ಕಡಲ್ಕೊರೆತ ತಡೆಗೋಡೆಗೆ ರು. 275 ಕೋಟಿ: ಸೊರಕೆ
ಪಡುಬಿದ್ರಿ: ಉಡುಪಿ ಜಿಲ್ಲೆಯ ಸಮುದ್ರ ತೀರದಲ್ಲಿ ಶಾಶ್ವತ ಕಡಲ್ಕೊರೆತ ತಡೆಗೋಡೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಈ ಬಾರಿ ರು. 275 ಕೋಟಿ ತೆಗೆದಿರಿಸಿದೆ ಎಂದು ರಾಜ್ಯ ನಗರಾಭಿವೃದ್ಧಿ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಹೇಳಿದ್ದಾರೆ.
ಇಲ್ಲಿನ ಹೆಜಮಾಡಿಯ ಹಳೆ ಬಂದರು ಮತ್ತು ಎರ್ಮಾಳು ಕಡಲು ಕೊರೆತ ಪ್ರದೇಶಕ್ಕೆ ಶನಿವಾರ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಹೆಜಮಾಡಿಯ ಹಳೆಯ ಬಂದರನ್ನು ಅಭಿವೃದ್ಧಿಪಡಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜಂಟಿ ಅನುದಾನದಲ್ಲಿ ಸುಮಾರು ರು. 100 ಕೋಟಿಯ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದವರು ಈ ಸಂದರ್ಭ ತಿಳಿಸಿದರು.
ಅನುದಾನ ಏರಿಕೆ: ಇದುವರೆಗೆ ಮೀನುಗಾರಿಕೆ ರಸ್ತೆಗಳ ನಿರ್ಮಾಣ, ನಿರ್ವಹಣೆಗೆ ಪ್ರತಿವರ್ಷ ರು. 6 ಕೋಟಿ ಅನುದಾನ ಬರುತ್ತಿತ್ತು, ಅದನ್ನು ಈ ಸಾಲಿನ ಬಜೆಟ್‌ನಲ್ಲಿ ರು. 30 ಕೋಟಿಗೆ ಏರಿಸಲಾಗಿದೆ. ಈ ಅನುದಾನದಲ್ಲಿ ಹೆಜಮಾಡಿ ಬಂದರಿನ ರಸ್ತೆಯನ್ನು ಕೂಡ ಅಭಿವೃದ್ಧಿಪಡಿಸಲಾಗುವುದು. ಇದರಿಂದ ಹೆಜಮಾಡಿ ಬಂದರು ಮುಂದಿನ ದಿನಗಳಲ್ಲಿ ಸುಸಜ್ಜಿತ ವಾಣಿಜ್ಯ ಬಂದರಾಗಲಿದೆ ಎಂದು ಸಚಿವರು ಹೇಳಿದರು.
ಮೀನುಗಾರರಿಗೆ ವಿತರಿಸಲಾಗುವ ಮತ್ಸ್ಯಾಶ್ರಯ ಮನೆಗಳಿಗೆ ಈ ಮೊದಲು ರು. 60 ಸಾವಿರ ಸಹಾಯಧನ ನೀಡುತ್ತಿದ್ದು, ಅದನ್ನು ಕೂಡ ಈ ವರ್ಷದಿಂದ ರು. 1.20 ಲಕ್ಷಕ್ಕೇರಿಸಲಾಗಿದೆ. ಮೀನುಗಾರರಿಗೆ ಬೋಟ್‌ಗಳಿಗೆ ನೀಡಲಾಗುವ 150 ಲೀ. ಸಬ್ಸಿಡಿ ಡಿಸೇಲನ್ನು 400 ಲೀ.ಗೇರಿಸಲಾಗಿದೆ. ಮೀನುಗಾರ ಮಹಿಳೆಯರಿಗೆ ಶೇ. 2ರ ಬಡ್ಡಿದರದಲ್ಲಿ ಸಾಲ ನೀಡುವ ಯೋಜನೆ ಕೂಡ ಸರ್ಕಾರ ಹಾಕಿಕೊಂಡಿದೆ ಎಂದರು.
ಗೋವಾ ಹಾಗೂ ಕೇರಳ ರಾಜ್ಯ ಮಾದರಿಯಲ್ಲಿ ನಮ್ಮ ರಾಜ್ಯದಲ್ಲಿಯೂ ಸಿಅರ್‌ಝೆಡ್ ನಿಯಮಗಳಿಗೆ ರಿಯಾಯತಿ ನೀಡಲು ಅರಣ್ಯ ಸಚಿವರನ್ನು ಕೇಳಿಕೊಳ್ಳಲಾಗಿದೆ ಎಂದವರು ಹೇಳಿದರು.
ಅಪರ ಜಿಲ್ಲಾಧಿಕಾರಿ ಕುಮಾರ್, ಕಾಂಗ್ರೆಸ್ ನಾಯಕರಾದ ಕಾಪು ದಿವಾಕರ ಶೆಟ್ಟಿ, ನವೀನ್‌ಚಂದ್ರ ಶೆಟ್ಟಿ, ಅಬ್ದುಲ್ ಅಜೀಜ್, ಮೀನುಗಾರ ಮುಖಂಡರಾದ ವಿಜಯ ಬಂಗೇರ, ಬಂದರು, ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು, ಕಡಲ್ಕೊರೆತ ಸಂತ್ರಸ್ತರು ಇದ್ದರು.
ಇದಕ್ಕೆ ಮೊದಲು ಸಚಿವರು ವಿವಾದಿತ ಉಡುಪಿ ಪವರ್ ಕಾರ್ಪೋರೇಶನ್ ಲಿಮಿಟೆಡ್ ಉಷ್ಣ ವಿದ್ಯುತ್ ಸ್ಥಾವರ, ಗಾಳಿ ವಿದ್ಯುತ್ ಯಂತ್ರಗಳನ್ನು ತಯಾರಿಸುವ ಸುಜ್ಞಾನ್, ಪಾದೂರಿನ ಕಚ್ಚಾತೈಲ ಸಂಗ್ರಹಣಾಗಾರ ಪ್ರದೇಶಕ್ಕೂ ಭೇಟಿ ನೀಡಿ ಅಲ್ಲಿನ ಅಧಿಕಾರಿಗಳೊಡನೆ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದರು.