ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ನರೇಗದಲ್ಲಿ ಮುಜಫರ್‌ಪುರ್ ಬದಲು ದ.ಕ. ಮಾದರಿ

Lingaraj Badiger
Updated On : 31 Jul 2013, 11:18 am

ಮಂಗಳೂರು: ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ (ನರೇಗ) ರಸ್ತೆಬದಿ ಸಾಲು ಮರ ನೆಡುವಲ್ಲಿ ದೇಶಕ್ಕೆ ಬಿಹಾರದ ಮುಜಾಫರ್‌ಪುರ್ ಮಾದರಿಯಾಗಿದೆ. ಇದೀಗ, ದ.ಕ. ಜಿಲ್ಲೆಯಲ್ಲಿ ಮರ್ಕಂಜ ಗ್ರಾಮ ಪಂಚಾಯ್ತಿ, ಸುರಿಬೈಲು ಸರ್ಕಾರಿ ಶಾಲೆ ಹಾಗೂ ಬೀರಿಗ ಅಂಗನವಾಡಿ ಮಾದರಿ ಪರಿಚಯಿಸುವ ಮೂಲಕ ರಾಷ್ಟ್ರಮಟ್ಟದಲ್ಲಿ ದಕ್ಷಿಣ ಕನ್ನಡವನ್ನೇ ಮಾದರಿಯಾಗಿ ಬಿಂಬಿಸುವ ಪ್ರಯತ್ನಕ್ಕೆ ಚಾಲನೆ ಸಿಕ್ಕಿದೆ.
ರಸ್ತೆಬದಿ ಸಾಲು ಮರ ನೆಡುವುದು, ಶಾಲಾ ಆವರಣದಲ್ಲಿ ಸಮೃದ್ಧ ತೋಟ ಮತ್ತು ಅಂಗನವಾಡಿಗಳಲ್ಲಿ ಹಣ್ಣುಗಳನ್ನು ಬೆಳೆಸುವುದೇ ಈ ಯೋಜನೆಯ ತಿರುಳು. ದ.ಕ. ಜಿಲ್ಲಾ ಪಂಚಾಯ್ತಿ ಮತ್ತು ನರೇಗ ಒಂಬುಡ್ಸ್‌ಮನ್ ಜತೆಯಾಗಿ ಈ ಕಾರ್ಯ ಕೈಗೊಂಡಿದ್ದು, ಈಗಾಗಲೇ ಸಾಲ್ಮರ, ಮೇರಮಜಲು, ಅಗಲ್ಪಾದೆ, ಅಮ್ಟಾಡಿ ಗ್ರಾಮಗಳಲ್ಲಿ ಸಾಲು ಮರ ನಡೆವುದಕ್ಕೆ ಜು.1ರಂದು ಚಾಲನೆ ನೀಡಲಾಗಿದೆ.
ಜಿಲ್ಲೆಯ ಮಾದರಿ: ಕೇಂದ್ರ ಸರ್ಕಾರ ನರೇಗ ಯೋಜನೆಯಲ್ಲಿ ಮುಜಾಫರ್‌ಪುರ್ ಮಾದರಿಯಲ್ಲಿ ಸಾಲು ಮರ, ಶಾಲಾ ತೋಟ ಮತ್ತು ಹಣ್ಣುಗಳನ್ನು ಬೆಳೆಸುವಂತೆ ಮಾರ್ಗದರ್ಶನ ನೀಡಿತ್ತು.
ಈ ಮಾದರಿಯಲ್ಲಿ ಅಂಗವಿಕಲ ಮಕ್ಕಳು ಮತ್ತು ಮಹಿಳೆಯರ ಕುಟುಂಬ ನಿರಂತರ 3-5 ವರ್ಷ ಗಿಡ ನೆಟ್ಟು ಪೋಷಿಸುವ ಜವಾಬ್ದಾರಿ ವಹಿಸಿಕೊಳ್ಳುವುದು. ಇದು ಶೇ.100ರಷ್ಟು ಫಲಕಾರಿಯಾಗಿ ಅನುಷ್ಠಾನವಾಗಿದೆ. ಈ ಮಾದರಿ ಇಲ್ಲವೇ ಸ್ಥಳೀಯ ಮಾದರಿಯನ್ನು ಅನುಸರಿಸಬಹುದು ಎಂಬುದನ್ನೂ ತಿಳಿಸಿತ್ತು.
ಈ ಹಿನ್ನಲೆಯಲ್ಲಿ ದ.ಕ.ಜಿಲ್ಲೆಯಲ್ಲಿ ಜಿಲ್ಲೆಯದೇ ಮಾದರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಇದನ್ನೇ ದೇಶಕ್ಕೆ ಮಾದರಿಯಾಗಿ ತೋರ್ಪಡಿಸಲು ಜಿಲ್ಲಾ ಪಂಚಾಯ್ತಿ ಮತ್ತು ಒಂಬುಡ್ಸ್‌ಮನ್ ಸಂಕಲ್ಪಿಸಿದೆ.  
ಕಳೆದ ವರ್ಷ ಸುಳ್ಯದ ಮರ್ಕಂಜದಲ್ಲಿ 250 ಕುಟುಂಬಗಳು ಸೇರಿ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಕೆಲಸ ನಿರ್ವಹಿಸಿದ್ದವು. 25 ಕಿ.ಮೀ. ರಸ್ತೆ ಬದಿಯಲ್ಲಿ 1 ಸಾವಿರ ಸಾಲು ಮರಗಳನ್ನು ನೆಟ್ಟಿದ್ದರು. ಕಡೇಶ್ವಾಲ್ಯ 100 ಕುಟುಂಬ ಪಂಚಾಯ್ತಿ ಮತ್ತು ಶಾಲಾ ವಠಾರ, ರಸ್ತೆಬದಿ, ಮನೆ ಮನೆಗಳಲ್ಲಿ ಸಸಿ ನೆಟ್ಟಿತ್ತು. ನಿಡ್ಲೆಯಲ್ಲಿ ಒಂದೇ ದಿನದಲ್ಲಿ 300 ಮಂದಿ ಮನೆಗಳಿಗೆ ತೆರಳಿ ಸಸಿ ನಡೆಲು ಪ್ರೇರೇಪಣೆ ನೀಡಿದ್ದರು.
ಬಂಟ್ವಾಳ ಸುರಿಬೈಲು ಶಾಲೆಯಲ್ಲಿ 3 ವರ್ಷ ಹಿಂದೆ ತೆಂಗು, ಕಂಗು, ಬಾಳೆ, ತರಕಾರಿ ಸಹಿತ ಎಲ್ಲ ವಿಧದ ತೋಟಗಾರಿಕಾ ಬೆಳೆಗಳನ್ನು ಬೆಳೆಸಿ ಜಿಲ್ಲೆಯಲ್ಲೇ ಮಾದರಿ ಶಾಲೆ ಎನಿಸಿತ್ತು. ಪುತ್ತೂರಿನ ಬೀರಿಗ ಅಂಗನವಾಡಿಯಲ್ಲಿ ತಡೆಗೋಡೆ, ಹಣ್ಣಿನ ಗಿಡ ಬೆಳೆಸಿ ಮಾದರಿಯಾಗಿತ್ತು. ಬನ್ನೂರಿನ ಅಂಗನವಾಡಿಯಲ್ಲೂ ಇದೇ ಪ್ರಯೋಗ ಮಾಡಲಾಗಿದೆ.
ಈ ಸಾಲಿನಲ್ಲಿ ದ.ಕ. ಜಿಲ್ಲೆಯಲ್ಲಿ ನರೇಗ ಕಾರ್ಯಕ್ರಮಕ್ಕೆ ಸಾಮಾಜಿಕ ಅರಣ್ಯ, ತೋಟಗಾರಿಕೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆಗಳು ಸಾಥ್ ನೀಡಿವೆ. ಎಲ್ಲ ಗ್ರಾಮ ಪಂಚಾಯ್ತಿಗಳಿಗೆ ರಸ್ತೆಬದಿ ಸಾಲು ಮರ ನೆಡುವಂತೆ ಜಿಲ್ಲಾ ಪಂಚಾಯ್ತಿಯಿಂದ ಸುತ್ತೋಲೆ ಕಳುಹಿಸಲಾಗಿದೆ. ಅಲ್ಲದೆ ಜಿಲ್ಲೆಯ 1093 ಸರ್ಕಾರಿ ಶಾಲೆ, 2107 ಅಂಗನವಾಡಿಗಳಲ್ಲಿ ಶಾಲಾ ತೋಟ ಮತ್ತು ಹಣ್ಣುಗಳ ತೋಟ ರೂಪುಗೊಳ್ಳಲಿದೆ.
-ಆತ್ಮಭೂಷಣ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement