ಸಾಕ್ಷಿದಾರರಿದ್ದರೆ 'ಬಿ' ವರದಿ ಅಸಾಧ್ಯ
ಮಂಗಳೂರು: ಯಾವುದೇ ಪ್ರಕರಣದಲ್ಲಿ ಸಾಕ್ಷಿದಾರರಿದ್ದರೆ 'ಬಿ' ವರದಿ ಹಾಕಲು ಸಾಧ್ಯವಿಲ್ಲ. ಈ ಕುರಿತು ನ್ಯಾಯಾಲಯದಲ್ಲಿ ಮರು ತನಿಖೆ ಮಾಡಲು ಅವಕಾಶವಿದೆ ಎಂದು ಡಿಸಿಪಿ ಧರ್ಮಯ್ಯ ಹೇಳಿದ್ದಾರೆ.
ನಗರ ಪೊಲೀಸ್ ಆಯುಕ್ತ ಮನೀಷ್ ಕರ್ಬೀಕರ್ ಅಧ್ಯಕ್ಷತೆಯಲ್ಲಿ ಆಯುಕ್ತರ ಕಚೇರಿಯಲ್ಲಿ ಭಾನುವಾರ ಪರಿಶಿಷ್ಟ ಜಾತಿ, ಪಂಗಡದ ಕುಂದುಕೊರತೆ ಸಭೆಯಲ್ಲಿ ಅವರು ಮಾತನಾಡಿದರು.
ದಲಿತ ಮುಖಂಡ ಪಿ. ಕೇಶವ ಅವರು ಪ್ರಕರಣವೊಂದಕ್ಕೆ ಸಂಬಂಧಿಸಿ 'ಬಿ' ವರದಿ ಹಾಕಿರುವ ಕುರಿತು ಪ್ರಶ್ನಿಸಿದಾಗ ಉತ್ತರಿಸಿದ ಡಿಸಿಪಿ, ತನಿಖೆ ನಡೆಸುವ ಸಂದರ್ಭ ಸಾಕ್ಷಿಗಳು ಆರೋಪಿ ವಿರುದ್ಧ ಹೇಳಿಕೆ ನೀಡಿದರೆ ಬಿ ವರದಿ ಹಾಕಲು ಸಾಧ್ಯವಿಲ್ಲ ಎಂದರು.
ದಲಿತ ಮುಖಂಡ ಎಸ್.ಪಿ. ಆನಂದ್ ಮಾತನಾಡಿ, ಮೂಲ್ಕಿ ಕೆರೆಕಾಡು ನಿವಾಸಿ ದೇಜಪ್ಪ ಎಂಬವರು ಬ್ಯಾಂಕ್ ಮೂಲಕ ಏಲಂ ಆದ ಜಾಗವನ್ನು ಸಾಲ ಮಾಡಿ ಪಡೆದಿದ್ದಾರೆ. ಆದರೆ ಕೆಲವೊಂದು ವ್ಯಕ್ತಿಗಳು ಅವರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಪಿ ಧರ್ಮಯ್ಯ ಪ್ರಕರಣದ ಕುರಿತು ಲಿಖಿತ ದೂರು ನೀಡುವಂತೆ ತಿಳಿಸಿದರು.
ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ದೂರು ಸ್ವೀಕರಿಸುಲು ನಿರ್ಲಕ್ಷ್ಯ ವಹಿಸಲಾಗುತ್ತಿದೆ ಎಂದು ಆನಂದ್ ಆರೋಪಿಸಿದರು. ಇದಕ್ಕೆ ಉತ್ತರಿಸಿದ ಮಹಿಳಾ ಠಾಣೆ ಉಪನಿರೀಕ್ಷಕಿ ಕಲಾವತಿ, ಪ್ರಕರಣಕ್ಕೆ ಸಂಬಂಧಿಸಿ ಯುವತಿ ಇನ್ನೂ ದೂರು ನೀಡಿಲ್ಲ. ಆರೋಪಿ ಕೂಡ ತಲೆಮರೆಸಿಕೊಂಡಿದ್ದಾನೆ. ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಬಹುದು ಎಂದರು.