ಗದ್ದೆಗಿಳಿದು ಬೇಸಾಯ ಪಾಠ ಕಲಿತ ವಿದ್ಯಾರ್ಥಿಗಳು
ಸುಳ್ಯ: ಬತ್ತದ ಕೃಷಿ ಅಪರೂಪವಾಗುತ್ತಿರುವ ಈ ದಿನಗಳಲ್ಲಿ ಶಾಲಾ ಮಕ್ಕಳನ್ನೇ ಗದ್ದೆಗಿಳಿಸಿ ಪ್ರಾತ್ಯಕ್ಷಿಕೆ ಮೂಲಕ ಬತ್ತದ ಕುರಿತು ಅರಿವು ಮತ್ತು ಬೇಸಾಯದ ಪಾಠ ಹೇಳಿಕೊಟ್ಟ ಅಪರೂಪದ ಕಾರ್ಯಕ್ರಮ ಬುಧವಾರ ಸುಳ್ಯ ನಗರದ ಶಾಲೆಯೊಂದರಲ್ಲಿ ನಡೆಯಿತು.
ಸುಳ್ಯದ ಕೊಡಿಯಾಲಬೈಲು ಮಹಾತ್ಮ ಗಾಂಧಿ ಮಲ್ನಾಡ್ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಈ ಬೇಸಾಯದ ಪಾಠ ದೊರೆಯಿತು. ದಿನಂಪ್ರತಿ ತರಗತಿಯ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಪಾಠ ಕೇಳುವ ವಿದ್ಯಾರ್ಥಿಗಳು ಖುಷಿಯಿಂದ ಗದ್ದೆಗಳಿದು ತಾವೇ ಬೇಸಾಯ ಮಾಡಿ ಸಂಭ್ರಮಿಸಿದರು.
ಬತ್ತ ಕೃಷಿ ಮಾಹಿತಿ, ಪಾಠ: ಸ್ಥಳೀಯ ಕೃಷಿಕ ಪುರುಷೋತ್ತಮ ಅಮೈ ಎಂಬವರ ಗದ್ದೆಯಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದ ತನಕ ವಿದ್ಯಾರ್ಥಿಗಳು ಬೇಸಾಯದ ಪಾಠ ಕಲಿತರು. ಅಮೈ ಅವರು ಮಕ್ಕಳಿಗೆ ಬತ್ತ ಕೃಷಿಯ ಕುರಿತು ಸಂಪೂರ್ಣ ಮಾಹಿತಿ ಪಡೆದುಕೊಂಡರು. ಮಕ್ಕಳೇ ನೇಜಿ ತೆಗೆದು, ನಾಟಿ ಮಾಡಿದರು, ಹಲಗೆ ಮೆಟ್ಟಿದರು. ಇದರೊಂದಿಗೆ ಟಿಲ್ಲರ್ ಮೂಲಕ ಗದ್ದೆ ಉಳುವ ಪಾಠವನ್ನೂ ಪಡೆದುಕೊಂಡರು.
ಮಕ್ಕಳೊಂದಿಗೆ ಶಿಕ್ಷಕರು ಕೂಡಾ ಬೇಸಾಯದ ಕಾರ್ಯದಲ್ಲಿ ಪಾಲ್ಗೊಂಡರು. ಸ್ಥಳೀಯ ಜನರು, ಕೂಲಿ ಕಾರ್ಮಿಕರು ಜತೆ ಸೇರಿಕೊಂಡು 'ಓ ಬೇಲೆ ' ಹಾಡಿದರು.
ಮಹಾತ್ಮಗಾಂಧಿ ಮಲ್ನಾಡ್ ಪ್ರೌಢಶಾಲೆ ಮತ್ತು ಸುಳ್ಯ ಪಯಸ್ವಿನಿ ಜೇಸಿ ಈ ಕಾರ್ಯಕ್ರಮ ಸಂಘಟಿಸಿದ್ದರು. ದ.ಕ. ಜಿಲ್ಲಾ ಪತ್ರಕರ್ತರ ಸಂಘದ ಗ್ರಾಮಾಂತರ ಕಾರ್ಯದರ್ಶಿ ಹರೀಶ್ ಬಂಟ್ವಾಳ್ ಉದ್ಘಾಟಿಸಿದರು. ಗೌಡ ಯುವ ಸೇವಾ ಸಂಘದ ಅಧ್ಯಕ್ಷ ದಿನೇಶ್ ಮಡಪ್ಪಾಡಿ ಅಧ್ಯಕ್ಷತೆ ವಹಿಸಿದ್ದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ದುರ್ಗಾಕುಮಾರ್ ನಾಯರ್‌ಕೆರೆ, ಪತ್ರಕರ್ತ ಗಂಗಾಧರ ಮಟ್ಟಿ, ಸುಳ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಬಾರ ಪ್ರಾಂಶುಪಾಲ ದಾಮೋದರ ಕಣಜಾಲು ಇದ್ದರು.
--