ಜಾಗತಿಕ ತಾಪಮಾನಕ್ಕೆ ಕರಾವಳಿಯೂ ಸವಕಳಿ...
ಮಂಗಳೂರು: 15-20 ವರ್ಷಗಳ ಹಿಂದಿನ ಮಾತು, ಆಗ ಕರಾವಳಿ ತೀರದಲ್ಲಿ ಕಡಲ್ಕೊರೆತ ಕಂಡುಬಂದದ್ದು ಉಳ್ಳಾಲದಲ್ಲಿ. ಈಗ ಕರಾವಳಿಯುದ್ದಕ್ಕೂ ಕಡಲ್ಕೊರೆತದ್ದೇ ತಾಪತ್ರಯ. ಕಡಲ್ಕೊರೆತ ಎಲ್ಲಿವರೆಗೆ ತಲಪಿದೆ ಎಂದರೆ, ಕಡಲ ಕಿನಾರೆ ಸಮುದ್ರಕ್ಕೆ ಇಳಿದುಹೋಗಿದೆ. ಹೀಗೆ ಕೊರೆತ ಕರಾವಳಿ ತೀರವನ್ನೇ ಆಪೋಶನ ತೆಗೆದುಕೊಳ್ಳುತ್ತಿದೆ. ಇಷ್ಟಾದರೂ ಕೊರತೆ ತಡೆಗೆ ಶಾಶ್ವತ ಪರಿಹಾರ ಪ್ರಕೃತಿಯ ಎದುರು ಸಾಧ್ಯವಾಗುತ್ತಿಲ್ಲ.
ಜಾಗತಿಕ ತಾಪಮಾನ ಎಫೆಕ್ಟ್: ಕಳೆದ ಎರಡು ವರ್ಷಗಳಿಂದ ಜಾಗತಿಕ ತಾಪಮಾನ ಏರುತ್ತಿರುವ ಬಗ್ಗೆ ವಿಶ್ವ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಮೇಲ್ನೋಟಕ್ಕೆ ಅದರ ಗಂಭೀರತೆ ಅರಿವಿಗೆ ಬಾರದಿದ್ದರೂ ಭೌಗೋಳಿಕವಾಗಿ ಕಡಲ್ಕೊರೆತ ವ್ಯಾಪಕವಾಗಲು ಜಾಗತಿಕ ತಾಪಮಾನದ ಕೊಡುಗೆಯೂ ಇದೆ ಎನ್ನುತ್ತಾರೆ ಭೂಗರ್ಭ ಶಾಸ್ತ್ರಜ್ಞರು.
ಬೇಸಗೆಯಲ್ಲಿ ಕಳೆದ ಬಾರಿ 49 ಡಿಗ್ರಿ ವರೆಗೆ ಇಲ್ಲಿ ತಾಪಮಾನ ಏರಿತ್ತು. ಈ ಬಾರಿ ಮೋಡ, ಬೇಸಗೆಯಲ್ಲೇ ಮಳೆ ಸುರಿದಿದೆ. ಮೇ ತಿಂಗಳಾಂತ್ಯದಲ್ಲಿ ನಿರಂತರ ಸುರಿದ ಮಳೆ ಆಗೊಮ್ಮೆ ಈಗೊಮ್ಮೆ ಬಿಡುವು ಮಾಡಿದ್ದರೂ ಜೂನ್ ಮಧ್ಯಭಾಗ ವರೆಗೆ ಧಾರಾಕಾರ ಮಳೆಯಾಗಿದೆ. ಇದು ಕೂಡ ಹವಾಮಾನ ವೈಪರೀತ್ಯದ ಕೊಡುಗೆ ಎನ್ನುವುದು ಹವಾಮಾನ ತಜ್ಞರ ಅಭಿಮತ.
ಮೇರೆ ಮೀರಿದ ಕೊರೆತ: ಕರ್ನಾಟಕ ಕರಾವಳಿ ಉದ್ದ ತಲಪಾಡಿಯಿಂದ ಬೈಂದೂರುವರೆಗೆ 300 ಕಿ.ಮೀ. ತಲಪಾಡಿಯಿಂದ ಕಾರವಾರ ವರೆಗೆ ಕಡಲ್ಕೊರೆತ ಸಮಸ್ಯೆ ಇದೆ. ಅದರಲ್ಲೂ ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಹಿಂದಿಗಿಂತ ಈ ಬಾರಿ ಕೊರೆತ ಜಾಸ್ತಿ. ಕರಾವಳಿ ತೀರವನ್ನು ಕಬಳಿಸುವ ರೀತಿಯಲ್ಲಿ ಕೊರೆತ ಉಂಟಾಗುತ್ತಿದೆ.
ಈಗ ಉಳ್ಳಾಲ ಮಾತ್ರವಲ್ಲ ಮೊಗವೀರಪಟ್ಣದಲ್ಲೂ ಕೊರೆತ ಶುರುವಾಗಿದೆ. ಉಡುಪಿಯಲ್ಲಿ ಎರ್ಮಾಳ್, ಪಡುಬಿದ್ರಿ, ಹೆಜಮಾಡಿಯಲ್ಲೂ ಕೊರೆತ ಜಾಸ್ತಿಯಾಗುತ್ತಿದೆ. ಕಳೆದ 8 ವರ್ಷದಲ್ಲಿ ಈ ವರ್ಷದ ಕೊರೆತ ಅಧಿಕ ಎನ್ನುತ್ತಾರೆ ಬಂದರು ಅಧಿಕಾರಿಗಳು.
ಸುಭಾಷ್‌ನಗರ, ಕೈಕೋ, ಹಿಲಾರಿ ನಗರದಲ್ಲಿ ಕಡಲ್ಕೊರೆತ ಸರಾಸರಿ 500 ಮೀಟರ್‌ನಿಂದ ಈ ಬಾರಿ 1.3 ಕಿ.ಮೀ. ವಿಸ್ತರಿಸಿದೆ. ಈ ಪ್ರದೇಶಗಳಲ್ಲಿ ಹಿಂದಿಗಿಂತ ಮೂರುಪಟ್ಟು ಕೊರೆತ ಅಧಿಕವಾಗಿದೆ.
ಹಿಲಾರಿನಗರದಲ್ಲಿ 250 ಮೀಟರ್, ಮೊಗವೀರಪಟ್ಣ 300 ಮೀಟರ್, ಕೋಡಿ, ಕೋಟೆಪುರ 150 ಮೀಟರ್, ಮುಕ್ಕ, ಸಸಿಹಿತ್ಲು 150 ಮೀಟರ್ ಕೊರೆತ ಕಂಡುಬಂದಿದೆ. ಗಂಟೆಗೆ 55 ಕಿ.ಮೀ ವೇಗದಲ್ಲಿ ಗಾಳಿ ಬೀಸಿದ್ದೂ ಇನ್ನೊಂದು ಕಾರಣ. ಕಡಲ್ಕೊರೆತಕ್ಕೆ ಸಿಲುಕಿ ಇದುವರೆಗೆ 10 ಮನೆ ಜಲಸಮಾಧಿಯಾಗಿದೆ. ಆದರೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಮಳೆ ಪ್ರಮಾಣವೂ ಜಾಸ್ತಿ: ಜಿಲ್ಲೆಯಲ್ಲಿ ಜನವರಿಯಿಂದ ಜುಲೈವರೆಗೆ ವಾಡಿಕೆ ಮಳೆ 2393.2 ಮಿಲಿ ಮೀಟರ್. ಈ ಬಾರಿ ಶನಿವಾರವರೆಗೆ 2669.1 ಮಿ.ಮೀ. ಅಧಿಕ ಮಳೆ ಬಂದಿದೆ. ಜುಲೈ ತಿಂಗಳಲ್ಲಿ ಇದುವರೆಗೆ ಬಿದ್ದ ಮಳೆ ಪ್ರಮಾಣ 1430 ಮಿ.ಮೀ.
ಜನವರಿಯಿಂದ ಡಿಸೆಂಬರ್‌ವರೆಗೆ 2011ರಲ್ಲಿ ಒಟ್ಟು 4039 ಮೀಟರ್ ಮಳೆಯಾಗಿದ್ದು, 2012ರಲ್ಲಿ 3349 ಮೀಟರ್, 2013ರಲ್ಲಿ ಈವರೆಗೆ 1430 ಮೀಟರ್ ಮಳೆ ದಾಖಲಾಗಿದೆ. ಈ ಸಲವೂ 4 ಸಾವಿರ ಮೀಟರ್ ಮೀರುವ ಸಾಧ್ಯತೆಯನ್ನು ಅಧಿಕಾರಿಗಳು ಹೇಳುತ್ತಾರೆ.
-ಆತ್ಮಭೂಷಣ್