ಕಾಲೇಜು ಚುನಾವಣೆ ನಿಷೇಧ; ಎಬಿವಿಪಿ ಪ್ರತಿಭಟನೆ
ಸುಳ್ಯ: ರಾಜ್ಯದ ವಿವಿಧ ವಿ.ವಿ. ಹಾಗೂ ಕಾಲೇಜುಗಳಲ್ಲಿ ಕಾಲೇಜು ವಿದ್ಯಾರ್ಥಿ ಸಂಘದ ಚುನಾವಣೆ ನಡೆದಿದ್ದು ಇದನ್ನು ರದ್ದುಗೊಳಿಸಲು ರಾಜ್ಯ ಸರ್ಕಾರ ಆದೇಶಿಸಿರುವುದನ್ನು ಖಂಡಿಸಿ ಎಬಿವಿಪಿ ನೇತೃತ್ವದಲ್ಲಿ ಸುಳ್ಯ ತಾಲೂಕು ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ ದುರ್ಗೇಶ್ ಪಾರೆಪ್ಪಾಡಿ ಹಾಗೂ ಎಬಿವಿಪಿ ಜಿಲ್ಲಾ ಸಂಚಾಲಕ ಹರಿಪ್ರಸಾದ್, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆಯು ಮಹತ್ತರ ಪಾತ್ರವನ್ನು ವಹಿಸುತ್ತಿದ್ದು ಇದನ್ನು ರದ್ದುಗೊಳಿಸಲು ಸರ್ಕಾರ ಆದೇಶಿಸಿರುವುದು ಖಂಡನೀಯ ಎಂದರು.
ಎಬಿವಿಪಿ ತಾಲೂಕು ಸಂಚಾಲಕ ತನುದೀಪ್ ಪೆಲ್ತಡ್ಕ, ನಗರ ಕಾರ್ಯದರ್ಶಿ ವೆಂಕಟೇಶ ಕೆ., ಅಕ್ಷತ್ ದೊಡ್ಡಮನೆ, ನಿರಂಜನ್, ಪ್ರಜ್ವಲ್, ರಂಜನ್ ಇದ್ದರು.
ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಬೆಳ್ಳಾರೆಯಲ್ಲೂ ಪ್ರತಿಭಟನೆ ನಡೆಯಿತು.