ಮಣಿಪಾಲ ಇನ್ನು 'ಬಿಗಿ ಭದ್ರತೆಯ ನಗರ'
ಮಣಿಪಾಲ: ಮಣಿಪಾಲ ವಿವಿ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಇತ್ತೀಚೆಗೆ ನಡೆದ ಅತ್ಯಾಚಾರ ಹಿನ್ನೆಲೆಯಲ್ಲಿ ಮಣಿಪಾಲವನ್ನು 'ಬಿಗಿ ಭದ್ರತೆಯ ನಗರ'ವನ್ನಾಗಿ ಮಾಡಲು ಪೊಲೀಸ್ ಇಲಾಖೆ ಎಲ್ಲ ಸಿದ್ಧತೆ ಮಾಡಿಕೊಂಡಿದೆ.
ಮಣಿಪಾಲದ 10 ಆಯಕಟ್ಟಿನ ಸ್ಥಳಗಳನ್ನು ಟ್ರಾಫಿಕ್ ಮಾನಿಟರಿಂಗ್ ಪಾಯಿಂಟ್ಗಳೆಂದು ಗುರುತಿಸಲಾಗಿದ್ದು, ಅಲ್ಲಿ ಅತ್ಯಾಧುನಿಕ- ಬೂಮ್ ಬ್ಯಾರಿಯಲ್ ಶಾರ್ಟ್ ಸರ್ಕ್ಯೂಟ್ ಕ್ಯಾಮೆರಾಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ. ಆ ಮೂಲಕ ಮಣಿಪಾಲದಲ್ಲಿ ನಡೆಯುವ ಎಲ್ಲ ಅಕ್ರಮ ಚಟುವಟಿಕೆಗಳ ಮೇಲೆ ಪೊಲೀಸ್ ಕಣ್ಣಿಡಲು ಸಾಧ್ಯವಾಗಲಿದೆ.
ಈ ಬಗ್ಗೆ ಜಿಲ್ಲಾಧಿಕಾರಿ ಡಾ.ಎಂ.ಟಿ. ರೇಜು ಅಧ್ಯಕ್ಷತೆಯಲ್ಲಿ, ಎಸ್ಪಿ ಡಾ. ಬೋರಲಿಂಗಯ್ಯ ಉಪಸ್ಥಿತಿಯಲ್ಲಿ ಮಣಿಪಾಲ ವಿವಿ, ನಗರಸಭೆ, ಆಟೋ ಚಾಲಕ-ಮಾಲೀಕರ ಸಂಘಟನೆಗಳ ಸಭೆ ನಡೆಸಲಾಯಿತು. ಸಭೆಯಲ್ಲಿ ಅನೇಕ ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು. ಮಣಿಪಾಲದಲ್ಲಿ ಅಗತ್ಯವಿರುವ ಕಡೆಗಳಲ್ಲೆಲ್ಲ ವಿದ್ಯುತ್ ದೀಪಗಳನ್ನು ಹಾಕಲು ನಗರಸಭೆ ಅಧಿಕಾರಿಗಳು ಸಭೆಯಲ್ಲಿ ಒಪ್ಪಿದರು.
ಆಟೋಗಳಿಗೆ ವಿಶೇಷ ನಂಬರ್: ಮಣಿಪಾಲದ ಎಲ್ಲ ಆಟೋಗಳನ್ನು ಗುರುತಿಸಲು ವಿಶೇಷ ನಂಬರ್ವೊಂದನ್ನು ನೀಡಿ, ಅದನ್ನು ನೋಂದಣಿ ಮಾಡುವುದಕ್ಕೆ ಸಭೆಯಲ್ಲಿ ತೀರ್ಮಾನಿಸಲಾಯಿತು. ಮಣಿಪಾಲ ವಿವಿ ಗ್ರಂಥಾಲಯದಲ್ಲಿ ರಾತ್ರಿ ಅಧ್ಯಯನ ಮಾಡುವವರನ್ನು ರಾತ್ರಿ 10 ಗಂಟೆ ನಂತರ ಸೆಕ್ಯುರಿಟಿ ವಾಹನದಲ್ಲಿ ಹಾಸ್ಟೆಲ್, ಮನೆಗಳಿಗೆ ತಲುಪಿಸಲು ವಿವಿಯ ಅಧಿಕಾರಿಗಳು ಒಪ್ಪಿಸಿದ್ದಾರೆ.
ಕ್ಯಾಂಪಸ್ನಲ್ಲಿ ಪೊಲೀಸರ ಗಸ್ತು: ರಾತ್ರಿ 2-3 ವಾಹನಗಳಲ್ಲಿ ವಿವಿಯ ಕ್ಯಾಂಪಸ್ನಲ್ಲಿ ಗಸ್ತು ತಿರುಗುವುದು, ಮಣಿಪಾಲದ ಸುತ್ತಮುತ್ತ ಪೊಲೀಸ್ ಇಲಾಖೆಯಿಂದ ಗಸ್ತು ನಡೆಸುವುದು ಎಂದು ನಿರ್ಣಯಿಸಲಾಯಿತು. ಮಣಿಪಾಲದ ಬಾರ್ ಮತ್ತು ರೆಸ್ಟೋರೆಂಟ್ಗಳನ್ನು ನಿಗದಿತ ಸಮಯಕ್ಕೆ ಸರಿಯಾಗಿ ಮುಚ್ಚಲು ಕ್ರಮ ಕೈಗೊಳ್ಳಲು ಅಬಕಾರಿ ಮತ್ತು ಪೊಲೀಸ್ ಇಲಾಖೆಗೆ ಸೂಚಿಸಲಾಯಿತು.
ಹೆಲ್ಪ್ಲೈನ್: ಮಣಿಪಾಲ ಸುತ್ತಮುತ್ತಲಿನ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಸಹಕಾರಿಯಾಗುವಂತೆ ವಿಶೇಷ ದೂರವಾಣಿ ಸಂಖ್ಯೆ ಇರುವ ಹೆಲ್ಪ್ಲೈನ್ ಆರಂಭಿಸಲು ಜಿಲ್ಲಾಧಿಕಾರಿ ಸಲಹೆ ಮಾಡಿದರು.