ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ನೀರಿಗೆ ಬಿದ್ದು ವ್ಯಕ್ತಿ ಸಾವು

Lingaraj Badiger
Updated On : 29 Jul 2013, 11:56 am

ಬೆಳ್ತಂಗಡಿ: ವೇಣೂರು ಸಮೀಪ ಶುಕ್ರವಾರ ರಾತ್ರಿ ವ್ಯಕ್ತಿ ನೀರಿಗೆ ಬಿದ್ದು ಮೃತಪಟ್ಟಿದ್ದು, ಶನಿವಾರ ಮೃತದೇಹ ಪತ್ತೆಯಾಗಿದೆ. ವೇಣೂರಿನ ಕರಿಮಣೇಲಿನ ಗಾಂಧಿನಗರದ ಕಾಂತಿಬೆಟ್ಟು ಮನೆ ವಾಸು ಪೂಜಾರಿ (58) ಮೃತರು. ಇವರಿಗೆ ಕುಡಿತದ ಚಟ ಇತ್ತೆಂದು ಹೇಳಲಾಗುತ್ತಿದೆ. ಶುಕ್ರವಾರ ಸಂಜೆ ವೇಣೂರಿಗೆ ತೆರಳಿದ್ದರು. ಮರಳಿ ಬರುವಾಗ ಮಲ್ಲದೊಟ್ಟಿನಲ್ಲಿ ಚರಂಡಿ ನೀರಿಗೆ ಬಿದ್ದಿದ್ದರು. ಅದರ ಕುಡಿತದ ಮತ್ತಿನಿಂದಾಗಿ ಮೇಲೆ ಬರಲು ಸಾಧ್ಯವಾಗಲಿಲ್ಲ. ಜೊತೆಗೆ ಮಳೆ ನೀರು ಬೇರೆ ಹರಿಯುತ್ತಿತ್ತು. ನೀರಿನ ಹರಿವೆಗೆ ಸಿಕ್ಕಿ ವಾಸು ಅಲ್ಲೇ ಮೃತಪಟ್ಟಿದ್ದು, ಶನಿವಾರ ಬೆಳಗ್ಗೆ ನೀರಿನ ಚರಂಡಿಯಲ್ಲಿ ಮೃತದೇಹ ಪತ್ತೆಯಾಗಿದೆ. ಪುತ್ರ ಸತೀಶ ನೀಡಿದ ದೂರಿನಂತೆ ವೇಣೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ವ್ಯಕ್ತಿ ಆತ್ಮಹತ್ಯೆ
ಬೆಳ್ತಂಗಡಿ: ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಕುಕ್ಕೇಡಿಯಲ್ಲಿ ಶನಿವಾರ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಕ್ಕೇಡಿ ಗ್ರಾಮದ ಕಡ್ಯಾರು ಮನೆ ಕೊರಗಪ್ಪ ಮೂಲ್ಯ (48) ಮೃತರು. ಇವರಿಗೆ ಮೂರು ವರ್ಷದಿಂದ ಹೃದಯ ಸಂಬಂಧಿ ಕಾಯಿಲೆ ಇತ್ತು. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು 15 ದಿನಗಳ ಹಿಂದೆ ವಾಪಸಾಗಿದ್ದರು. ಶನಿವಾರ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ
ಹಿರಿಯಡ್ಕ: ಇಲ್ಲಿನ ಪೆರ್ಡೂರು ಗ್ರಾಮದ ಕೊರಂಗಿಲ ದರ್ಖಾಸು ಎಂಬಲ್ಲಿನ ಜೀವನದಲ್ಲಿ ಜಿಗುಪ್ಸೆಗೊಂಡು ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ನಡೆದಿದೆ.  ನಾರಾಯಣ ಕುಲಾಲ್ (55) ಮೃತರು. ಇವರು ವಿಪರೀತ ಮದ್ಯಪಾನ ಚಟ ಹೊಂದಿದ್ದರು. ಬಹುಶಃ ಮದ್ಯಪಾನ ಮಾಡುವ ಚಟ ಬಿಡಲಾಗದೆ ಜೀವನದಲ್ಲಿ ಜಿಗುಪ್ಸೆಗೊಂಡು ವಿಷ ಪದಾರ್ಥ ಸೇವಿಸಿ ಮೃತಪಟ್ಟಿದ್ದಾಗಿ ಸಂತೋಷ ಕುಲಾಲ್ ನೀಡಿದ ದೂರಿನಂತೆ ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ
ಕೋಟ: ಜೀವನದಲ್ಲಿ ಜಿಗುಪ್ಸೆ ಹೊಂದಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಶಿರಿಯಾರ ಗ್ರಾಮದ ಕಲ್‌ಬೆಟ್ಟು ಎಂಬಲ್ಲಿ ಶನಿವಾರ ನಡೆದಿದೆ. ಶಂಭು ಮರಕಲ (48) ಮೃತರು.  ಇವರು ವಿಪರೀತ ಶರಾಬು ಕುಡಿಯುವ ಅಭ್ಯಾಸ ಹೊಂದಿದ್ದು, ಶರಾಬು ಕುಡಿಯುವ ಅಭ್ಯಾಸ ಬಿಡಲಾಗದೆ ಹಾಗೂ ಕುಡಿಯಲು ಹಣದ ಅಡಚಣೆಯಿಂದಾಗಿ ಜೀವನದಲ್ಲಿ ಜಿಗುಪ್ಸೆ ಹೊಂದಿ, ಶನಿವಾರ ರಾತ್ರಿ ಮನೆಯ ಕೊಠಡಿಯಲ್ಲಿದ್ದ ಫ್ಯಾನಿಗೆ ಸೀರೆಯಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ನಂದೀಶ ಮರಕಲ ನೀಡಿದ ದೂರಿನಂತೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾವಿಯಲ್ಲಿ ಅಪರಿಚಿತ ಮೃತದೇಹ
ಮಣಿಪಾಲ: ಇಲ್ಲಿನ 80 ಬಡಗಬೆಟ್ಟು ಗ್ರಾಮದ ಶಾಂತಿನಗರ ಎಂಬಲ್ಲಿ ಬಾವಿಯಲ್ಲಿ ಸುಮಾರು 30-35 ವರ್ಷ ವಯಸ್ಸಿನ ಅಪರಿಚಿತ ಗಂಡಸಿನ ಮೃತದೇಹವು ಭಾನುವಾರ ಕಂಡುಬಂದಿದೆ. ವ್ಯಕ್ತಿ ಮೃತಪಟ್ಟು ಸುಮಾರು 3-4 ದಿನಗಳು ಆಗಿರಬಹುದು. ಯಾವ ರೀತಿ ಸಾವು ಸಂಭವಿಸಿರಬಹುದು ಎಂದು ತಿಳಿದಿರುವುದಿಲ್ಲ ಎಂದು ಚಂದು ಪೂಜಾರಿ ನೀಡಿದ ದೂರಿನಂತೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೀನುಗಾರ ನದಿಪಾಲು
ಮಂಗಳೂರು: ನದಿ ದಂಡೆಯಲ್ಲಿ ಮೀನಿಗೆ ಗಾಳ ಹಾಕುತ್ತಿದ್ದ ವ್ಯಕ್ತಿ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ನೀರುಪಾಲಾದ ಘಟನೆ ಭಾನುವಾರ ಸಂಭವಿಸಿದೆ.  ಮೀನುಗಾರಿಕೆ ನಡೆಸುತ್ತಿದ್ದ ಸುಧೀರ್(37)ನೀರು ಪಾಲಾದ ವ್ಯಕ್ತಿ. ಈತ ಗುರುಪುರ ನದಿ ಕಿನಾರೆಯಲ್ಲಿ ಮೀನು ಹಿಡಿಯುತ್ತಿದ್ದಾಗ ಮಧ್ಯಾಹ್ನ ಈ ಘಟನೆ ನಡೆದಿದೆ. ಈತ ಫೆರ್ರಿ ಧಕ್ಕೆ ರಸ್ತೆ ನಿವಾಸಿ. ಪಾಂಡೇಶ್ವರ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ.

ವಿವಾಹಿತೆ ನಾಪತ್ತೆ
ಮಂಗಳೂರು: ಪದವಿನಂಗಡಿ ಕಟ್ಟೆ ಬಳಿಯಿಂದ ವಿವಾಹಿತೆ ಕೂಲಿ ಕಾರ್ಮಿಕೆ ನಾಪತ್ತೆಯಾದ ಘಟನೆ ಭಾನುವಾರ ವರದಿಯಾಗಿದೆ.  ನಾಪತ್ತೆಯಾದಾಕೆ ಮಂಜುಳಾ(22). ಮೂಲತಃ ಬಾದಾಮಿಯ ಕಾಕನೂರು ನಿವಾಸಿಯಾದ ಆಕೆ ಪತಿ ನಿಂಗಪ್ಪ ಜತೆ ಪದವಿನಂಗಡಿಯಲ್ಲಿ ಬಾಡಿಗೆ ರೂಮಿನಲ್ಲಿದ್ದಳು. ಇಲ್ಲಿ ಪತಿ ಜತೆ ಕೂಲಿ ಕೆಲಸ ಮಾಡುತ್ತಿದ್ದಳು. ಜು.26ರಂದು ಪೇಟೆಗೆ ಹೋದಾಕೆ ಮರಳಿ ಬಂದಿಲ್ಲ ಎಂದು ಪತಿ ನಿಂಗಪ್ಪ ಕಾವೂರು ಪೊಲೀಸರಿಗೆ ದೂರು ನೀಡಿದ್ದಾರೆ.  

ವೃದ್ಧೆಯ ಚಿನ್ನಾಭರಣ ದೋಚಿ ಪರಾರಿ
ಬಂಟ್ವಾಳ: ವಿಳಾಸ ಕೇಳುವ ನೆಪದಲ್ಲಿ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತರು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೃದ್ಧ ಮಹಿಳೆಯೊಬ್ಬರ 7 ಪವನ್ ತೂಕದ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ  ಭಾನುವಾರ ಬೆಳಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇಲ್ಲಿಗೆ ಸಮೀಪದ ಬಂಡಸಾಲೆ ಎಂಬಲ್ಲಿ ಈ ಘಟನೆ ನಡೆದಿದ್ದು, ಚಿನಾಭರಣ ಕಳೆದುಕೊಂಡಿರುವ ಲಿಲ್ಲಿ ಬರ್ಬೋಜ್ ಈ ಬಗ್ಗೆ ಬಂಟ್ವಾಳ ಠಾಣೆಗೆ ದೂರು ನೀಡಿದ್ದಾರೆ. ಲಿಲ್ಲಿ ಚರ್ಚ್‌ಗೆ ಹೋಗುತ್ತಿದ್ದಾಗ ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಬಂಡಸಾಲೆ ಎಂಬಲ್ಲಿ ಇವರನ್ನು ತಡೆದು ನಿಲ್ಲಿಸಿ ಈ ಕೃತ್ಯ ಎಸಗಿದ್ದಾರೆ. ರಸ್ತೆ ಪಕ್ಕದ ಮನೆಯೊಂದನ್ನು ತೋರಿಸಿದ ಅಪರಿಚಿತರು 'ಇದು ಸ್ಟೀವನ್ ಕುವೆಲ್ಲೋ ಅವರ ಮನೆಯಾ?' ಎಂದು ಪ್ರಶ್ನಿಸಿ ಮಾತನಾಡಿದ್ದು, ಲಿಲ್ಲಿ ಬೈಕ್ ಹತ್ತಿರ ಬರುತ್ತಿರುವಂತೆಯೇ ಏಕಾಏಕಿ ಇವರ ಕೊರಳಿಗೆ ಕೈ ಹಾಕಿದ  ಬೈಕ್ ಸವಾರ ಕೊರಳಲ್ಲಿದ್ದ 4 ಪವನ್ ತೂಕದ ಕರಿಮಣಿ ಸರ ಹಾಗೂ 3 ಪವನ್ ತೂಕದ ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದಾರೆ. ಇವುಗಳ ಒಟ್ಟು ಮೌಲ್ಯ ರು. 1 ಲಕ್ಷ ಎಂದು ಅಂದಾಜಿಸಲಾಗಿದ್ದು, ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement