ತೈಲ ಸಂಗ್ರಹ: 15 ದಿನದಲ್ಲಿ ಟೆಂಡರ್ ಕರೆಯಲು ಸೂಚನೆ
ಮಂಗಳೂರು: ಮಂಗಳೂರಿನ ಪೆರ್ಮುದೆಯಲ್ಲಿ ಸಿದ್ಧಗೊಳ್ಳುತ್ತಿರುವ ಐಎಸ್ಪಿಆರ್ಎಲ್ (ಇಂಡಿಯನ್ ಸ್ಟ್ರೆಟಜಿಕ್ ಪೆಟ್ರೋಲಿಯಂ ರಿಸರ್ವ್ಸ್ ಲಿಮಿಟೆಡ್) ಭೂಗತ ತೈಲ ಸಂಗ್ರಹ ಯೋಜನೆಗೆ ಪೈಪ್ಲೈನ್ ಅಳವಡಿಕೆಗೆ 15 ದಿನದಲ್ಲಿ ಟೆಂಡರ್ ಕರೆಯುವಂತೆ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಡಾ. ವೀರಪ್ಪ ಮೊಯ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ದೆಹಲಿಯಲ್ಲಿ ಶುಕ್ರವಾರ ನಡೆದ ಸಚಿವಾಲಯದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಸೂಚನೆ ನೀಡಲಾಗಿದೆ. 3 ಕಂಪನಿಗಳು ಬಿಡ್ಗೆ ಮುಂದೆ ಬಂದಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಪೈಪ್ಲೈನ್ ಅಳವಡಿಕೆ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಸೂಚಿಸಲಾಗಿದೆ ಎಂದು ಐಎಸ್ಪಿಆರ್ಎಲ್ ಮುಖ್ಯ ಅಧಿಕಾರಿ ವಿಜಯಾನಂದ್ ತಿಳಿಸಿದ್ದಾರೆ. 'ಭೂಗತ ತೈಲ ಸಂಗ್ರಹ ಯೋಜನೆಗೆ ಪೈಪ್ಲೈನ್ ವಿಳಂಬ' ಕುರಿತು ಜು.22ರಂದು 'ಕನ್ನಡಪ್ರಭ'ದಲ್ಲಿ ವಿಶೇಷ ವರದಿ ಪ್ರಕಟವಾಗಿ ಸಚಿವರ ಗಮನ ಸೆಳೆದಿತ್ತು. ಈ ಬಗ್ಗೆ ಸಚಿವ ಡಾ.ಮೊಯ್ಲಿ, ಸಚಿವಾಲಯ ಅಧಿಕಾರಿಗಳ ಜತೆ ಯೋಜನೆಯ ಪ್ರಸ್ತುತ ಹಂತದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರಲ್ಲದೆ, ತ್ವರಿತವಾಗಿ ಪೈಪ್ಲೈನ್ ಕಾಮಗಾರಿ ಮುಕ್ತಾಯಕ್ಕೆ ಸೂಚಿಸಿದ್ದಾರೆ.