ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಪಠ್ಯದಲ್ಲಿ ವೃತ್ತಿಕೌಶಲ್ಯ ಸೇರಿಸಿದರೆ ಕೃಪಾಂಕ

Lingaraj Badiger
Updated On : 29 Jul 2013, 11:56 am

ಮಂಗಳೂರು: ವಿಶ್ವವಿದ್ಯಾನಿಲಯಗಳು ತಮ್ಮ ಪಠ್ಯಸೂಚಿಯಲ್ಲಿ ವೃತ್ತಿ ಕೌಶಲ್ಯ ವಿಷಯವನ್ನು ಸೇರ್ಪಡೆಗೊಳಿಸಿದರೆ ಕೃಪಾಂಕ ನೀಡುವ ಬಗ್ಗೆ ಸರ್ಕಾರ ಪರಿಶೀಲನೆ ನಡೆಸಲಿದೆ ಎಂದು ರಾಜ್ಯ ಉನ್ನತ ಶಿಕ್ಷಣ ಮತ್ತು ಪ್ರವಾಸೋದ್ಯಮ ಸಚಿವ ಆರ್.ವಿ. ದೇಶಪಾಂಡೆ ಹೇಳಿದ್ದಾರೆ.
ಕಾಲೇಜು ಶಿಕ್ಷಣ ಇಲಾಖೆ ಮತ್ತು ನಗರದ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಉದ್ಯಮಾಡಳಿತ ಕಾಲೇಜು ಭಾನುವಾರ ಮಂಗಳೂರು ವಲಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪದವೀಧರರಿಗೆ ಹಮ್ಮಿಕೊಂಡ 'ಉದ್ಯೋಗ ಮೇಳ-2013' ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾಭ್ಯಾಸ ಲಾಭ ಮಕ್ಕಳಲ್ಲಿ ಆಗಬೇಕು, ಪಠ್ಯದ ಬಗ್ಗೆ ವಿದ್ಯಾರ್ಥಿಗಳಲ್ಲಿ, ಪಾಲಕರಲ್ಲಿ ಸಹಮತ ಮೂಡಬೇಕು. ಕೈಗಾರಿಕೆಗಳಿಗೆ ಬೇಕಾದ ಪಠ್ಯವನ್ನು ಕಲಿಸುವಂತೆ ವಿಶ್ವವಿದ್ಯಾಲಯಗಳ ಸಭೆಯಲ್ಲಿ ಈಗಾಗಲೇ ತಿಳಿಸಲಾಗಿದೆ. ವಿಶ್ವ ಮಾರುಕಟ್ಟೆ ಎದುರು ಸ್ಪರ್ಧಿಸುವ ಚಾಕಚಕ್ಯತೆ ವಿದ್ಯಾರ್ಥಿಗಳಲ್ಲಿ ಮೂಡಬೇಕು. ದೇಶದಲ್ಲಿ ಸಾಕಷ್ಟು ಉನ್ನತ ಶಿಕ್ಷಣ ಸಂಸ್ಥೆ, ಕಂಪನಿಗಳಿದ್ದು, ಉದ್ಯೋಗಕ್ಕೆ ಕೊರತೆ ಇಲ್ಲ, ಆದರೆ ನುರಿತ ಉದ್ಯೋಗಿಗಳ ಕೊರತೆ ಇದೆ. ಕಾಲೇಜುಗಳಲ್ಲಿ 'ಸಂಶೋಧನಾ ಕ್ಲಬ್‌' ಪ್ರಾರಂಭಿಸಬೇಕು. ಇದಕ್ಕೆ ಸರ್ಕಾರ ಉತ್ತೇಜನ ನೀಡಲಿದೆ ಎಂದರು.
ವಿದ್ಯಾಭ್ಯಾಸ ವೇಳೆಗೆ ಉದ್ಯೋಗ: ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಮಾತನಾಡಿ, ವಿದ್ಯಾಭ್ಯಾಸ ಮಾಡುವಾಗಲೇ ಉದ್ಯೋಗ ಸಿಗಬೇಕು. ಕಂಪನಿಗಳು ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವ ಬದಲು ವಿದ್ಯಾರ್ಥಿಗಳೇ ಕಂಪನಿಯನ್ನು ಆಯ್ಕೆ ಮಾಡುವಂತಾಗಬೇಕು. ಈ ದೃಷ್ಟಿಕೋನ ಸ್ನಾತಕೋತ್ತರ ಮಾತ್ರವಲ್ಲ, ಪದವಿ ಕಾಲೇಜುಗಳಲ್ಲೂ ಕಂಡುಬರಬೇಕು. ಮಾತೃ ಭಾಷೆ, ರಾಷ್ಟ್ರಭಾಷೆ ಜತೆ ಆಂಗ್ಲ ಭಾಷೆಯನ್ನೂ ಉದ್ಯೋಗ ದೃಷ್ಟಿಯಿಂದ ಕಲಿಯಬೇಕು. ಕಾಲೇಜು ಪಠ್ಯದಲ್ಲಿ ಉದ್ಯೋಗಕ್ಕೆ ಪೂರಕ ವಿಷಯಗಳನ್ನು ಅಳವಡಿಸಬೇಕು ಎಂದರು.
1982ರಲ್ಲಿ ಧರ್ಮಸ್ಥಳದಲ್ಲಿ ಸ್ವಉದ್ಯೋಗ ತರಬೇತಿ ಕೇಂದ್ರ ಪ್ರಾರಂಭಿಸಲಾಗಿದ್ದು, ಈಗ 26 ಕಡೆ ಶಾಖೆಗಳನ್ನು ತೆರೆಯಲಾಗಿದೆ. ಇದರಿಂದ ಲಕ್ಷಾಂತರ ಮಂದಿ ಸ್ವಉದ್ಯೋಗ ಮಾಡುತ್ತಿದ್ದಾರೆ. ರಾಷ್ಟ್ರದ ಎಲ್ಲ ಜಿಲ್ಲೆಗಳಲ್ಲಿ ಸ್ವಉದ್ಯೋಗ ತರಬೇತಿ ಕೇಂದ್ರವನ್ನು ಸ್ಥಾಪಿಸುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದ್ದು, 560 ಸ್ವಉದ್ಯೋಗ ಕೇಂದ್ರಗಳಿವೆ ಎಂದು ಡಾ. ಹೆಗ್ಗಡೆ ಹೇಳಿದರು.
ಮಂಗಳೂರು ದಕ್ಷಿಣ ಶಾಸಕ ಜೆ.ಆರ್.ಲೋಬೋ ಅಧ್ಯಕ್ಷತೆ ವಹಿಸಿದ್ದರು.
ಕಾಲೇಜು ಶಿಕ್ಷಣ ಇಲಾಖೆ ವಿಶೇಷಾಧಿಕಾರಿ ಪ್ರೊ.ಮನಿಕಾ ಘೋಷ್, ಜಂಟಿ ನಿರ್ದೇಶಕ ಪ್ರೊ.ದೇವಾನಂದ ಆರ್.ಗಾಂವ್ಕರ್, ನಿಯೋಜಿತ ಜಂಟಿ ನಿರ್ದೇಶಕ ಪ್ರೊ.ಯೋಗಾನಂದ, ಮಂಗಳೂರು ವಿವಿ ಕುಲಪತಿ ಪ್ರೊ.ಶಿವಶಂಕರಮೂರ್ತಿ, ಕುಲಸಚಿವ ಡಾ.ಪಿ.ಎಸ್. ಯಡಪಡಿತ್ತಾಯ, ಎಸ್‌ಡಿಎಂ ಉದ್ಯಮಾಡಳಿತ ಕಾಲೇಜು ಪ್ರಾಂಶುಪಾಲ ಪ್ರೊ.ಅರುಣಾ ಪಿ.ಕಾಮತ್, ಉದ್ಯೋಗ ಮೇಳ ಸಮನ್ವಯಾಧಿಕಾರಿ ತ್ರಿಶಾಂತ್ ಕುಮಾರ್ ಇದ್ದರು.
ಈ ಉದ್ಯೋಗ ಮೇಳದಲ್ಲಿ 47 ಕಂಪನಿಗಳು ಭಾಗವಹಿಸಿದ್ದು, 1500 ಮಂದಿ ಉದ್ಯೋಗಾಕಾಂಕ್ಷಿಗಳು ಆಗಮಿಸಿದ್ದರು. ಉದ್ಯೋಗ ಪಡೆದ 10 ಮಂದಿ ವಿದ್ಯಾರ್ಥಿಗಳಿಗೆ ಕಂಪನಿಯ ಆಫರ್ ಪತ್ರವನ್ನು ಸಚಿವರು ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement