ಬೇರಿಕೆ; ರಸ್ತೆಗೆ ಮರ ಬಿದ್ದು ಸಂಚಾರ ಸ್ಥಗಿತ
ಉಪ್ಪಿನಂಗಡಿ: ಇಲ್ಲಿಗೆ ಸಮೀಪದ 34ನೇ ನೆಕ್ಕಿಲಾಡಿ ಗ್ರಾಮದ ಬೇರಿಕೆ ಎಂಬಲ್ಲಿ ಬೃಹತ್ ಮರವೊಂದು ರಸ್ತೆಗೆ ಅಡ್ಡವಾಗಿ ಬಿದ್ದ ಪರಿಣಾಮ ಪುತ್ತೂರು-ಉಪ್ಪಿನಂಗಡಿ ನಡುವೆ ಸುಮಾರು ನಾಲ್ಕು ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತವಾದ ಘಟನೆ ಭಾನುವಾರ ನಡೆದಿದೆ.
ರಸ್ತೆ ಬದಿಯ ತೋಟವೊಂದರಲ್ಲಿದ್ದ ಮರ ಭಾರಿ ಗಾಳಿ, ಮಳೆಗೆ ರಸ್ತೆಗೆ ಅಡ್ಡವಾಗಿ ಬಿದ್ದಿದೆ. ವಿದ್ಯುತ್ ತಂತಿಗಳು ಕಡಿತಗೊಂಡು ವಿದ್ಯುತ್ ಪೂರೈಕೆಯೂ ಸ್ಥಗಿತಗೊಂಡಿತ್ತು. ಮರ ಬಿದ್ದ ರಭಸಕ್ಕೆ ಪುತ್ತೂರಿಗೆ ನೀರು ಸರಬರಾಜು ಮಾಡುವ ಪೈಪ್‌ಗಳೂ ಹಾನಿಗೀಡಾಗಿವೆ.
ಅರಣ್ಯ ಇಲಾಖೆ, ಸಂಚಾರಿ ಪೊಲೀಸರು ಹಾಗೂ ನೆಕ್ಕಿಲಾಡಿ ಗ್ರಾ.ಪಂ., ನಾಗರಿಕರು ಜಂಟಿ ಕಾರ್ಯಾಚರಣೆ ನಡೆಸಿ ಮರ ತೆರವುಗೊಳಿಸಿ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಿದರು.
ಅರಣ್ಯ ಇಲಾಖಾಧಿಕಾರಿ ಸುಂದರ ಶೆಟ್ಟಿ, ಸಂಚಾರ ಠಾಣಾಧಿಕಾರಿ ರಕ್ಷಿತ್, ನೆಕ್ಕಿಲಾಡಿ ಗ್ರಾಪಂ ಅಧ್ಯಕ್ಷ ಅಸ್ಕರಾಲಿ ಕಾರ್ಯಾಚರಣೆ ನೇತೃತ್ವವಹಿಸಿದ್ದರು.