ಕಾಲೇಜು ಚುನಾವಣೆ ನಿಷೇಧ: ಪ್ರತಿಭಟನೆ
ಪುತ್ತೂರು: ಕಾಲೇಜು ಚುನಾವಣೆ ನಿಷೇಧ ಕ್ರಮ ವಿರೋಧಿಸಿ ಬುಧವಾರ ಪುತ್ತೂರಿನ ವಿವೇಕಾನಂದ ಕಾಲೇಜು ಬಳಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವತಿಯಿಂದ ಪ್ರತಿಭಟನೆ ನಡೆಯಿತು. ಎಬಿವಿಪಿ ತಾಲೂಕು ಸಂಚಾಲಕ ಶರತ್ ಕುಮಾರ್ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆ ಮಹತ್ತರ ಪಾತ್ರ ವಹಿಸುತ್ತಿದ್ದು, ಅವರಲ್ಲಿ ನಾಯಕತ್ವದ ಗುಣ ಬೆಳೆಯಲು ಸಹಕಾರಿಯಾಗಿದೆ. ಆದರೆ ಇದೀಗ ಸರ್ಕಾರವು ಚುನಾವಣೆ ರದ್ದುಪಡಿಸುವ ಮೂಲಕ ವಿದ್ಯಾರ್ಥಿಗಳಿಗೆ ಅನ್ಯಾಯ ಎಸಗಿದೆ ಎಂದು ಆರೋಪಿಸಿದರು. ಎಬಿವಿಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ತಿಲಕ್ ಪಿ. ಮಾಣಿ, ನಗರ ಕಾರ್ಯದರ್ಶಿ ವಿರೂಪಾಕ್ಷ ಭಟ್, ವಿದ್ಯಾರ್ಥಿನಿ ಪ್ರಮುಖ್ ಅನುಷಾ ಹೆಗ್ಡೆ, ವಿದ್ಯಾರ್ಥಿ ಪ್ರಮುಖ್ ದೀಕ್ಷಿತ್ ಮತ್ತಿತರರು ಇದ್ದರು. ಬಳಿಕ ಪ್ರತಿಭಟನಾಕಾರರು ಪುತ್ತೂರು ಉಪವಿಭಾಗಾಧಿಕಾರಿ ಮೂಲಕ ಉನ್ನತ ಶಿಕ್ಷಣ ಸಚಿವಗೆ ಮನವಿ ಸಲ್ಲಿಸಿದರು.
7ರಂದು ತುಳುನಾಡು ಹೋರಾಟ ಸಮಿತಿ ಸಭೆ
ಮಂಗಳೂರು: ತುಳುನಾಡು ಹೋರಾಟ ಸಮಿತಿಯ ವತಿಯಿಂದ ಆ. 7 ರಂದು ಕದ್ರಿ ಶ್ರೀ ಕೃಷ್ಣ ಕಲ್ಯಾಣ ಮಂಟಪದಲ್ಲಿ ತುಳುನಾಡು ಪ್ರಾಂತ್ಯ ರಚನೆ ಕುರಿತಾದ ಸಭೆ ನಡೆಯಲಿದೆ.
1956ರಲ್ಲಿ ಭಾಷಾವಾರು ಪ್ರಾಂತ್ಯದಂತೆ ರಾಜ್ಯ ರಚನೆಯಾದಾಗ ಪಂಚದ್ರಾವಿಡ ಭಾಷೆಯಲ್ಲಿ ಒಂದಾದ ತುಳು ಭಾಷೆಗೆ ರಾಜ್ಯ ನೀಡುವಂತೆ ಜಿಲ್ಲೆಯ ರಾಜಕಾರಣಿಗಳು ಕೇಂದ್ರಕ್ಕೆ ಒತ್ತಡ ತರಲಿಲ್ಲ. ಈಗ ಆಂಧ್ರಪ್ರದೇಶದಲ್ಲಿ ತೆಲುಗು ದೇಶವನ್ನು ಒಡೆದು ತೆಲಂಗಾಣ ರಾಜ್ಯ ರಚನೆಗೆ ಕೇಂದ್ರ ಸರ್ಕಾರ ಹಸಿರು ನಿಶಾನೆ ಕೊಟ್ಟಿದೆ. ಹಾಗೆಯೇ ತುಳುನಾಡು ಪ್ರಾಂತ್ಯ ರಚನೆಗೆ ಎಲ್ಲ ಸಂಘ ಸಂಸ್ಥೆಗಳು ಭಾಗವಹಿಸಿ ಸಲಹೆ ಸೂಚನೆ ನೀಡಬಹುದು ಎಂದು ಸಮಿತಿಯ ಅಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದ್ದಾರೆ. ಆದ್ದರಿಂದ ಕೋಟಿ ತುಳುವರು ಮತ್ತು ಇಲ್ಲಿನ ಸಂಘ ಸಂಸ್ಥೆಗಳು ಒಂದಾಗಿ ಹೋರಾಟಕ್ಕೆ ಮುಂದಾಗಬೇಕಾಗಿದೆ. ನಾಗಾರ್ಜುನ, ಎಂಆರ್‌ಪಿಎಲ್, ಕುದುರೆಮುಖ, ಬಿಎಎಸ್‌ಎಫ್ ಕೈಗಾರಿಕೆಗಳು ಪರಿಸರ ಹಾನಿ ಉಂಟು ಮಾಡಿ ತುಳುನಾಡನ್ನು ನಾಶಪಡಿಸುತ್ತಿದೆ. ಆದ್ದರಿಂದ ಇದು ಹೋರಾಟಕ್ಕೆ ಸಕಾಲವಾಗಿದೆ ಎಂದರು ಪ್ರಕಟಣೆಯಲ್ಲಿ ಹೇಳಿದ್ದಾರೆ.