ಇನ್‌ಸ್ಪೈರ್ ಅವಾರ್ಡ್: ಅಕ್ಷಯ್ ರಾಜ್ಯಮಟ್ಟಕ್ಕೆ
ಉಪ್ಪಿನಂಗಡಿ: ಮಂಗಳೂರು ತಾಲೂಕಿನ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಏರ್ಪಡಿಸಿದ್ದ ಜಿಲ್ಲಾಮಟ್ಟದ ಇನ್‌ಸ್ಪೈರ್ ಅವಾರ್ಡ್ 2013- 14ನೇ ಸಾಲಿನ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಉಪ್ಪಿನಂಗಡಿಯ ಇಂದ್ರಪ್ರಸ್ಥ ವಿದ್ಯಾಲಯದ 10ನೇ ತರಗತಿಯ ವಿದ್ಯಾರ್ಥಿ ಅಕ್ಷಯ್ ಜಿ.ಕೆ. ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರು, ವಾತಾವರಣಕ್ಕೆ ಸೇರುವ ಇಂಗಾಲದ ಡೈ ಆಕ್ಸೈಡ್ ಪ್ರಮಾಣ ಕಡಿಮೆ ಮಾಡುವಲ್ಲಿ ಸಹಕಾರಿಯಾಗುವ ಒಲೆಯ ಒಂದು ಮಾದರಿಯನ್ನು ಹಸಿರು ಒಲೆ ಇಂಗಾಲದ ಡೈ ಆಕ್ಸೈಡ್ ಮುಕ್ತ ಒಲೆ ಎಂಬ ಶೀರ್ಷಿಕೆಯಡಿ ಪ್ರದರ್ಶಿಸಿ, ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಶಿಕ್ಷಕಿ ಉಮಾ ಕಜೆ ಮಾರ್ಗದರ್ಶನದಲ್ಲಿ ಅಕ್ಷಯ್ ಈ ಮಾದರಿ ತಯಾರಿಸಿದ್ದಾರೆ.
ಮೂವರಿಗೆ ಡಾಕ್ಟರೇಟ್ ಪದವಿ
ಮಂಗಳೂರು: ಇಲ್ಲಿನ ಸಂತ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನ ಮೂವರು ಪ್ರಾಧ್ಯಾಪಕರಿಗೆ ಡಾಕ್ಟರೇಟ್ ಪದವಿ ದೊರಕಿದೆ.
ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಸಹಪ್ರಾಧ್ಯಾಪಕ ಕೆ.ಎಚ್.ವಿಶ್ವನಾಥ್ ಅವರಿಗೆ ಮೈಸೂರು ವಿಶ್ವವಿದ್ಯಾನಿಲಯದಿಂದ ಮತ್ತು ಭೌತಶಾಸ್ತ್ರ ವಿಭಾಗದ ಸಹಪ್ರಾಧ್ಯಾಪಕ ರಾಜೇಶ್ ಕುಮಾರ್ ಅವರಿಗೆ ಮಂಗಳೂರು ವಿಶ್ವವಿದ್ಯಾನಿಲಯದಿಂದ ಹಾಗೂ ಸಿವಿಲ್ ಎಂಜಿನಿಯರಿಂಗ್ ವಿಭಾಗ ಮುಖ್ಯಸ್ಥೆ ಸುಜಾತ ಉನ್ನಿಕೃಷ್ಣನ್ ಅವರಿಗೆ ಸುರತ್ಕಲ್‌ನ ಎನ್‌ಐಟಿಕೆಯಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.