ಪೆರ್ನೆ: ಪ್ರಯಾಣಿಕರ ತಂಗುದಾಣಕ್ಕೆ ನುಗ್ಗಿದ ಬಸ್-10 ಮಂದಿಗೆ ಗಾಯ
ಉಪ್ಪಿನಂಗಡಿ: ರಾಜ್ಯ ರಸ್ತೆ ಸಾರಿಗೆ ಬಸ್ಸೊಂದು ನಿಯಂತ್ರಣ ತಪ್ಪಿ ಇಲ್ಲಿಗೆ ಸಮೀಪದ ಪೆರ್ನೆ ಎಂಬಲ್ಲಿನ ಪ್ರಯಾಣಿಕರ ತಂಗುದಾಣಕ್ಕೆ ನುಗ್ಗಿದ ಪರಿಣಾಮ 10 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಸೋಮವಾರ ಸಾಯಂಕಾಲ ಮಂಗಳೂರಿನಿಂದ ಸುಬ್ರಹ್ಮಣ್ಯಕ್ಕೆ ಪ್ರಯಾಣಿಕ ಸೇವೆ ಒದಗಿಸುತ್ತಿದ್ದ ಈ ಬಸ್ಸು ಪೆರ್ನೆ ಪೇಟೆಯ ಪ್ರಧಾನ ಭಾಗವಾದ ರಾ.ಹೆ. 75ರಲ್ಲಿ ನಿರ್ಮಿಸಲಾದ ಪ್ರಯಾಣಿಕರ ತಂಗುದಾಣಕ್ಕೆ ಚಾಲಕನ ನಿಯಂತ್ರಣ ತಪ್ಪಿ ನುಗ್ಗಿತ್ತು. ಶಾಲೆ ಬಿಟ್ಟ ಸಮಯವಾದದ್ದರಿಂದ ತಂಗುದಾಣದಲ್ಲಿ ವಿದ್ಯಾರ್ಥಿಗಳೂ ಸೇರಿದಂತೆ ಹಲವು ನಾಗರಿಕರಿದ್ದುದು ಹೆಚ್ಚಿನ ಪ್ರಮಾಣದಲ್ಲಿ ನೋವು ಸಂಭವಿಸಲು ಕಾರಣವಾಯಿತು. ಪೇರಮೊಗೆರು ನಿವಾಸಿ ನಿಶ್ಮಿತಾ (16), ಗಡಿಯಾರ ನಿವಾಸಿ ಆಶಿಕಾ(9), ಬಿಳಿಯೂರು ನಿವಾಸಿ ಶೋಯೆಬ್(16), ಬಿಳಿಯೂರು ನಿವಾಸಿ ಸಂಕು(48), ಬಿಳಿಯೂರು ನಿವಾಸಿ ವಿನುತಾ (16), ಕೆದಿಲ ನಿವಾಸಿ ಹೇಮಂತ್(15), ಕೆದಿಲ ನಿವಾಸಿ ಮೀನಾಕ್ಷಿ(30), ಪೆರ್ನೆ ನಿವಾಸಿ ಮಹಮ್ಮದ್ ಇರ್ಷಾದ್ (14) ಎಂಬವರು ಗಂಭೀರವಾಗಿ ಗಾಯಗೊಂಡು ಪುತ್ತೂರಿನ ವಿವಿಧ ಆಸ್ಪತ್ರೆಗೆ ದಾಖಲುಗೊಂಡಿದ್ದಾರೆ.
ಮಹಮ್ಮದ್ (38) ಮತ್ತು ಮಹಮ್ಮದ್ ನೌಫಾಲ್ (15) ಎಂಬವರಿಗೆ ಗಂಭೀರ ಗಾಯಗಳಾಗಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ಸಿನಡಿ ಸಿಲುಕಿದ್ದ ಹತ್ತು ಮಂದಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸುವಲ್ಲಿ ನೆರವಾದರು.