ಕುದ್ದುಪದವು-ಪೆರುವಾಯಿ ರಸ್ತೆ ದುರವಸ್ಥೆ
ವಿಟ್ಲ: ವಿಟ್ಲ ಸಮೀಪದ ಕುದ್ದುಪದವು - ಪೆರುವಾಯಿ ಮೂಲಕ ಬಾಳಶೆಟ್ಟಿ ಮೂಲೆಯನ್ನು ಸಂಪರ್ಕಿಸುವ ರಸ್ತೆ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಮೂಲಕ ಮರುನಿರ್ಮಾಣವಾಗಿ ನಾಲ್ಕು ವರ್ಷ ಮುಗಿಯುವ ಮೊದಲೇ ಸಂಪೂರ್ಣ ಹದೆಗೆಟ್ಟು ಹೋಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಸರಿಸುಮಾರು 2009 ಫೆಬ್ರವರಿಯಲ್ಲಿ ಕಾಮಗಾರಿ ಆರಂಭಿಸಿ ಏಪ್ರಿಲ್ ಮೊದಲ ವಾರದಲ್ಲಿ ಡಾಂಬರೀಕರಣದ ಕಾಮಗಾರಿಯನ್ನು ಮುಗಿಸಲಾಗಿತ್ತು. ಮಳೆ ಬರುವಿಕೆಗೂ ಮೊದಲೇ ತರಾತುರಿಯಲ್ಲಿ ಮುಗಿಸಿದ ಗುತ್ತಿಗೆದಾರ ಡಾಂಬರೀಕರಣವನ್ನು ನಿಗದಿಪಡಿಸಿದ ರೀತಿಯಲ್ಲಿ ನಡೆಸದೆ ಬಹಳ ತೆಳುವಾಗಿ ಮಾಡುತ್ತಿದ್ದಾರೆ ಎಂದು ಕಾಮಗಾರಿಯ ಸಮಯವೇ ಸಾರ್ವಜನಿಕರಿಂದ ಆರೋಪಗಳು ಕೇಳಿಬರುತ್ತಿತ್ತು.
ಆದರೆ, ಮಳೆ ಮುಗಿದ ಬಳಿಕ ಮತ್ತೆ ಒಂದು ಲೇಯರ್ ಹಾಕಲಿದೆ ಎಂಬ ಮಾತುಗಳು ಕೇಳಿಬರುತ್ತಿದ್ದುದರಿಂದ ಆರೋಪಗಳು ಅಲ್ಲಿಗೇ ತಣ್ಣಗಾದವು. ಮಳೆಗಾಲದ ಬಳಿಕ ಮೋರಿಗಳಿಗೆ ಸುಣ್ಣ ಬಣ್ಣ ಬಳಿದು, ತಿರುವುಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸಿದ್ದು ಬಿಟ್ಟರೆ ಡಾಂಬರೀಕರಣ ನಡೆಸುವುದು ಕಂಡುಬರಲಿಲ್ಲ. ಒಂದು ವರ್ಷವಾಗುತ್ತಿದ್ದಂತೆ ಕೆಲವು ಕಡೆ ಡಾಂಬರ್ ಎದ್ದು ಹೋಗಿ ಹೊಂಡಗಳು ಪ್ರತ್ಯಕ್ಷವಾಗತೊಡಗಿದ್ದವು. ಅದನ್ನು ತಕ್ಷಣ ತೇಪೆ ಕಾರ್ಯ ಮಾಡಿ ಮುಚ್ಚಲಾಯಿತಾದರೂ ಮರು ಡಾಂಬರೀಕರಣ ಮಾಡುವುದು ಕಾಣಲಿಲ್ಲ. ಈ ಬಗ್ಗೆ ಕೇಳಿದರೆ ಗುತ್ತಿಗೆದಾರ ಅಕ್ರಮ ಸಾಗಾಟದ ಲಾರಿಗಳ ಭರದಿಂದ ಡಾಂಬರ್ ಎದ್ದು ಹೋಗುತ್ತಿದೆ ಎಂದು ಆರೋಪಿಸುತ್ತಿದ್ದರೆ, ಸಾರ್ವಜನಿಕರು ಕಳಪೆ ಕಾಮಗಾರಿಯಿಂದ ಎದ್ದುಹೋಗುತ್ತಿದೆ ಎಂದು ಹೇಳುತ್ತಿದ್ದಾರೆ. ಸದ್ಯ ರಸ್ತೆ ಸಂಪೂರ್ಣ ಹದೆಗೆಟ್ಟು ಹೋಗಿದ್ದು, ವಾಹನ ಸವಾರರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.