ಮುಖ್ಯಮಂತ್ರಿ ಚಂದ್ರು ರಾಜಿನಾಮೆ ಯಾಕಿಲ್ಲ?: ರಹೀಂ ಉಚ್ಚಿಲ
ಮಂಗಳೂರು: ಅಕಾಡೆಮಿಗಳ ಅಧ್ಯಕ್ಷರಾದವರು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿರಬಾರದು ಎಂಬ ನಿಯಮ ಬೈಲಾದಲ್ಲಿ ಇಲ್ಲ. ರಾಜಕೀಯ ಉದ್ದೇಶದಿಂದ ಸರ್ಕಾರ ಈಗಿರುವ ಅಧ್ಯಕ್ಷರ ಮೇಲೆ ಕ್ರಮ ತೆಗೆದುಕೊಳ್ಳುತ್ತದೆ ಎಂದಾದರೆ ಬಿಜೆಪಿ ಚುನಾವಣಾ ಪ್ರಚಾರ ಸಮಿತಿ ಪ್ರಮುಖರಾಗಿ ಗುರುತಿಸಿಕೊಂಡಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರ ರಾಜಿನಾಮೆ ಯಾಕೆ ಕೇಳಿಲ್ಲ ಎಂದು ಬ್ಯಾರಿ ಸಾಹಿತ್ಯ ಅಕಾಡೆಮಿ ಪದಚ್ಯುತ ಅಧ್ಯಕ್ಷ ರಹೀಂ ಉಚ್ಚಿಲ ಮುಖ್ಯಮಂತ್ರಿ ಸಿದ್ಧರಾಮಯ್ಯರನ್ನು ಪ್ರಶ್ನಿಸಿದ್ದಾರೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಕಾಡೆಮಿ ಸ್ವಾಯತ್ತ ಸಂಸ್ಥೆಯಾಗಿದ್ದು, ಸರ್ಕಾರ ಬೈಲಾವನ್ನು ಮಾಡಿ ಅಕಾಡೆಮಿಗಳ ಅಧ್ಯಕ್ಷರು ಮೂರು ವರ್ಷ ಪದಧಾರಣೆ ಮಾಡತಕ್ಕದ್ದು ಎಂದು ಉಲ್ಲೇಖಿಸಿದೆ. ಹೀಗಿರುವಾಗ ಸರ್ಕಾರವೇ ಬೈಲಾ ಉಲ್ಲಂಘಿಸಿ ಅಧ್ಯಕ್ಷರ ರಾಜಿನಾಮೆಗೆ ಆದೇಶಿಸಿರುವುದು ಸರಿಯಾದ ಕ್ರಮವಲ್ಲ ಎಂದರು.