ಸಂಚಾರಿ ಎಸ್ಐ ಮೇಲೆ ಹಲ್ಲೆಗೈದ ಲಾರಿ ಚಾಲಕ
ಮಂಗಳೂರು: ಹಂಪನಕಟ್ಟೆ ಮುಖ್ಯರಸ್ತೆ ಯು.ಪಿ.ಮಲ್ಯ ರಸ್ತೆಯಲ್ಲಿ ಸಂಚಾರ ನಿಯಂತ್ರಿಸುತ್ತಿದ್ದ ಎಸ್ಐ ಮೇಲೆ ಲಾರಿ ಚಾಲಕ ಹಲ್ಲೆ ನಡೆಸಿದ್ದಾರೆ. ಲಾರಿ ಚಾಲಕ ಮೇರ್ಲಪದವು ನಿವಾಸಿ ಕಿರಣ್ ಎಂಬಾತನನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ.
ಯುಪಿಮಲ್ಯ ರಸ್ತೆಯಲ್ಲಿ ಬೆಳಗ್ಗೆ 9.30ಕ್ಕೆ ಸಂಚಾರಿ ಪೂರ್ವ ಠಾಣೆ ಎಸ್ಐ ಮಲ್ಲಪ್ಪ ರೆಡ್ಡಿ ವಾಹನ ತಪಾಸಣೆ ಮಾಡುತ್ತಿರುವಾಗ ಕಿರಣ್ ಚಲಾಯಿಸುತ್ತಿದ್ದ ಲಾರಿಯನ್ನು ನಿಲ್ಲಿಸಲು ಹೇಳಿದರು. ಬಳಿಕ ಹಂಪನಕಟ್ಟ ಮುಖ್ಯ ರಸ್ತೆಯಲ್ಲಿ ಘನವಾಹನ ಚಲಾಯಿಸುವಂತಿಲ್ಲ ಎಂದು ಹೇಳಿ ದಾಖಲೆ ನೀಡುವಂತೆ ಸೂಚಿಸಿದರು. ಸಿಡಿಮುಡಿಗೊಂಡ ಚಾಲಕ ಕಿರಣ್ 'ನಾನು ಈಗಾಗಲೇ ಜೈಲ್ ಇದ್ದು ಬಂದವ. ನನ್ನ ಮೇಲೆ ಕೇಸ್ ಹಾಕಿ ಏನು ಮಾಡುತ್ತಿರೋ ಮಾಡಿ ಎಂದು ಎಸ್ಐ ಕೈ ಹಿಡಿದು ಲಾರಿಯತ್ತ ದೂಡಿದ್ದಾನೆ.
ಗಾಯಗೊಂಡ ಎಸ್ಐ ಮಲ್ಲಪ್ಪ ರೆಡ್ಡಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಆರೋಪಿಯನ್ನು ಪಾಂಡೇಶ್ವರ ಪೊಲೀಸರು ಬಂಧಿಸಿ ಕೋರ್ಟ್ಗೆ ಹಾಜರುಪಡಿಸಿದ್ದಾರೆ.