ಪೊಲೀಸ್ ವಶದಲ್ಲಿ ವಿಗ್ರಹ ಚೋರ
ಮಂಗಳೂರು: ಜೈನ ಬಸದಿಯ ಪುರಾತನ ವಿಗ್ರಹಗನ್ನು ಕದ್ದಿರುವ ಸಂತೋಷ್ದಾಸ್ 11 ದಿನಗಳ ಕಾಲ ಪೊಲೀಸ್ ವಶಕ್ಕೆ ಲಭಿಸಿದ್ದು, ಪೊಲೀಸರು ಆತ ಈ ಹಿಂದೆ ಮಾಡಿದ ಎಲ್ಲ ಕಳವು ಪ್ರಕರಣ ಭೇದಿಸಲು ಸಿದ್ಧತೆ ನಡೆಸಿದ್ದಾರೆ.
ಉಡುಪಿ, ಕಾರ್ಕಳ ಜುವೆಲ್ಲರಿ ಕಳವು ಪ್ರಕರಣ ಮತ್ತು ಕೊಡ್ಯಡ್ಕ ಅನ್ನಪೂರ್ಣೇಶ್ವರಿ ದೇವಸ್ಥಾನದಿಂದ ಬೆಳ್ಳಿ ಕದ್ದಿರುವುದಾಗಿ ಈಗಾಗಲೇ ಬಾಯಿ ಬಿಟ್ಟಿದ್ದಾನೆ. ಇನ್ನಷ್ಟು ಕಳವು ಪ್ರಕರಣಗಳು ಬೆಳಕಿಗೆ ಬರುವ ಸಾಧ್ಯತೆ ಇದೆ.
ಕಳವಿಗೆ ಸ್ಕೆಚ್ ಹಾಕಲು ಬಂದಿದ್ದ ವೇಳೆ ಆತ ಮೂಡುಬಿದರೆ ನವಮಿ ಲಾಡ್ಜ್ನಲ್ಲಿ ತಂಗಿದ್ದ. ಆಗ ಆತ ತನ್ನ ಸರಿಯಾದ ವಿಳಾಸ ನೀಡಿದ್ದ. ಅಲ್ಲದೆ ಸಿದ್ಧಾಂತ ಮಂದಿರಕ್ಕೆ ನುಗ್ಗುವಾಗ ಆತ ಮುಖ ಮುಚ್ಚಿಕೊಂಡಿದ್ದರೂ ಒಮ್ಮೆ ಉಸಿರಾಟ ಕಷ್ಟವಾಗಿ ಮೂಗಿನ ವಸ್ತ್ರ ಸರಿಸಿದ್ದು ಕಂಡು ಬಂದಿತ್ತು. ಇದು ಪೊಲೀಸರಿಗೆ ಮುಖದ ಸ್ಕೆಚ್ ಮಾಡಲು ಸಹಕಾರಿಯಾಗಿತ್ತು. ಜತೆಗೆ ಅಕ್ಕಪಕ್ಕದ ಹೊಟೇಲ್, ಲಾಡ್ಜ್ ಮತ್ತು ರಿಕ್ಷಾದವರಿಂದಲೂ ಮಾಹಿತಿ ಪಡೆದಿದ್ದರು. ಇದರಿಂದ ಪೊಲೀಸರಿಗೆ ನೇರವಾಗಿ ಕಳ್ಳನ ಮಾವನ ಮನೆ ಭುವನೇಶ್ವರಕ್ಕೆ ಹೋಗಲು ಸಾಧ್ಯವಾಗಿತ್ತು.
ಆತ ಕದ್ದ ಬಳಿಕ ಬೆಳಗ್ಗೆ 4 ಗಂಟೆಗೆ ಮೂಡುಬಿದರೆಯಿಂದ ರಿಕ್ಷಾದಲ್ಲಿಯೇ ವೇಣೂರಿಗೆ ಹೋಗಿದ್ದ. ಅಲ್ಲಿಂದ ಮತ್ತೊಂದು ರಿಕ್ಷಾ ಪಡೆದು ಧರ್ಮಸ್ಥಳಕ್ಕೆ ಹೋಗಿ, ಅಲ್ಲಿಂದ ಬೆಂಗಳೂರು ತಲುಪಿದ್ದ. ಬೆಂಗಳೂರಿಂದ ನೇರವಾಗಿ ಭುವನೇಶ್ವರಕ್ಕೆ ತೆರಳಿದ್ದ. ತನ್ನ ಮಾವ ದಿಗಂಬರ ಮೊಹಾಂತಿ ಮನೆಯಲ್ಲಿ ವಿಗ್ರಹಗಳನ್ನು ಇರಿಸಿದ್ದ.