ಇನ್ಸ್ಪೈರ್ ಅವಾರ್ಡ್ ಸ್ಪರ್ಧೆ: ಪದವಿಶ್ರೀ ರಾಜ್ಯ ಮಟ್ಟಕ್ಕೆ
ಬಂಟ್ವಾಳ: ನವದೆಹಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಹಾಗೂ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ವತಿಯಿಂದ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಇನ್ಸ್ಪೈರ್ ಅವಾರ್ಡ್ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿದ ಮೊಡಂಕಾಪು ಕಾರ್ಮೆಲ್ ಕಾನ್ವೆಂಟ್ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿ ಪದವಿಶ್ರೀ ತಯಾರಿಸಿದ 'ಸಿಟ್ರಸ್ ಹಣ್ಣುಗಳ ಸಿಪ್ಪೆಯಿಂದ ಕೀಟನಾಶಕ' ಎಂಬ ಮಾದರಿ ರಾಜ್ಯ ಮಟ್ಟಕ್ಕೆ ಆಯ್ಕೆಗೊಂಡಿದೆ.
ಇರುವೆ, ಗೆದ್ದಲು ನಿಯಂತ್ರಿಸುವ ಈ ಕೀಟನಾಶಕ ಸೊಳ್ಳೆ ನಿವಾರಕವಾಗಿಯೂ ಕೆಲಸ ಮಾಡುತ್ತದೆ. ಇದು ಪರಿಸರ ಸ್ನೇಹಿ ಹಾಗೂ ಮಾಲಿನ್ಯ ಮುಕ್ತವಾಗಿದೆ. ಈ ಶಾಲೆ ಸತತ 14ನೇ ಬಾರಿ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಗೊಂಡಿದೆ. ಮುಖ್ಯ ಶಿಕ್ಷಕಿ ಉಜ್ವಲ ಎ.ಸಿ., ವಿಜ್ಞಾನ ಶಿಕ್ಷಕ ರೋಶನ್ ಪಿಂಟೊ ಸಹಕರಿಸಿದ್ದರು.