ಮೂರ್ನಾಡು: ವಾಹನ ಅಡ್ಡಾದಿಡ್ಡಿ ನಿಲುಗಡೆ ವಿರುದ್ಧ ಕ್ರಮ
ಮೂರ್ನಾಡು: ಪಟ್ಟಣದಲ್ಲಿ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಿದರೆ ಗುರುವಾರದಿಂದ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುತ್ತದೆ ಎಂದು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಶ್ರೀಕಾಂತ್ ಆದೇಶ ಹೊರಡಿಸಿರುವುದಾಗಿ ಮೂರ್ನಾಡು ಪೊಲೀಸ್ ಉಪಠಾಣಾಧಿಕಾರಿ ಬೋಜಪ್ಪ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವಾಹನ ದಟ್ಟಣೆ ದಿನೇದಿನೇ ಹೆಚ್ಚಾಗುತ್ತಿದ್ದು, ಪಟ್ಟಣದಲ್ಲಿ ವ್ಯವಸ್ಥಿತವಾಗಿ ತಿಂಗಳ ಮೊದಲ 15 ದಿನ ರಸ್ತೆಯ ಒಂದು ಬದಿಯಲ್ಲಿ ನಂತರದ 15 ದಿನಗಳು ರಸ್ತೆಯ ಮತ್ತೊಂದು ಬದಿಯಲ್ಲಿ ವಾಹನಗಳನ್ನು ನಿಲ್ಲಿಸಲು ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ರಸ್ತೆಯ ಉದ್ದಕ್ಕೂ ಸ್ಥಳಾವಕಾಶಗಳಿದ್ದರೂ ಕೂಡ ಪಟ್ಟಣಕ್ಕೆ ಆಗಮಿಸುವ ವಾಹನಗಳು ಎಲ್ಲೆಂದರಲ್ಲಿ ನಿಲ್ಲಿಸಿ ಮುಖ್ಯ ರಸ್ತೆಯಲ್ಲಿ ಸಾಗುವ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ವಿರಾಜಪೇಟೆ ಹಾಗೂ ಮಡಿಕೇರಿಗೆ ಸಾಗುವ ದೊಡ್ಡ ಹಾಗೂ ಸಣ್ಣ ವಾಹನಗಳು ಹಗಲು ರಾತ್ರಿಯೆನ್ನದೆ ಸಂಚರಿಸುತ್ತಿದ್ದು, ಬೆಳಗ್ಗೆ 8 ರಿಂದ ರಾತ್ರಿ 8 ಗಂಟೆವರೆಗೆ ವಾಹನಗಳ ದಟ್ಟಣೆ ಮುಖ್ಯ ರಸ್ತೆಯಲ್ಲಿ ನಿತ್ಯವೂ ಇದ್ದು, ಎಲ್ಲೆಂದರಲ್ಲಿ ನಿಲ್ಲಿಸುತ್ತಿರುವ ವಾಹನಗಳಿಂದ ಸಂಚರಕ್ಕೆ ತೊಡಕುಂಟಾಗುತ್ತಿದೆ ಎಂದಿದ್ದಾರೆ.
ನಿಯಮ ಉಲ್ಲಂಘನೆ: ಪಟ್ಟಣಕ್ಕೆ ಕಾರ್ಯ ನಿಮಿತ್ತ ಅನೇಕರು ವಾಹನಗಳಲ್ಲಿ ಬರುತ್ತಿರುವುದು ಕೂಡ ಹೆಚ್ಚಾಗುತ್ತಿದೆ. ಇಲ್ಲಿ ಯಾವ ವಾಹನಗಳನ್ನು ಎಲ್ಲಿ ಮತ್ತು ಹೇಗೆ ನಿಲ್ಲಿಸಬೇಕು ಎಂಬ ನಿಯಮ ಜಾರಿಯಲ್ಲಿದ್ದರೂ ಕೂಡ ಅನೇಕ ವಾಹನಗಳು ಈ ನಿಯಮಗಳನ್ನು ಪಾಲಿಸುತ್ತಿಲ್ಲ. ವಾಹನ ನಿಲುಗಡೆ ನಿಷೇಧ ಸ್ಥಳದಲ್ಲಿ ನಿಲ್ಲಿಸುವುದು ಅಥವಾ ಬಸ್ ನಿಲ್ದಾಣದಲ್ಲಿ ವಾಹನಗಳನ್ನು ನಿಲ್ಲಿಸುವುದು ನಿತ್ಯವೂ ನಡೆಯುತ್ತಿದೆ. ವಾಹನಗಳ ಸಂಚಾರ ಹೆಚ್ಚಿರುವುದರಿಂದ ನಿಷೇಧಿತ ಜಾಗದಲ್ಲಿ ವಾಹನಗಳನ್ನು ನಿಲ್ಲಿಸುವುದರಿಂದ ಆಗಾಗ್ಗೆ ಟ್ರಾಫಿಕ್ ಜಾಮ್ ಆಗುತ್ತಿದೆ ಎಂದು ತಿಳಿಸಿದ್ದಾರೆ.
ವಾಹನಗಳು ಹಾಗೂ ಸಾರ್ವಜನಿಕರ ಓಡಾಟಕ್ಕೆ ತೊಂದರೆಗಳು ಉಂಟಾಗುವಂತೆ ಅಡ್ಡಾದಿಡ್ಡಿ ವಾಹನಗಳನ್ನು ನಿಲ್ಲಿಸಿದರೆ, ನಾಲ್ಕು ಚಕ್ರ ವಾಹನ ನಿಲ್ಲಿಸುವ ಸ್ಥಳದಲ್ಲಿ ದ್ವಿಚಕ್ರ ವಾಹನಗಳನ್ನು ಅಥವಾ ದ್ವಿಚಕ್ರ ವಾಹನಗಳು ನಿಲ್ಲಿಸಲು ಸೂಚಿಸಿದ ಸ್ಥಳದಲ್ಲಿ ನಾಲ್ಕು ಚಕ್ರ ವಾಹನಗಳನ್ನು ನಿಲ್ಲಿಸುವುದು, ವಾಹನ ನಿಲುಗಡೆ ನಿಷೇಧ ಸ್ಥಳದಲ್ಲಿ ನಿಲ್ಲಿಸುವ ವಾಹನಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಪೊಲೀಸ್ ಇಲಾಖೆ ವತಿಯಿಂದ ಕ್ರಮ ಜರುಗಿಸಲಾಗುತ್ತದೆ ಎಂದು ಹೇಳಿದರು.
ವಿವಿಧ ಹಂತದಲ್ಲಿ ದಂಡ: ಇಂತಹ ವಾಹನಗಳಿಗೆ ಕನಿಷ್ಠ ರು. 300 ರಿಂದ ರು. 3000 ವರೆಗೆ ವಿವಿಧ ಹಂತದಲ್ಲಿ ದಂಡ ವಿಧಿಸಲಾಗುವುದು. ಈ ಕಟ್ಟುನಿಟ್ಟಿನ ನಿಯಮ ಆ. 1ರಿಂದ ಜಾರಿಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಈಗಾಗಲೇ ಪಟ್ಟಣದ ಬಸ್ ನಿಲ್ದಾಣದಲ್ಲಿ 4 ಆಟೋ ರಿಕ್ಷಾಗಳಿಗೆ ನಿಲುಗಡೆಗೆ ಸ್ಥಳಾವಕಾಶ ನೀಡಲಾಗಿದೆ. ಉಳಿದ ಆಟೋ ರಿಕ್ಷಾಗಳು ಸಹಕಾರ ಸ್ಪೋರ್ಟ್ಸ್ ಕ್ಲಬ್ ಮೈದಾನದ ಎದುರು ಮತ್ತು ಸುಗುಣ ಬಾರ್ ಪಕ್ಕದಲ್ಲಿ ನಿಲುಗಡೆಗೆ ಸ್ಥಳ ಸೂಚಿಸಲಾಗಿದೆ. ಆಟೋ ರಿಕ್ಷಾಗಳು ನಿಲುಗಡೆ ಸ್ಥಳವನ್ನು ಬಿಟ್ಟು ನಾಲ್ಕು ಚಕ್ರ ಹಾಗೂ ದ್ವಿಚಕ್ರ ವಾಹನಗಳ ನಿಲುಗಡೆ ಸ್ಥಳದಲ್ಲಿ ನಿಲ್ಲಿಸುವಂತಿಲ್ಲ ಎಂದರು.
ಗ್ರಾಮ ಪಂಚಾಯಿತಿ ಕಚೇರಿಯ ಮುಂಭಾಗ ಹಾಗೂ ವಿಸ್ಮಯ ಕಾಂಪ್ಲೆಕ್ಸ್ನ ಮುಂಭಾಗದಲ್ಲಿ ದ್ವಿಚಕ್ರ ವಾಹನಗಳ ನಿಲುಗಡೆಗೆ ಹಾಗೂ ಪಿಕ್ಅಪ್, ಗೂಡ್ಸ್ ಆಟೋ ಮತ್ತು ವ್ಯಾನ್ಗಳು ವಿ.ಎಸ್.ಎಸ್.ಎನ್. ಬ್ಯಾಂಕ್ ಬಳಿ ಸ್ಥಳ ನೀಡಲಾಗಿದೆ. ಇನ್ನುಳಿದಂತೆ ಪಟ್ಟಣಕ್ಕೆ ಆಗಮಿಸುವ ವಾಹನಗಳು ರಸ್ತೆಯ ಯಾವ ಬದಿಯಲ್ಲಿ ವಾಹನಗಳು ನಿಲುಗಡೆಗೊಂಡಿದೆ ಎಂಬುವುದನ್ನು ತಿಳಿದು, ಇಲ್ಲವೇ ಸೂಚನಾ ಫಲಕಗಳನ್ನು ಗಮನಿಸಿ ವಾಹನಗಳನ್ನು ನಿಲ್ಲಿಸಬಹುದಾಗಿದೆ ಎಂದು ತಿಳಿಸಿದ್ದಾರೆ.