ಸೌಜನ್ಯ ಅತ್ಯಾಚಾರ, ಕೊಲೆ: ಸಿಐಡಿ ಅಧಿಕಾರಿಗಳಿಂದ ಮರುಪರಿಶೀಲನೆ- ಜಾರ್ಜ್
ವಿಧಾನಸಭೆ: ಉಜಿರೆ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿನಿ ಸೌಜನ್ಯಳ ಅತ್ಯಾಚಾರ- ಕೊಲೆ ಪ್ರಕರಣದ ಬಗ್ಗೆ ಸಿಐಡಿಯ ಹಿರಿಯ ಅಧಿಕಾರಿಗಳಿಂದ ಮರುಪರಿಶೀಲನೆ ತನಿಖೆ ನಡೆಸಲಾಗುತ್ತದೆ ಎಂದು ಗೃಹ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.
ಬೆಳ್ತಂಗಡಿ ವಾಸಿಯಾದ ಸೌಜನ್ಯಳ ಅತ್ಯಾಚಾರ- ಕೊಲೆ ಪ್ರಕರಣವನ್ನು ಹಿರಿಯ ಅಧಿಕಾರಿಗಳಿಂದ ತನಿಖೆ ನಡೆಸಲು ಸಿಐಡಿಯ ಡಿಐಜಿ ಅವರಿಗೆ ಸೂಚಿಸಲಾಗುತ್ತದೆ. ಅಲ್ಲದೆ, ಬೆಳ್ತಂಗಡಿಯ ಇನ್ಸ್‌ಪೆಕ್ಟರ್ ಯೋಗೀಶ್‌ಕುಮಾರ್ ವಿರುದ್ಧವೂ ತನಿಖೆ ನಡೆಸಿ ಅವರು ತಪ್ಪು ಮಾಡಿದ್ದರೆ ಅಮಾನತು ಮಾಡಲಾಗುತ್ತದೆ ಎಂದು ವಿಧಾನಸಭೆಗೆ ಭರವಸೆ ನೀಡಿದರು.
ವಸಂತ ಬಂಗೇರ ಅವರು ಅತ್ಯಾಚಾರ- ಕೊಲೆ ಪ್ರಕರಣವನ್ನು ಗಮನಸೆಳೆಯುವ ಸೂಚನೆಯಲ್ಲಿ ಪ್ರಸ್ತಾಪಿಸಿದರು. ಸೌಜನ್ಯಳ ಕೊಲೆ ಪ್ರಕರಣದಲ್ಲಿ ಇನ್ಸ್‌ಪೆಕ್ಟರ್ ಯೋಗೀಶ್ ಕುಮಾರ್ ಸಾಕಷ್ಟು ತಪ್ಪು ಮಾಹಿತಿಗಳನ್ನು ಲಗತ್ತಿಸಿ, ಪ್ರಕರಣದ ದಾರಿ ತಪ್ಪಿಸಿದ್ದಾರೆ. ಕೊಲೆ ನಡೆದ ಹಿಂದಿನ ದಿನ ಆ ಪ್ರದೇಶದಲ್ಲಿ ಸಾಕಷ್ಟು ಮಳೆ ಬಂದಿತ್ತು. ಆದರೆ, ಸೌಜನ್ಯಳ ಮೈಮೇಲಿದ್ದ ಬಟ್ಟೆ ಹಾಗೂ ಪುಸ್ತಕ ಒಂದು ಚೂರೂ ಒದ್ದೆ ಆಗಿರಲಿಲ್ಲ. ಅಲ್ಲಿನ ಪೊದೆಯ ಒಂದು ಗರಿಯೂ ಅಲ್ಲಾಡಿಲ್ಲ. ಮೊಕದ್ದಮೆಯಲ್ಲಿ ಮಾತ್ರ ಇದೆಲ್ಲವನ್ನೂ ದಾಖಲಿಸಲಾಗಿದೆ. ಯೋಗೀಶ್‌ಕುಮಾರ್ ಹೊರತುಪಡಿಸಿ ತನಿಖೆಗೆ ದಕ್ಷ ಅಧಿಕಾರಿಯನ್ನು ನೇಮಿಸಿ ಎಂದು ಆಗ್ರಹಿಸಿದರು.
ಸೌಜನ್ಯ ಹೆಸರಿಗೆ ತಕ್ಕಂತೆಯೇ ಇದ್ದ ಹುಡುಗಿ. ವಸಂತ ಬಂಗೇರಾ ಅವರು ಹೇಳಿದಂತೆ ಆಕೆಯ ಶವ ದೊರೆತಿದೆ. ಎಲ್ಲೋ ಕೊಲೆ ಮಾಡಿ ಇಲ್ಲಿ ತಂದು ಹಾಕಲಾಗಿದೆ. ಇದರ ತನಿಖೆ ದಕ್ಷ ಅಧಿಕಾರಿಯಿಂದಲೇ ಆಗಬೇಕು ಎಂದು ಶಕುಂತಳಾ ಶೆಟ್ಟಿ ಒತ್ತಾಯಿಸಿದರು.
ಈ ಪ್ರಕರಣದ ಬಗ್ಗೆ ಮರುತನಿಖೆ ನಡೆಸಲಾಗುತ್ತದೆ. ಇದಕ್ಕಾಗಿ ಸಿಐಡಿಯ ಹಿರಿಯ ಅಧಿಕಾರಿಗಳನ್ನೇ ನೇಮಿಸಲಾಗುತ್ತದೆ. ಇನ್ಸ್‌ಪೆಕ್ಟರ್ ಯೋಗೀಶ್‌ಕುಮಾರ್ ಮೇಲೂ ತನಿಖೆ ನಡೆಸಲಾಗುತ್ತದೆ. ತಪ್ಪಾಗಿದ್ದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಗೃಹ ಸಚಿವ ಕೆ.ಜೆ. ಜಾರ್ಜ್ ಹೇಳಿದರು.