ರಗಳನ್ನು ನೋಡಿದ ಬಳಿಕ ಮುಖ ಮೂತಿ ನೋಡದೆ ಹಲ್ಲೆ ನಡೆಸಿದ್ದಾರೆ. 2 ಕಿ.ಮೀ. ದೂರದಲ್ಲಿರುವ ಕೊಣಾಜೆ ಠಾಣೆಯಿಂದ ಪೊಲೀಸರು ಸ್ಥಳಕ್ಕೆ ಧಾವಿಸಿದರು.
ಬಳಿಕ ಏಟು ತಿಂದ ಯುವಕನನ್ನು ಠಾಣೆಗೆ ಕರೆಸಿದರು. ಸಾವಿರಕ್ಕೂ ಹೆಚ್ಚು ಮಂದಿ ಉದ್ರಿಕ್ತ ಜನರು ಠಾಣೆ ಮುಂದೆ ಜಮಾಯಿಸಿದ್ದರು.
ದಲಿತ ದೌರ್ಜನ್ಯ ಪ್ರಕರಣ ದಾಖಲಿಸಲು ಒತ್ತಾಯ: ಫೇಸ್‌ಬುಕ್‌ನಲ್ಲಿ ಮಾತುಕತೆ (ಚಾಟ್) ಇಬ್ಬರ ನಡುವೆ ಮಾತ್ರ ನಡೆದಿದೆ. ಸಾರ್ವಜನಿಕವಾಗಿ ಅವಹೇಳನವಾಗಿಲ್ಲ ಎಂದು ಪ್ರಸಾದ್ ಪರವಾಗಿ ವಾದ ಮಂಡಿಸಿದ್ದಾರೆ. ಪ್ರಸಾದ್ ದಲಿತ ಸಮುದಾಯ ಸೇರಿದ್ದು, ದಲಿತರ ಮೇಲೆ ಹಲ್ಲೆ ನಡೆಸಿದ ಬಗ್ಗೆ ದಲಿತ ದೌರ್ಜನ್ಯ ಪ್ರಕರಣ ದಾಖಲಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಕೊಣಾಜೆ ಪೊಲೀಸರು ಎರಡು ಕಡೆಯ ದೂರುಗಳನ್ನು ಸ್ವೀಕರಿಸಿದ್ದಾರೆ.