ತಾಂತ್ರಿಕ ದೋಷದಿಂದ ವೋಲ್ವೋ ಓಡಾಟ ವ್ಯತ್ಯಾಸ: ಸ್ಪಷ್ಟನೆ
ಮಂಗಳೂರು: ಕೆಎಸ್ಆರ್ಟಿಸಿ ವತಿಯಿಂದ ನಗರ ಸಾರಿಗೆ ವೋಲ್ವೋ ವಾಹನವನ್ನು ಮಂಗಳೂರು-ಮಣಿಪಾಲ-ಮಂಗಳೂರು ಮಾರ್ಗದಲ್ಲಿ ಪ್ರತಿ ದಿನ 25 ಟ್ರಿಪ್ ಓಡಿಸಲಾಗುತ್ತಿದೆ. ಕಳೆದ ವಾರದಲ್ಲಿ ತಾಂತ್ರಿಕ ದೋಷದಿಂದ 2 ದಿನದಲ್ಲಿ ಮಾತ್ರ ಬಸ್ ಓಡಾಟದಲ್ಲಿ ವ್ಯತ್ಯಾಸ ಉಂಟಾಗಿದೆ ಎಂದು ಕೆಎಸ್ಆರ್ಟಿಸಿ ಸ್ಪಷ್ಟಪಡಿಸಿದೆ. ತಾಂತ್ರಿಕ ತೊಂದರೆಗೀಡಾದ ವಾಹನವನ್ನು ಸರಿಪಡಿಸಿ ಹಾಲಿ ಮಾರ್ಗದಲ್ಲಿ ವ್ಯವಸ್ಥಿತ ಕಾರ್ಯಾಚರಣೆಗೆ ಕ್ರಮಕೈಗೊಳ್ಳಲಾಗಿದೆ. ಅಲ್ಲದೆ ವೋಲ್ವೋಗಲಲ್ಲಿ ಮಾಸಿಕ ಡೀಸೆಲ್ ದರ ಹೆಚ್ಚಳದಿಂದ ಪ್ರತಿ ಕಿ.ಮೀ.ಗೆ ರು. 10ರಂತೆ ನಷ್ಟ ಉಂಟಾಗುತ್ತಿದೆ. ಆದರೂ ಸಾರ್ವಜನಿಕ ಹಿತದೃಷ್ಟಿಯಿಂದ ಕಾರ್ಯಾಚರಿಸುತ್ತಿದ್ದು, ಈ ಮಾರ್ಗದಲ್ಲಿ ಇನ್ನೂ ಹೆಚ್ಚಿನ ಬಸ್ ಏಡಾಟಕ್ಕೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಲಾಗಿದೆ. ಪರವಾನಗಿ ಸಿಕ್ಕಿದ ಕೂಡಲೇ ಬಸ್ ಏಡಾಟಕ್ಕೆ ಸಂಸ್ಥೆ ಸಿದ್ಧವಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಎಂಬಿಎ ಪರೀಕ್ಷೆ ಫಲಿತಾಂಶ ಪ್ರಕಟ
ಮಂಗಳೂರು: ಕೆಂಜಾರಿನ ಶ್ರೀದೇವಿ ತಾಂತ್ರಿಕ ವಿದ್ಯಾಲಯದ ಎಂಬಿಎ ಪದವಿ ಫಲಿತಾಂಶ ಪ್ರಕಟವಾಗಿದೆ. 77 ಮಂದಿಯಲ್ಲಿ 76 ಮಂದಿ ಪಾಸಾಗಿದ್ದಾರೆ. 23 ಮಂದಿ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 52 ಮಂದಿ ಪ್ರಥಮದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.